ಹೊಸದಿಲ್ಲಿ : ಪೆಟ್ರೋಲ್, ಬೆಲೆಯ ನಿರಂತರ ಏರಿಕೆಗೆ ನಲುಗಿರುವ ದೇಶದ ಜನತೆ ಈಗಿನ್ನು ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯನ್ನು ಸಹಿಸಿಕೊಳ್ಳಲು ಸಿದ್ಧರಾಗಬೇಕಾಗಿದೆ.
ಇಂದು ಶುಕ್ರವಾರದಿಂದಲೇ ಸಹಾಯಧನದ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 2.34 ರೂ. ಏರಿಸಲಾಗಿದೆ. ಜತೆಗೆ ಸಹಾಯಧನರಹಿತವಾದ ಎಲ್‌ಪಿಜಿ ಸಿಲಿಂಡರ್ ಬೆಲೆ 48 ರೂ. ಏರಿಸಲಾಗಿದೆ.
ಹಾಗಾಗಿ 14.2 ಕಿಲೋ ತೂಕದ ಸಹಾಯಧನಸಹಿತವಾದ ಎಲ್‌ಪಿಜಿ ಸಿಲಿಂಡರ್ ಬೆಲೆ ಇಂದು ಶುಕ್ರವಾದಿಂದ ದಿಲ್ಲಿಯಲ್ಲಿ 493.55 ರೂ. ಆಗಿದೆ. ಸಹಾಯಧನರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ 698.50 ರೂ. ಆಗಿದೆ.
ಸಹಾಯಧನ ಸಹಿತ ಮತ್ತು ಸಹಾಯಧನ ರಹಿತ ಅನುಕ್ರಮದಲ್ಲಿ ಈ ದರಗಳು ಕೋಲ್ಕತದಲ್ಲಿ 496.65, 723.50 ರೂ; ಮುಂಬಯಿಯಲ್ಲಿ 481.84, 671.50 ರೂ. ಮತ್ತು ಚೆನ್ನೈನಲ್ಲಿ 481.84 ಮತ್ತು 712.50 ರೂ. ಆಗಿವೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಈಚಿನ ದಿನಗಳಲ್ಲಿ ಒಂದೇ ಸಮನೆ ಏರುತ್ತಿರುವ ಪರಿಣಾಮವಾಗಿ ಉಂಟಾಗಿರುವ ಹೊರೆಯನ್ನು ತೈಲ ಮಾರಾಟ ಕಂಪೆನಿಗಳು ಗ್ರಾಹಕರಿಗೆ ವರ್ಗಾಯಿಸುತ್ತಿರುವುದರಿಂದ ದೇಶದಲ್ಲಿ ಪೆಟ್ರೋಲ್, ಡೀಸಿಲ್ ಮತ್ತು ಈಗ ಅಡುಗೆ ಅನಿಲ ಸಿಲಿಂಡರ್ ದರಗಳು ಏರುತ್ತಿವೆ.
ದೇಶದಲ್ಲಿ ಪ್ರತೀ ಕುಟುಂಬಕ್ಕೆ ವರ್ಷಕ್ಕೆ 12 ಅಡುಗೆ ಅನಿಲ ಸಿಲಿಂಡರ್‌ಗಳು ಸಹಾಯಧನ ಬೆಲೆಯಲ್ಲಿ ಪೂರೈಕೆಯಾಗುತ್ತಿವೆ.