Advertisement
ಹೀಗೆ ಹೇಳಿಕೊಂಡು ಗೋಳಿಟ್ಟುಕೊಂಡವರು ಸಮೀಪದ ಬೀರನೂರಿನ ಪ್ರವಾಹ ಸಂತ್ರಸ್ತ ವೃದ್ಧೆ ಶಾಂತವ್ವ ಶಿವಪ್ಪ ತೋಟದ.
Related Articles
Advertisement
ಅಲ್ಪ ಆಸರೆಯಾದ ಜೋಪಡಿ: ಏನ್ ಮಾಡೋದ್ರಿ ಹರೇದ ಹೆಣ್ಣಮಕ್ಕಳ್ನ ಕಟ್ಗೊಂಡು ಸೊಳ್ಳಿ ಕಡಸ್ಗೋಂತ ಬೀದ್ಯಾಗ ಕುಂತೇವ್ರಿ, ಕುಂದ್ರಾಕ ಅಷ್ಟ ನೋಡ್ರಿ ಈ ಜೋಪಡಿ. ಕಾಲ ಚಾಚಿ ಮನಕೋಳಾಕು ಆಗಾಂಗಿಲ್ರಿ. ದೊಡ್ಡ-ದೊಡ್ಡ ಹೆಣ್ಣ ಮಕ್ಳ ಅದಾವ್ರಿ. ನನ್ನ ಮಗಳ ಜೋಪಡ್ಯಾಗ ದೊಡ್ಡಾಕಿ ಆದ್ಲು ಏನ್ ಮಾಡಬೇಕ್ರಿ. ನಾವು ಜಳಕಾ ಮಾಡೋದರ ಹೆಂಗ್ರಿ. ನಮ್ಮ ಬಚ್ಚಲಾ ನೋಡ್ರಿ ನಮಗೂ ಮಾನ ಮರ್ಯಾದಿ ಇಲ್ಲೇನ್ರಿ. ಆಕಸ್ಮಾತ್ ಅಧಿಕಾರಿಗಳಿಗೆ ಈ ಪರಿಸ್ಥಿತಿ ಬಂದ್ರ ಹೆಂಗ್ರಿ ಅವರು ಸುಮ್ಮನಿರ್ತಾರೇನ್ರಿ. ಇದ್ದ ಜೋಪಡಿ ಬಿಡು ಅಂತಾರ.
ನೀರ ಬಂದ ಮನಿ ಬಿದ್ದಾವಂದ್ರ ನಮಗೇನ ಬೆಲೇನ ಇಲ್ಲೇನ್ರಿ. ಜೋಪಡ್ಯಾಗ ಇದ್ದ ನೋಡ್ರಿ ನೀವು ಬೇಕಾರ. ಅಡಗಿ ಮಾಡಬೇಕಂದ್ರ ಗಾಳಿಗೆ ಒಲಿ ಹತ್ತಾಂಗಿಲ್ಲ. ಕಣ್ಣ ಉರಸ್ಗೋಂತ ಏನಾರ ಸ್ವಲ್ಪ ಚಾಟ ಮಾಡ್ಕೊಂಡು ಅಡಗಿ ಮಾಡಿ ತಿನಬೇಕಂದ್ರ ಮಾಡಿದ ಅಡಗಿ ಜೋಪಡ್ಯಾಗ ಇಟ್ಟ ಮಕ್ಳ ಸಾಲಿಗೆ, ನಾವಿ ಕೂಲಿಗೆ ಹೋದ್ರ ನಾಯಿ-ನರಿ, ಧನ-ಕರ ತಿಂದ ಊಟಕ್ಕೂ ಚಿಂತಿ ಆಗೇತ್ರಿ.
ಮಕ್ಳ ಸಾಲಿಯಿಂದ ಹಸ್ಗೊಂಡು ಬಂದ್ರ ಊಟ ಇಲ್ಲ. ಉಪಾಸ ಹೋಗ್ಯಾರ ನೋಡ್ರಿ ಅಂತಾ ಮಹಿಳೆಯರು ಕಣ್ಣೀರು ಇಟ್ಟರು.
ಉರಿಗೆ ಬಂದವರೆಲ್ಲ ಸಾಹೇಬ್ರೇ: ಹೌದು ನೀವೂ ಒಮ್ಮೆ ಪ್ರವಾಹ ಪೀಡಿತ ಗ್ರಾಮಗಳಿಗೆ ಕಾಲಿಟ್ಟು ನೋಡಿ ನಿಮಗೆ ಸ್ವಾಗತ ಕೋರುತ್ತ ಸಾಹೇಬ್ರ ಬರ್ರಿ ನಮ್ಮ ಮನಿ ನೋಡ್ರಿ, ಒಳಗ ಬರ್ರಿ ಯಪ್ಪಾ ಕೈ ಮುಗಿತೇನಿ ಒಳಗರ ಬಂದು ನೋಡ್ರಿ. ನಮಗೂ ಒಂದು ಮನಿ ಕೊಡಸ್ರಿ ಎಂದು ಕೈ ಮುಗಿದು ಕೇಳುವ ಹಿರಿಯ ಜೀವಿಗಳು ಕಾಲಿಗೂ ಬಿದ್ದು ಗೋಳಾಡುತ್ತಾರೆ.
