ಲಕ್ನೋ: ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ಇಂಡಿಯಾ ಒಕ್ಕೂಟದಿಂದ ವಿದಾಯ ಹೇಳುವ ಏಟು ನೀಡಿರುವಂತೆಯೇ, ಉತ್ತರ ಪ್ರದೇಶದಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್ ನಡುವೆ ಸ್ಥಾನ ಹೊಂದಾಣಿಕೆ ವಿಚಾರದಲ್ಲಿ ಸಮಸ್ಯೆ ಉಂಟಾಗಿದೆ. 80 ಕ್ಷೇತ್ರಗಳಿರುವ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಕೇವಲ 11 ಸ್ಥಾನಗಳನ್ನು ನೀಡುತ್ತೇವೆ. ಇದಕ್ಕಿಂತ ಹೆಚ್ಚಿನ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಎಸ್‌ಪಿ ಮುಖ್ಯಸ್ಥ ಅಖೀಲೇಶ್ ಯಾದವ್ ಖಂಡತುಂಡವಾಗಿ ಹೇಳಿದ್ದಾರೆ. ಇಷ್ಟು ಕಡಿಮೆ ಸ್ಥಾನಗಳನ್ನು ಪಡೆಯಲು ಕಾಂಗ್ರೆಸ್‌ಗೆ ಸುತಾರಾಂ ಸಮ್ಮತಿಯಿಲ್ಲ. ಒಂದು ವೇಳೆ ಒಪ್ಪಿಕೊಳ್ಳದಿದ್ದರೆ ಪ್ರತ್ಯೇಕವಾಗಿ ಸ್ಪರ್ಧೆ ಮಾಡುವ ಬಗ್ಗೂ ಮಾತಾಡಿದ್ದಾರೆ.
2 ಪಕ್ಷಗಳ ನಡುವೆ ಸ್ಥಾನ ಹೊಂದಾಣಿಕೆ ವಿಫಲಗೊಂಡರೆ, ಪಶ್ಚಿಮ ಬಂಗಾಲ, ಬಿಹಾರ, ಪಂಜಾಬ್, ಮಹಾರಾಷ್ಟ್ರದ ಬಳಿಕ ಉತ್ತರ ಪ್ರದೇಶದಲ್ಲಿಯೂ ಹೊಡೆತ ಬೀಳಲಿದೆ.
ಕಾಂಗ್ರೆಸ್‌ಗೆ 11 ಸೀಟು ಕೊಡ್ತೇವೆ: ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್‌ಗೆ ಉತ್ತರ ಪ್ರದೇಶದಲ್ಲಿ 11 ಸೀಟುಗಳನ್ನು ಕೊಡಲಿದ್ದೇವೆ ಎಂದಿದ್ದಾರೆ ಎಸ್‌ಪಿ ಮುಖ್ಯಸ್ಥ ಅಖೀಲೇಶ್ ಯಾದವ್. ರಾಷ್ಟ್ರೀಯ ಲೋಕ ದಳ(ಆರ್‌ಎಲ್‌ಡಿ)ಕ್ಕೆ ಈಗಾಗಲೇ 7 ಸೀಟುಗಳನ್ನು ನೀಡುವ ಭರವಸೆ ನೀಡಿದ್ದೇವೆ. ಉಳಿದ 62 ಕ್ಷೇತ್ರಗಳಲ್ಲಿ ಎಸ್‌ಪಿ ಸ್ಪರ್ಧಿಸಲಿದೆ. ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಮೈತ್ರಿಕೂಟದಲ್ಲಿ ಪರಸ್ಪರ ಸಹಕಾರ ಅಗತ್ಯ. ಚುನಾವಣೆಯಲ್ಲಿ ನಮ್ಮ ಪಿಡಿಎ (ಪಿಚೆx-ಹಿಂದುಳಿದ, ದಲಿತ, ಅಲ್ಪಸಂಖ್ಯಾಕ) ತಂತ್ರಗಾರಿಕೆ ಮೂಲಕ ನಾವು ಇತಿಹಾಸವನ್ನು ಬದಲಿಸಲಿದ್ದೇವೆ’ ಎಂದು ಎಸ್‌ಪಿ ಅಧ್ಯಕ್ಷ ಅಖೀಲೇಶ್ ಯಾದವ್ ಪ್ರತಿಪಾದಿಸಿದ್ದಾರೆ. ಇಂಡಿಯಾ ಒಕ್ಕೂಟಕ್ಕೆ ಇದೊಂದು ಉತ್ತಮ ಬೆಳವಣಿಗೆ ಎಂದು ಹೇಳಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಜಯ್ ರೈ, “ಸೀಟು ಹಂಚಿಕೆ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ಹೇಳಿದ್ದಾರೆ.
ಒಗ್ಗಟ್ಟು ಬೇಕು: ಉತ್ತರ ಭಾರತದಲ್ಲಿ ಒಕ್ಕೂಟ ಪತನದ ಹಾದಿಯಲ್ಲಿದ್ದರೆ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತಮಿಳುನಾಡಿನ ಮಿತ್ರಪಕ್ಷ ಡಿಎಂಕೆ ಮಾತ್ರ ಒಗ್ಗಟ್ಟಿನ ಮಂತ್ರ ಪಠಿಸಿದೆ. ತಿರುಚಿರಾಪಳ್ಳಿ ಕಾರ್ಯಕ್ರಮದಲ್ಲಿ ಸಿಎಂ ಎಂ.ಕೆ.ಸ್ಟಾಲಿನ್ “ಚುನಾವಣೆಯಲ್ಲಿ ಇಂಡಿಯಾ ಒಗ್ಗಟ್ಟಿನಿಂದ ಬಿಜೆಪಿಯನ್ನು ಸೋಲಿಸಬೇಕು ಎಂದಿದ್ದಾರೆ.
ವಯನಾಡ್‌ನಿಂದಲೇ ರಾಹುಲ್ ಗಾಂಧಿ ಸ್ಪರ್ಧೆ: ಕೈ ಸಂಸದ ಕೆ.ಮುರಳೀಧರನ್ ಸ್ಪಷ್ಟನೆ
ಕಲ್ಲಿಕೋಟೆ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಯನಾಡ್ ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ. ಹೀಗೆಂದು ಕೇರಳದ ಕಾಂಗ್ರೆಸ್ ಸಂಸದ ಕೆ.ಮುರಳೀಧರನ್ ಹೇಳಿದ್ದಾರೆ. ಕಣ್ಣೂರು ಕ್ಷೇತ್ರ ಹೊರತುಪಡಿಸಿ, ಹಾಲಿ ಸಂಸದರೆಲ್ಲರು ತಮ್ಮ ಸ್ವಂತ ಕ್ಷೇತ್ರಗಳಿಂದಲೇ ಸ್ಪರ್ಧಿಸಲಿದ್ದಾರೆ. ಪ್ರಸ್ತುತ ರಾಜಕೀಯ ವಾತಾವರಣದ ಪ್ರಕಾರ, ರಾಹುಲ್ ಅವರು ವಯನಾಡ್ ನಿಂದಲೇ ಸ್ಪರ್ಧಿಸಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇದರಲ್ಲಿ ಯಾವುದೇ ಬದಲಾವಣೆ ಇರುವು ದಿಲ್ಲ’ ಎಂದು ಮಾಹಿತಿ ನೀಡಿದ್ದಾರೆ. ಇದಕ್ಕಿಂತ ಮೊದಲು ಅಮೇಠಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು.