ಉತ್ತರ ಪ್ರದೇಶ: ಇದು ಸೋಶಿಯಲ್ ಮೀಡಿಯಾ ಜಮಾನ. ಫೋನ್,ಮೆಸೇಜ್ ಗಳಿಂದ ಸಂಬಂಧವೂ ಉಗಮವಾಗುತ್ತದೆ. ಅದೇ ರೀತಿ ಕೆಲವೊಮ್ಮೆ ಸಂಬಂಧಗಳು ಮುರಿದು ಹೋಗುವುದುಂಟು. ಆಗ್ರಾದಲ್ಲಿ ಸೋಶಿಯಲ್ ಮೀಡಿಯಾದಲ್ಲಿಯೇ ಮಾತುಕತೆ ಬೆಳೆದು ಮದುವೆಯಾದ ಘಟನೆಯೊಂದು ನಡೆದಿದೆ.
ಆಗ್ರಾದ ಬಾಮ್ರೋಲಿ ಕಟಾರ ಗ್ರಾಮದ ದೇವಾಲಯದಲ್ಲಿ ಈ ಮದುವೆ ನೆರವೇರಿದೆ. ವಿಶೇಷವೆಂದರೆ ಹುಡುಗಿ ನಮ್ಮ ದೇಶದವರಲ್ಲ. ಹುಡುಗ ನಮ್ಮ ದೇಶದವರು. ಇಬ್ಬರು ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದಾರೆ.
ಪಾಲೇಂದ್ರ ಸಿಂಗ್ ಆಗ್ರಾದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ವ್ಯಕ್ತಿ. ಕೋವಿಡ್ ನ ಮೊದಲ ಲಾಕ್ ಡೌನ್ ನಲ್ಲಿ ಪಾಲೇಂದ್ರ ಸಿಂಗ್ ಪಾಡ್ ಕಾಸ್ಟ್ ವೊಂದನ್ನು ಆರಂಭಿಸುತ್ತಾರೆ. ಅವರ ಪಾಡ್ ಕಾಸ್ಟ್ ಗೆ ಅಪಾರ ಕೇಳುಗರಿದ್ದರು. ಈ ಕೇಳುಗರಲ್ಲಿ ಮ್ಯಾಂಚೆಸ್ಟರ್(ಇಂಗ್ಲೆಂಡ್) ಮೂಲದ ಹನ್ನಾ ಪಾಲೇಂದ್ರ ಅವರ ಪಾಡ್ ಕಾಸ್ಟ್ ಕೇಳಿ ಫಿದಾ ಆಗುತ್ತಾರೆ. ದಿನಕಳೆದಂತೆ ಹನ್ನಾ ಹಾಗೂ ಪಾಲೇಂದ್ರ ಮಾತುಕತೆ ಹೆಚ್ಚಾಗುತ್ತದೆ. ಮಾತಿನ ಮೂಲಕ ಆತ್ಮೀಯತೆ ಬೆಳೆಯುತ್ತದೆ.
ಹನ್ನಾ ಹಾಗೂ ಪಾಲೇಂದ್ರ ತಮ್ಮ ಇಮೇಲ್ ಐಡಿ ಹಾಗೂ ಟೆಲಿಗ್ರಾಂ ಐಡಿಯನ್ನು ಪರಸ್ಪರ ಪಡೆದುಕೊಂಡು ಮಾತುಕತೆ ಆರಂಭಿಸುತ್ತಾರೆ. ಸ್ನೇಹ ಪ್ರೀತಿಗೆ ತಿರುಗುತ್ತದೆ. ನಾಡು – ನುಡಿ, ಆಚಾರ – ವಿಚಾರದ ಮಾತನ್ನು ಆಡುತ್ತಾರೆ.
ವೃತ್ತಿಯಲ್ಲಿ ನರ್ಸ್ ಆಗಿರುವ ಹನ್ನಾ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಪಾಲೇಂದ್ರ ಸೋಮವಾರ (ನ.7 ರಂದು) ದೇವಸ್ಥಾನದಲ್ಲಿ ಸಂಬಂಧಿಕರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾರತೀಯ ಸಂಸ್ಕೃತಿ, ಜೀವನ ಶೈಲಿ ಹಾಗೂ ಹಿಂದಿಯನ್ನು ಕಲಿಯಲು ಪ್ರಯತ್ನಿಸುತ್ತೇನೆ ಎಂದು ಹನ್ನಾ ಹೇಳುತ್ತಾರೆ.