ಸಾಲದ ತಗಡಿನ ಶೆಡ್: ಬೀರನೂರ ಗ್ರಾಮದಲ್ಲಿ ಸರ್ಕಾರ ನಿರ್ಮಿಸಿರುವ 24 ತಾತ್ಕಾಲಿಕ ತಗಡಿನ ಸೆಡ್ ಸಾಲೋದಿಲ್ಲ, ಪ್ರವಾಹದಿಂದ 150ಕ್ಕೂ ಹೆಚ್ಚು ಕುಟುಂಬಗಳು ಮನೆಗಳು ನೆಲಸಮವಾಗಿವೆ. ಕಾರಣ ಇನ್ನೂ ಸಂತ್ರಸ್ತರು ರಸ್ತೆ ಪಕ್ಕ ಜೋಡಿಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಪತ್ರಿಕೆಯಲ್ಲಿ ಪ್ರಸಾರವಾದ ವರದಿ ಬೆನ್ನಲ್ಲೇ ಅಧಿಕಾರಿಗಳು ಬಂದು ಕೆಲವರಿಗೆ ತಗಡಿನ ಸೆಡ್ ಕೊಟ್ಟಿದ್ದು ಉಳಿದ ಕೆಲವರಿಗೆ ಜೋಪಡಿ ಕಿಳ್ಳುವಂತೆ ಒತ್ತಾಯಿಸುತ್ತಿದ್ದಾರಂತೆ. ನೀರು ಬಂದು ಮನೆ ನೆಲಸಮವಾಗಿವೆ ನಾವು ಎಲ್ಲಿ ಹೋಗೋಣ ಹೇಳಿ ಎಂದು ಅಧಿಕಾರಿಗಳಿಗೆ ವಾದಕ್ಕಿಳಿದಿದ್ದಾರೆ. ಅತ್ತ ಮನೆಯೂ ಇಲ್ಲ, ಇತ್ತ ತಗಡಿನ ಸೆಡ್ಡೂ ಇಲ್ಲ. ನಮ್ಮ ಪಾಡಿಗೆ ಜೋಪಡಿ ಕಟ್ಟಿಕೊಂಡು ನಾವಿದ್ದರೆ ಅದಕ್ಕೂ ಬಿಡದೆ ಖಾಲಿ ಮಾಡಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಸಂತ್ರಸ್ತರು ಆರೋಪಿಸುತ್ತಾರೆ.
ಮನೆ ಪೂರ್ತಿ ವೀಕ್ಷಿಸದ ಅಧಿಕಾರಿಗಳು: ಜಿಲ್ಲಾಧಿಕಾರಿ ಆದೇಶದಂತೆ ಬೀರನೂರ ಗ್ರಾಮವನ್ನು ಮತ್ತೆ ಸರ್ವೇ ಮಾಡುವ ಮೂಲಕ ಮನೆಗಳನ್ನು ವೀಕ್ಷಿಸಿದ್ದಾರೆ. ಆದರೆ, ಕೆಲ ಮನೆಗಳಲ್ಲಿ ಒಳಗೆ ಹೋಗದೆ ಹೊರಗೇ ನಿಂತು ಸರ್ವೇ ಮಾಡಿ ನಿನ್ನ ಮನೀ ಚೆನ್ನಾಗಿದೆ, ನೀವು ಇಲ್ಲೇ ಇರಬಹುದೆಂದು ಅಧಿಕಾರಿಗಳು ಹೇಳಿ ಹೋಗಿದ್ದಾರಂತೆ. ಆದರೆ ಮನೆಯೊಳಗೆ ನೆಲ, ಗೋಡೆ ಬಿರುಕು ಬಿಟ್ಟಿವೆ. ಮನೆಯ ಜಂತಿಗೆ (ಮೇಲ್ಛಾವಣಿಗೆ) ನಿಲ್ಲಿಸಿದ್ದ ಕಂಬ ಬಿದ್ದಿವೆ. ಇದರಲ್ಲಿ ಹೇಗೆ ಜೀವನ ಮಾಡೂದು ಹೇಳಿ ಎಂದು ಪ್ರಶ್ನಿಸುತ್ತಾರೆ.
ನಮ್ಮ ತ್ರಾಸ್ ನೊಡಾಕ್ ಯಾರೂ ಬರಾವಲ್ರು. ಏನ ಮಾಡಬೇಕು. ನಮ್ಮನ್ಯಾಗ ನೀರ ಯಾವಾಗ ಹೊಕ್ಕೈತಿ ಅವತ್ತಿಂದ ಕೂಳ(ಊಟ) ಕಂಡಿಲ್ಲ ಎಂದು ಕಣ್ಣೀರಿಟ್ಟರು ಬೀರನೂರ ಗ್ರಾಮದ 75ರ ಅಜ್ಜಿ ಗಂಗವ್ವ ತಿಮ್ಮನಗೌಡ್ರ.
•ಮಹಾಂತಯ್ಯ ಹಿರೇಮಠ