ರಾಜಸ್ಥಾನ್: ಜೋಧ್ ಪುರದ ಬಳಿಕ ಭಿಲ್ವಾರಾದಲ್ಲಿ ಕಳೆದ ರಾತ್ರಿ ಕೆಲವು ಅಪರಿಚಿತ ವ್ಯಕ್ತಿಗಳು ಇಬ್ಬರ ಮೇಲೆ ಹಲ್ಲೆ ನಡೆಸಿ, ಬೈಕ್ ಗೆ ಬೆಂಕಿಹಚ್ಚಿದ ಘಟನೆಯ ಹಿನ್ನೆಲೆಯಲ್ಲಿ 24ಗಂಟೆಗಳ ಕಾಲ ಇಂಟರ್ನೆಟ್ ಸೇವೆಯನ್ನು ಅಮಾನತುಗೊಳಿಸಿದ್ದು, ಜೋಧ್ ಪುರ ಕಮಿಷನರೇಟ್ ವ್ಯಾಪ್ತಿಯಲ್ಲಿ ಮೇ 6ರವರೆಗೆ ಕರ್ಫ್ಯೂ ವಿಸ್ತರಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮಂಗಳೂರು: ಡಿವೈಡರ್ ದಾಟಿ ಟ್ರಕ್ ಗೆ ಗುದ್ದಿದ ಕಾರು; ಓರ್ವ ಬಲಿ
ಭಿಲ್ವಾರಾದಲ್ಲಿ ಇಬ್ಬರ ಮೇಲೆ ಹಲ್ಲೆ ನಡೆಸಿ, ಬೈಕ್ ಗೆ ಬೆಂಕಿ ಹಚ್ಚಿರುವ ಪ್ರಕರಣ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಶೀಶ್ ಮೋದಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಘಟನೆ ನಡೆದ ಪ್ರದೇಶದಲ್ಲಿರುವ ಸಿಸಿಟಿವಿ ಫೂಟೇಜ್ ಅನ್ನು ಪರಿಶೀಲಿಸಲಾಗುತ್ತಿದೆ. ತನಿಖೆ ನಡೆಯುತ್ತಿರುವ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು ಎಂದು ಜಿಲ್ಲಾಧಿಕಾರಿ ಅಶೀಶ್ ಮನವಿ ಮಾಡಿಕೊಂಡಿರುವುದಾಗಿ ವರದಿ ಹೇಳಿದೆ.
ಮಂಗಳವಾರ ಈದ್ ಸಂಭ್ರಮಕ್ಕೂ ಮುನ್ನ ಜೋಧ್ ಪುರದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿ, ಹತ್ತು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಜಾಲೋರಿ ಗೇಟ್ ಸರ್ಕಲ್ ಬಳಿ ಸಂಭವಿಸಿದ ಘರ್ಷಣೆ ಮತ್ತು ಕಲ್ಲು ತೂರಾಟದಲ್ಲಿ ಐದು ಮಂದಿ ಪೊಲೀಸರು ಗಾಯಗೊಂಡಿದ್ದರು.