Advertisement

Bengaluru: ರಾಜಧಾನಿಯಲ್ಲಿ ತಿಂಗಳ ಬಳಿಕ ಮಳೆ

12:39 PM Oct 04, 2024 | Team Udayavani |

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಎರಡು ದಿನಗಳಿಂದ ಮಳೆ ಬೀಳಲಾರಂಬಿಸಿದ್ದು, ರಸ್ತೆಗಳಲ್ಲಿ ಟ್ರಾμಕ್‌ ಜಾಮ್‌ನಿಂದ ಕೆಲ ಕಾಲ ವಾಹನ ಸವಾರರು ಪರದಾಡಿದರೆ, ಇನ್ನು ಕೆಲವು ಕಡೆ ಮರಗಳ ರೆಂಬೆ ರಸ್ತೆಗೆ ಬಿದ್ದು ಅವಾಂತರ ಉಂಟಾಗಿದೆ.

Advertisement

ಬೆಂಗಳೂರಿನಲ್ಲಿ ಕಳೆದೆರಡು ದಿನಗಳಲ್ಲಿ ಸದಾಶಿವನಗರ, ಆರ್‌.ಟಿ. ನಗರ, ನಾಗರಬಾವಿಯಲ್ಲಿ 2 ಮರಗಳು ಧರೆಗುರುಳಿವೆ. ರಸ್ತೆಗೆ ಬಿದ್ದಿದ್ದ ಮರಗಳನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದ್ದಾರೆ.

ಸೆಕೆಗೆ ಕಂಗೆಟ್ಟಿದ್ದ ಬೆಂಗಳೂರಿಗೆ ಒಂದು ತಿಂಗಳ ನಂತರ ಬಹುತೇಕ ಕಡೆ ಮಳೆ ಸುರಿದಿದೆ. ಬುಧವಾರ ಹಾಗೂ ಗುರುವಾರ ಸುರಿದ ಮಳೆಯು ತಂಪೆರೆದಿದೆ. ಅ.4 ಹಾಗೂ 5ರಂದು ಬೆಂಗಳೂರಿನಲ್ಲಿ ಅತ್ಯಧಿಕ ಮಳೆಯಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಹಳದಿ ಅಲರ್ಟ್‌ ಘೋಷಣೆ ಮಾಡಿದೆ.

ಗುರುವಾರ ಮಧ್ಯಾಹ್ನ ಆಗುತ್ತಿದ್ದಂತೆ ಸಿಟಿ ಮಂದಿಗೆ ವರುಣನ ದರ್ಶನವಾಗಿತ್ತು. ದಿಢೀರ್‌ ಎಂಟ್ರಿಕೊಟ್ಟ ಮಳೆ ತುಂತುರು ಹನಿ ಸಿಡಿಸಿ ಮರೆಯಾಗಿತ್ತು. ಆದರೆ ಸಣ್ಣ ಮಳೆಗೂ ನಗರದ ಹಲವು ರಸ್ತೆಗಳು ನೀರು ತುಂಬಿಕೊಂಡಿದ್ದವು.

Advertisement

ಕೆ.ಆರ್‌.ಸರ್ಕಲ್ ಹೊಳೆಯಂತೆ ನೀರು ಹರಿಯುತ್ತಿದ್ದರೆ, ಹೆಬ್ಟಾಳದಲ್ಲಿ ರಸ್ತೆಯಲ್ಲಿ ನೀರು ನಿಂತು ಸವಾರರು ಪರದಾಡಿದ್ದಾರೆ. ಕೆ.ಆರ್‌. ಮಾರುಕಟ್ಟೆ ಎಂ.ಜಿ.ರಸ್ತೆ, ಶಾಂತಿನಗರ, ಮೆಜೆಸ್ಟಿಕ್‌, ಯಶವಂತಪುರ, ಮಲ್ಲೇಶ್ವರ, ವೈಟ್‌ಫೀಲ್ಡ್‌, ಕೋರಮಂಗಲ, ಮಾರತ್ತಹಳ್ಳಿ, ಯಲಹಂಕ, ಕೆಂಗೇರಿ, ತುಮಕೂರು ರಸ್ತೆ ಸುತ್ತಮುತ್ತಲೂ ಟ್ರಾಫಿಕ್‌ ಜಾಮ್‌ ಅಧಿಕವಾಗಿತ್ತು.

