ಹೊಸದಿಲ್ಲಿ/ಬೆಂಗಳೂರು: “ಭಾರತದಾದ್ಯಂತ ರೈಲುಗಳನ್ನು ಹಳಿ ತಪ್ಪಿಸಿ, ದಾಳಿ ನಡೆಸಿ, ಕುಕ್ಕರ್ ಬಾಂಬ್, ಪೆಟ್ರೋಲಿಯಂ ಲೈನ್‌ಗಳನ್ನು ಸ್ಫೋಟಿಸಿ ಹಾಗೂ ಹಿಂದೂ ನಾಯಕರನ್ನು ಹತ್ಯೆ ಮಾಡಿ’… ಹೀಗೆಂದು ಪಾಕಿಸ್ಥಾನ ಮೂಲದ ಐಸಿಸ್ ಉಗ್ರ ಫರ್ಹತುಲ್ಲಾ ಘೋರಿ ಭಾರತದಲ್ಲಿರುವ ಉಗ್ರರ ಸ್ಲೀಪರ್ ಸೆಲ್‌ಗಳಿಗೆ ಕರೆ ನೀಡಿದ್ದಾನೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಐಇಡಿ ಸ್ಫೋಟದ ಕುತಂತ್ರಿಯಾಗಿರುವ ಈತ ಟೆಲಿಗ್ರಾಂ ವೀಡಿಯೋ ಮೂಲಕ ಈ ಕರೆ ನೀಡಿದ್ದು, ಭಾರತೀಯ ಗುಪ್ತ ಚರ ಸಂಸ್ಥೆಗಳು ಚುರುಕಾಗಿವೆ.
ದೇಶಾದ್ಯಂತ ರೈಲುಗಳನ್ನು ಹಳಿ ತಪ್ಪಿಸುವಂತೆ ಕರೆ ನೀಡಿದ್ದಾನೆ. ಪ್ರಶರ್ ಕುಕ್ಕರ್ ಬಳಸಿ ಹೇಗೆಲ್ಲ ಬಾಂಬ್ ಸ್ಫೋಟಿಸಬಹುದೆಂದು ವಿವರಿಸಿದ್ದಾನೆ. ಜತೆಗೆ ಹಿಂದೂ ನಾಯಕರನ್ನೂ ಗುರಿಯಾಗಿಸಿ ದಾಳಿ ನಡೆಸಿ ಎಂದೂ ಪ್ರೇರೇಪಿಸಿದ್ದಾನೆ ಎಂದು ಗುಪ್ತ ಚರ ಮೂಲಗಳು ತಿಳಿಸಿವೆ.
ತನಿಖಾ ಸಂಸ್ಥೆಗಳ ನಡುಗಿಸಿ ಭಾರತದ ತನಿಖಾ ಸಂಸ್ಥೆಗಳ ಬಗ್ಗೆಯೂ ಘೋರಿ ಮಾತನಾಡಿದ್ದು, “ಭಾರತ ಸರಕಾರವು ಜಾರಿ ನಿರ್ದೇಶನಾಲಯ, ರಾಷ್ಟ್ರೀಯ ತನಿಖಾ ಸಂಸ್ಥೆಗಳ (ಎನ್‌ಐಎ) ಮೂಲಕ ಸ್ಲೀಪರ್ ಸೆಲ್‌ಗಳ ಆಸ್ತಿ ಜಪ್ತಿ ಮಾಡಿ ನಮ್ಮ ಬಲ ಕುಗ್ಗಿಸುತ್ತಿದೆ. ಆದರೆ ನಾವು ದಾಳಿಗಳ ಮೂಲಕ ವಾಪಸಾಗಿ ಭಾರತ ಸರಕಾರವನ್ನು ನಡುಗಿಸಬೇಕು’ ಎಂದೂ ಹೇಳಿದ್ದಾನೆ ಎನ್ನಲಾಗಿದೆ. ಇನ್ನು ಇತ್ತೀಚೆಗಷ್ಟೇ (ಆ. 17ರಂದು) ಸಬರಮತಿ ಎಕ್ಸ್‌ಪ್ರೆಸ್ ರೈಲು ಉತ್ತರಪ್ರದೇಶದ ಕಾನ್ಪುರದಲ್ಲಿ ಹಳಿ ತಪ್ಪಿತ್ತು. ಅದರ ಬೆನ್ನಲ್ಲೇ ತೂತುಕುಡಿ ಎಗೊರ್ ಪರ್ಲ್ ಸಿಟಿ ಎಕ್ಸ್‌ಪ್ರೆಸ್ ರೈಲು ಕೂಡ ಹಳಿ ತಪ್ಪಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಇದೀಗ ಘೋರಿ ಕರೆಗೂ ಈ ಘಟನೆಗಳಿಗೂ ನಂಟು ಇರಬಹುದೇ ಎಂಬ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲೂ ತನಿಖೆ ನಡೆಯುತ್ತಿವೆ.
ಯಾರೀತ ಘೋರಿ?
ಪಾಕಿಸ್ಥಾನ ಗುಪ್ತಚರ ಸಂಸ್ಥೆಯ ನೆರವಿನೊಂದಿಗೆ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಚು ರೂಪಿಸಿದ್ದು ಮಾತ್ರವಲ್ಲದೆ, ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಉಗ್ರರೊಂದಿಗೂ ಫರ್ಹತುಲ್ಲಾ ಘೋರಿ ಅಲಿಯಾಸ್ ಅಬು ಸುಫಿಯಾನ್ ಸಂಪರ್ಕ ಹೊಂದಿ ದ್ದಾನೆ. ಅಲ್ಲದೇ 2002ರ ಅಕ್ಷರ ಧಾಮ ದೇಗುಲ ದಾಳಿ (30 ಸಾವು), ಹೈದರಾಬಾದ್‌ನ ಕಾರ್ಯ ಪಡೆ ಮೇಲೆ 2005ರಲ್ಲಿ ನಡೆದ ದಾಳಿಯಲ್ಲೂ ಈತನ ಕೈವಾಡವಿದೆ. ಭಾರತದಲ್ಲಿ ನಡೆದ ಹಲವು ಪ್ರಮುಖ ದಾಳಿಗಳ ಹಿಂದೆಯೂ ಈತನಿದ್ದು, ಭಾರತದಲ್ಲಿ ಉಗ್ರರ ನೇಮಕಾತಿಯ ಉಸ್ತುವಾರಿಯೂ ಈತನೇ ವಹಿಸಿಕೊಂಡಿದ್ದಾನೆ ಎನ್ನಲಾಗಿದೆ. ಪುಣೆ ಐಸಿಸ್ ಮಾಡ್ನೂಲ್ ಪ್ರಕರಣದಲ್ಲೂ ದಿಲ್ಲಿ ಪೊಲೀಸರು ಈತನ ಹೆಸರು ಉಲ್ಲೇಖಿಸಿದ್ದರು.