ಹೊಸದಿಲ್ಲಿ : ಲಡಾಕ್‌ನ ಪಾಂಗೋಂಗ್ ಸರೋವರದ ದಂಡೆಯನ್ನು ಅತಿಕ್ರಮಿಸಿ ಭಾರತೀಯ ಪ್ರದೇಶವನ್ನು ಅತಿಕ್ರಮಿಸಿ ಬಂದ ಚೀನೀ ಸೇನೆಯನ್ನು ಭಾರತೀಯ ಸೈನಿಕರು “ಸಣ್ಣ ಜಟಾಪಟಿ’ಯ ಬಳಿಕ ತಡೆದು ಹಿಮ್ಮೆಟ್ಟಿಸಿದ ಬಳಿಕ ಇಂದು ಬುಧವಾರ ಲೇಹ್‌ನ ಚೂಶಾಲ್‌ನಲ್ಲಿ ಉಭಯ ದೇಶಗಳ ಸೇನಾಧಿಕಾರಿಗಳು ಸಭೆಯೊಂದನ್ನು ನಡೆಸುತ್ತಿದ್ದಾರೆ.
ಲಡಾಕ್‌ನಲ್ಲಿನ ಭಾರತ – ಚೀನ ಗಡಿಯಲ್ಲಿ ಉಭಯ ದೇಶಗಳ ಸೇನೆ ಶಾಂತಿ, ನೆಮ್ಮದಿಯನ್ನು ಕಾಯ್ದುಕೊಳ್ಳಲು ಪರಸ್ಪರ ಸಹಕರಿಸಬೇಕು ಎಂಬ ನಿರೀಕ್ಷೆಯೊಂದಿಗೆ ಸೇನಾಧಿಕಾರಿಗಳು ಈ ಸಭೆಯನ್ನು ನಡೆಸುತ್ತಿದ್ದಾರೆ.
ನಿನ್ನೆ ಭಾನುವಾರ ಬೆಳಗ್ಗೆ 6ರಿಂದ 9 ಗಂಟೆಯ ನಡುವೆ ಎರಡು ಬಾರಿ ಚೀನದ ಪೀಪಲ್ಸ್ ಲಿಬರೇಶನ್ ಆರ್ಮಿಯ ಯೋಧರು, ಫಿಂಗರ್ 4 ಮತ್ತು ಫಿಂಗರ್ 5 ತಾಣದಲ್ಲಿ ಭಾರತೀಯ ಗಡಿ ಪ್ರದೇಶದೊಳಗೆ ಅತಿಕ್ರಮಣ ನಡೆಸುವ ಯತ್ನ ಮಾಡಿದ್ದರು. ಕಟ್ಟೆಚ್ಚರ ವಹಿಸಿದ್ದ ಭಾರತೀಯ ಸೈನಿಕರು ಚೀನೀ ಸೈನಿಕರ ಈ ಅತಿಕ್ರಮಣ ಯತ್ನವನ್ನು ಪರಿಣಾಮಕಾರಿಯಾಗಿ ತಡೆದರು.
ಲಡಾಕ್‌ನ ಪಾಂಗೋಂಗ್ ಸರೋವರದ ಮೂರನೇ ಎರಡು ಭಾಗ ಚೀನದ ನಿಯಂತ್ರಣದಲ್ಲಿದೆಯಾದರೆ ಉಳಿದ ಮೂರನೇ ಒಂದು ಭಾಗ ಭಾರತದ ನಿಯಂತ್ರಣದಲ್ಲಿದೆ. ಆದರೆ ಈ ಇಡಿಯ ಪ್ರದೇಶ ತನಗೆ ಸೇರಿದ್ದೆಂದು ಚೀನ ಹೇಳಿಕೊಳ್ಳುತ್ತಿದೆ.
ಡೋಕ್‌ಲಾಂ ಮತ್ತು ಲಡಾಕ್ ನಲ್ಲಿನ ಮುಖಾಮುಖೀಯ ಹೊರತಾಗಿಯೂ ಗಡಿಯಲ್ಲಿನ ವಿವಿಧ ತಾಣಗಳಲ್ಲಿ ಕಾವಲು ನಿರತ ಚೀನೀ ಸೈನಿಕರಿಗೆ ಭಾರತೀಯ ಸೈನಿಕರು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಂಪ್ರದಾಯದಂತೆ ಸಿಹಿ ಹಂಚಿ ಸೌಹಾರ್ದ ಮೆರೆದಿರುವುದು ವಿಶೇಷವಾಗಿದೆ.