ಪಾಪಾರೆಡ್ಡಿಪಾಳ್ಯದಲ್ಲಿ ರಸ್ತೆ ಬ್ಲಾಕ್‌: ಇನ್ನು ಪಾಪಾರೆಡ್ಡಿಪಾಳ್ಯದಲ್ಲಿ ಮುಂಜಾನೆ ಮರವೊಂದು ರಸ್ತೆಗೆ ಉರುಳಿಬಿದ್ದ ಪರಿಣಾಮ ರಸ್ತೆ ಸಂಪೂರ್ಣವಾಗಿ ಬ್ಲಾಕ್‌ ಆಗಿತ್ತು. ಗುರುವಾರ ಮುಂಜಾನೆ 5 ಗಂಟೆಗೆ ಮರ ಬಿದ್ದ ಪರಿಣಾಮ ಈ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳೆಲ್ಲ ಪರ್ಯಾಯ ರಸ್ತೆ ಅವಲಂಬಿಸಬೇಕಾಯಿತು. ಇನ್ನು ಬೆಂಗಳೂರಿನ ಶೆಟ್ಟಿಹಳ್ಳಿ ಶ್ರೀದೇವಿ ಬಡಾವಣೆಯಲ್ಲಿ 15ಕ್ಕೂ ಹೆಚ್ಚು ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮನೆಗಳಲ್ಲಿ ನೀರು, ಕೆಸರು ತುಂಬಿದ್ದು, ಮನೆಗಳನ್ನು ಸ್ವತ್ಛಗೊಳಿಸಲು ಮನೆ ಹರಸಾಹಸ ಪಡಬೇಕಾಯಿತು.

ಕಾರ್ತಿಕ್‌ ನಗರದಲ್ಲಿ ರಸ್ತೆಯ ಒಂದು ಭಾಗ ಕುಸಿತ

ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಮಹದೇವಪುರದ ಕಾರ್ತಿಕ್‌ ನಗರದ ಬಳಿಯ ಹೊರವರ್ತುಲ ರಸ್ತೆಯ ಒಂದು ಭಾಗ ಕುಸಿದು ಗುರುವಾರ ಬೆಳಗ್ಗೆ ಸಂಚಾರ ವ್ಯತ್ಯಯ ಉಂಟಾಯಿತು. ಇದಕ್ಕೆ ಸ್ಪಂದಿಸಿದ ಬೆಂಗಳೂರು ಸಂಚಾರಿ ಪೊಲೀಸರು ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಸುಗಮ ಸಂಚಾರಕ್ಕೆ ಎಡೆಮಾಡಿಕೊಟ್ಟರು. ಈ ರಸ್ತೆಗಳಲ್ಲಿ ಪೀಕ್‌ ಅವರ್‌ ಸಮಯಗಳಲ್ಲಿ ಭಾರಿ ದಟ್ಟಣೆ ಉಂಟಾಗುತ್ತಿತ್ತು.

ಈ ನಡುವೆ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಅನುಚೇತ್‌ ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದು, “ಕಾರ್ತಿಕ್‌ ನಗರದಲ್ಲಿ ಓಆರ್‌ಆರ್‌ ಸರ್ವಿಸ್‌ ರಸ್ತೆಯ ಒಂದು ಭಾಗ ಕುಸಿದಿದೆ. ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ಬದಲಾಯಿಸಲಾಗಿದೆ. ದುರಸ್ತಿ ಕಾರ್ಯ ನಡೆಯುತ್ತಿದ್ದು, ಶೀಘ್ರ ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next