Advertisement

ಜನಹಿತ ರಕ್ಷಣೆಯೇ ಪಕ್ಷಗಳ ಆದ್ಯತೆ, ಬದ್ಧತೆಯಾಗಲಿ

01:30 AM May 03, 2021 | Team Udayavani |

ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಪಂಚರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣ ಫ‌ಲಿತಾಂಶ ರವಿವಾರ ಪ್ರಕಟವಾಗಿದೆ. ಬಹುತೇಕ ಫ‌ಲಿತಾಂಶಗಳು ನಿರೀಕ್ಷಿತವಾಗಿದ್ದರೂ ಪಕ್ಷಗಳ ಒಟ್ಟಾರೆ ಬಲಾಬಲ ಮಾತ್ರ ಎಲ್ಲ ಸಮೀಕ್ಷೆಗಳನ್ನು ಬುಡಮೇಲುಗೊಳಿಸಿದೆ.

Advertisement

ಅತ್ಯಂತ ಪ್ರತಿಷ್ಠೆಯ ಕಣವಾಗಿ ನಡೆದ ಪಶ್ಚಿಮ ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಅವರು ಸ್ವತಃ ಸೋಲು ಕಂಡರೂ ಪಕ್ಷವನ್ನು ಭರ್ಜರಿ ಬಹುಮತದೊಂದಿಗೆ ಮರಳಿ ಅಧಿಕಾರಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ರಾಜ್ಯದಲ್ಲಿ ಈ ಬಾರಿ ಪಕ್ಷವನ್ನು ಅಧಿಕಾರಕ್ಕೇರಿಸುವ ಪಣತೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆದಿಯಾಗಿ ಬಿಜೆಪಿ ವರಿಷ್ಠ ನಾಯಕರ ನಿರೀಕ್ಷೆಗೆ ತಕ್ಕ ಫ‌ಲಿತಾಂಶ ಬಾರದಿದ್ದರೂ ಪಕ್ಷ ತನ್ನ ಸ್ಥಾನಗಳನ್ನು ಸರಿ ಸುಮಾರು 25 ಪಟ್ಟು ಹೆಚ್ಚಿಸಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಭದ್ರವಾಗಿ ಬೇರೂರುವ ಸಂದೇಶವನ್ನು ರವಾನಿಸಿದೆ.

ಅಸ್ಸಾಂನಲ್ಲಿ ಆಡಳಿತಾರೂಢ ಬಿಜೆಪಿ ಮತ್ತೆ ಬಹುಮತದೊಂದಿಗೆ ಅಧಿಕಾರಕ್ಕೇರಿದೆಯಲ್ಲದೆ ತನ್ನ ಸ್ಥಾನಗಳನ್ನು ವೃದ್ಧಿಸಿಕೊಂಡಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ನೇತೃತ್ವದ ಎನ್‌ಡಿಎ, ಡಿಎಂಕೆ ನೇತೃತ್ವದ ಯುಪಿಎ ನಡುವಣ ನೇರ ಪೈಪೋಟಿಯಲ್ಲಿ ಹಾಲಿ ವಿಪಕ್ಷವಾಗಿರುವ ಡಿಎಂಕೆ ಭರ್ಜರಿ ಬಹುಮತ ಪಡೆಯುವುದರೊಂದಿಗೆ ಆಡಳಿತ ಚುಕ್ಕಾಣಿಯನ್ನು ಹಿಡಿದಿದೆ. ಪ್ರತೀ ಬಾರಿಯೂ ಆಡಳಿತ ಪಕ್ಷವನ್ನು ಬದಲಾಯಿಸುತ್ತಲೇ ಬಂದಿದ್ದ ಕೇರಳದ ಜನತೆ ಈ ಬಾರಿ ತಮ್ಮ ಈ ಸಂಪ್ರದಾಯದಿಂದ ಹೊರಬಂದು ಹಾಲಿ ಆಡಳಿತಾರೂಢ ಸಿಪಿಐ(ಎಂ)ನೇತೃತ್ವದ ಎಲ್‌ಡಿಎಫ್ ಅನ್ನು ಮರಳಿ ಅಧಿಕಾರಕ್ಕೇರಿಸಿದೆ. ಇದರೊಂದಿಗೆ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ತೀವ್ರ ಮುಖಭಂಗ ಅನುಭವಿಸಿದೆ. ಕಳೆದ ಬಾರಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಯದು ಈ ಬಾರಿ ಶೂನ್ಯ ಸಂಪಾದನೆ. ಪುದುಚೇರಿಯಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೇರುವ ಸಾಧ್ಯತೆ ನಿಚ್ಚಳವಾಗಿದೆ.

ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೂಮ್ಮೆ ಹೀನಾಯ ಪ್ರದರ್ಶನ ತೋರಿದೆ. ದಶಕಗಳ ಹಿಂದೆ ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಇದೀಗ ಖಾತೆ ತೆರೆಯಲೂ ಅಸಾಧ್ಯವಾದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಇನ್ನು ಕಳೆದೆರಡು ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ದೇಶದಲ್ಲಿ ಪಾರಮ್ಯ ಮೆರೆಯುವ ತವಕದಲ್ಲಿದ್ದ ಬಿಜೆಪಿಯ ನಾಗಾಲೋಟಕ್ಕೆ ಈ ಚುನಾವಣೆ ಕೊಂಚಮಟ್ಟಿನ ಬ್ರೇಕ್‌ ಹಾಕಿರುವುದಂತೂ ಸುಳ್ಳಲ್ಲ. ಪಶ್ಚಿಮಬಂಗಾಲದಲ್ಲಿ ಮೂರು ದಶಕಗಳ ಕಾಲ ನಿರಂತರವಾಗಿ ಆಡಳಿತ ನಡೆಸಿದ್ದ ಎಡಪಕ್ಷಗಳಿಗೆ ಈ ಬಾರಿ ರಾಜ್ಯದಲ್ಲಿ ಖಾತೆ ತೆರೆಯಲೂ ಸಾಧ್ಯವಾಗಿಲ್ಲ.

ಸದ್ಯ ದೇಶಾದ್ಯಂತ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡಿದ್ದು ಸೋಂಕಿತರು ಸೂಕ್ತ ಚಿಕಿತ್ಸೆ ಲಭಿಸದೇ ಸಂಕಷ್ಟದಲ್ಲಿದ್ದಾರೆ. ಔಷಧಗಳ ಕೊರತೆಯೂ ಎದುರಾಗಿದ್ದು, ಸೋಂಕಿತರು ಹೆಣಗಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಪಂಚರಾಜ್ಯಗಳ ಚುನಾವಣೆಯೂ ಸೋಂಕು ಹೆಚ್ಚಾಗಲು ಕಾರಣ ಎಂಬ ಆರೋಪ ಕೇಳಿಬಂದಿತ್ತು. ಇನ್ನಾದರೂ ಪಕ್ಷಗಳು ರಾಜಕೀಯವನ್ನು ಬದಿಗಿರಿಸಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಬೇಕಿದೆ. ಇನ್ನೇನಿದ್ದರೂ ಜನರ ಹಿತಾಸಕ್ತಿ ರಕ್ಷಣೆ, ಅಭಿವೃದ್ಧಿ ಕಾರ್ಯಗಳೇ ರಾಜಕೀಯ ಪಕ್ಷಗಳ ಆದ್ಯತೆ, ಬದ್ಧತೆಯಾಗಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next