ಮೈಸೂರು: ಹೆಬ್ಟಾಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ನಂಜನಗೂಡು-ಗುಂಡ್ಲುಪೇಟೆಯಲ್ಲಿಯೂ ಪುನರಾವರ್ತನೆಯಾಗಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.13ರ ಫಲಿತಾಂಶದ ನಂತರ ಸಿದ್ದರಾಮಯ್ಯ ಹಿಂದೆ ಸುತ್ತುತ್ತಿರುವವರ್ಯಾರು ಇರುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಹಡಗು ಮುಳುಗಿ ಹೋಗಲಿದೆ ಎಂದರು.
ಎಸ್.ಎಂ.ಕೃಷ್ಣ, ಜಯಪ್ರಕಾಶ ಹೆಗ್ಡೆ ಮೊದಲಾದವರು ಬಿಜೆಪಿಗೆ ಬಂದಿದ್ದಾರೆ. ಸೋನಿಯಾಗಾಂಧಿ ಅವರಿಗೆ ದೂರು ಕೊಡಲು ಎಚ್.ವಿಶ್ವನಾಥ್ ದೆಹಲಿಗೆ ಹೋಗಿದ್ದಾರೆ. ಇದೆಲ್ಲವನ್ನೂ ನೋಡಿದರೆ ಸಿದ್ದರಾಮಯ್ಯ ದುರಹಂಕಾರದ ಗರ್ವಭಂಗ ಆಗಲಿದೆ ಎಂದು ಹೇಳಿದರು.
ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಹೋಗಿ ಸಾಂತ್ವನ ಹೇಳಲು ಸಮಯ ಇಲ್ಲ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಉಪ ಚುನಾವಣೆಗಾಗಿ ಮೈಸೂರಲ್ಲಿ 8 ದಿನ ಠಿಕಾಣಿ ಹೂಡುತ್ತಾರೆ. ನಾಲ್ಕು ವರ್ಷ ನಿದ್ದೆ ಮಾಡಿ, ಈಗ ಎದ್ದು ಬಂದು ಎರಡೂ ಕ್ಷೇತ್ರಗಳನ್ನು ನಮಗೆ ಕೊಡಿ ಎನ್ನುತ್ತಿದ್ದಾರೆ.
ಸಾರ್ವತ್ರಿಕ ಚುನಾವಣೆ ಡಿಸೆಂಬರ್-ಜನವರಿ ತಿಂಗಳಲ್ಲಿ ಬಂದರೂ ಅಚ್ಚರಿ ಇಲ್ಲ. ಹೀಗಿರುವಾಗಿ ಇನ್ನ ಆರು ತಿಂಗಳಲ್ಲಿ ನೀವೇನು ಜಾದೂ ಮಾಡುತ್ತೀರಾ? ಉತ್ತರಪ್ರದೇಶ ಮುಖ್ಯಮಂತ್ರಿ ರೈತರ ಸಾಲಮನ್ನಾ ಮಾಡಿ ದೇಶಕ್ಕೆ ಮಾದರಿಯಾಗಿದ್ದಾರೆ. ನೀವೇಕೆ ಕೇಂದ್ರದತ್ತ ನೋಡುತ್ತೀರಿ ಎಂದು ಪ್ರಶ್ನಿಸಿದರು.
ರಾಜ್ಯದ ಕಾನೂನು- ಸುವ್ಯವಸ್ಥೆ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಗೃಹ ಇಲಾಖೆ ಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ ಎಂದು ಲೇವಡಿ ಮಾಡಿದರು. ಪೊಲೀಸರಿಗೆ ಗೃಹ ಸಚಿವರ್ಯಾರು ಎಂಬುದೇ ಗೊತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪರಮೇಶ್ವರ್, ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಈ ಮೂವರು ಗೃಹ ಇಲಾಖೆ ಮೇಲೆ ಹಿಡಿತ ಸಾಧಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.