Advertisement

ಬಾರ್‌ ಬಂದ್‌ : ಒಬ್ಬರಿಗೆ ನಷ್ಟ , ಇನ್ನೊಬ್ಬರಿಗೆ ದುಪ್ಪಟ್ಟು ಲಾಭ

03:55 AM Jul 03, 2017 | Team Udayavani |

ಉಡುಪಿ: ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಕ್ರಮವಾಗಿ 220 ಮೀ. ಮತ್ತು 500 ಮೀ. ಸುತ್ತಳತೆ ವ್ಯಾಪ್ತಿಯಲ್ಲಿ ಬರುವ ಮದ್ಯದಂಗಡಿ, ಬಾರ್‌ ಮತ್ತು ವೈನ್‌ಶಾಪ್‌ಗ್ಳನ್ನು ಜೂ. 30ರಂದು ಸರಕಾರ ತೆರವುಗೊಳಿಸಿದ ಕಾರಣ ಈ ವ್ಯಾಪ್ತಿಯಿಂದ ಹೊರಗಿರುವ ಮದ್ಯದಂಗಡಿ, ಬಾರ್‌, ವೈನ್‌ಶಾಪ್‌ಗ್ಳಿಗೆ ಭಾರೀ ಬೇಡಿಕೆ ಬಂದಿದೆ. ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಕ್ಯೂ ಇರುವಂತೆ ಮದ್ಯದಂಗಡಿಗಳಿಗೂ ಕ್ಯೂ ಭಾಗ್ಯ ಬಂದಿದೆ. ಬೆಳ್ಳಂಬೆಳಗ್ಗೆಯೇ ಇಂತಹ ಮದ್ಯದಂಗಡಿಗಳ ಬುಡದಲ್ಲಿ ಕ್ಯೂ ಇರುವುದು ‘ಅಪಾನಪ್ರಿಯ’ರಿಗೆ ಜೋಕ್‌ ಆಗಿ ಕಂಡಿದೆ. ಮುಚ್ಚುಗಡೆಯಿಂದ ಸಂತ್ರಸ್ತರಾದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಬದಿಯ ಮದ್ಯದಂಗಡಿಗಳ ಮಾಲಕರು ತೊಂದರೆಗೀಡಾಗಿದ್ದರೆ ಹೆಚ್ಚು ವ್ಯಾಪಾರ ಪಡೆಯುತ್ತಿರುವ ದೂರದ ಮದ್ಯದಂಗಡಿ ಮಾಲಕರು ‘ಖುಷ್‌’ ಆಗಿದ್ದಾರೆ. ಸಂತ್ರಸ್ತರು ಕೇವಲ ಮಾಲಕರಾಗಿರದೆ ನೌಕರರೂ ಇದ್ದಾರೆ.

Advertisement

ಕಷ್ಟಕಾಲದಲ್ಲಿ ಯಾರೂ ಇಲ್ಲಾ ಇಷ್ಟಕಾಲದಲ್ಲಿ ತೊಂದರೆಯೆಲ್ಲಾ!
‘ನಾವು ನೂರು ರೂ.ಗೆ ಕಷ್ಟಪಡುತ್ತಿದ್ದಾಗ ಸರಕಾರ ಯಾವುದೇ ಸಹಾಯ ಮಾಡಲಿಲ್ಲ. ನಾವು ಎಲ್ಲೆಲ್ಲೋ ದುಡಿದದ್ದನ್ನು ಊರಿನಲ್ಲಿ ಹೂಡಿಕೆ ಮಾಡಿ ಅಭಿವೃದ್ಧಿಗೊಂಡಾಗ ಸರಕಾರ ಈಗ ಬಂದ್‌ ಮಾಡಿದೆ. ನಾವಾದರೂ ಸಹಿಸಬಹುದು. ನೌಕರರಿಗೆ ಏನು ಗತಿ?’ ಎಂದು ಪ್ರಶ್ನಿಸುತ್ತಾರೆ ಹೊಟೇಲ್‌ ಕಿದಿಯೂರಿನ ಮಾಲಕ ಭುವನೇಂದ್ರ ಕಿದಿಯೂರು.

ಅಕ್ಕಪಕ್ಕದ ವ್ಯಾಪಾರಕ್ಕೂ ಧಕ್ಕೆ
ಮದ್ಯದ ವ್ಯಾಪಾರ ಬಂದ್‌ ಆಗಿರುವುದರ ಪರಿಣಾಮ ಎದುರಿಸುತ್ತಿರುವುದು ಮಾಲಕರು, ನೌಕರರಿಗೆ ಮಾತ್ರವಲ್ಲ. ಅಕ್ಕಪಕ್ಕದ ಬೀಡದ ಅಂಗಡಿಗಳು, ಹತ್ತಿರದ ರಿಕ್ಷಾವಾಲಾಗಳು, ಟ್ಯಾಕ್ಸಿ ಚಾಲಕರ ಮೇಲೆ ಪರಿಣಾಮ ಬೀರಿದೆ. ರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರಾದರೂ ಈಗ ಜೀವ ಇರುವ ಬಾರ್‌ಗಳ ಹತ್ತಿರ ಹೋಗಿ ನಿಲ್ಲಬಹುದು. ಇನ್ನೊಬ್ಬ ರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರಿಗೆ ವ್ಯಾಪಾರ ಜಾಸ್ತಿಯಾದರೂ ಸಂತ್ರಸ್ತರ ಕಷ್ಟ ತಪ್ಪಿದ್ದಲ್ಲ. ಬೀಡದ ಅಂಗಡಿಯವರು ಸ್ಥಳಾಂತರವಾಗುವುದು ಅಷ್ಟು ಸುಲಭವಲ್ಲ. ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು ವ್ಯಾಪಾರ ನಡೆಸುತ್ತಿದ್ದ ಮೀನು, ಮಾಂಸ, ತರಕಾರಿ ವ್ಯಾಪಾರಸ್ಥರೂ ಹಪಹಪಿಸುವಂತಾಗಿದೆ. ಬಾರ್‌ ಬಂದ್‌ ಪರಿಣಾಮವನ್ನು ಜೀರ್ಣಿಸಿಕೊಳ್ಳಲು ಹಲವು ತಿಂಗಳುಗಳು ಬೇಕಾದೀತು ಎನ್ನಲಾಗುತ್ತಿದೆ. ಈ ಸಂತ್ರಸ್ತ ವರ್ಗವೆಲ್ಲಾ ಪುನಃ ತಹಬಂದಿಗೆ ಬರಬೇಕಾಗಿದೆ. ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ಹೊಂದಿಕೊಂಡ ಲಾಡ್ಜ್ಗಳಿಗಂತೂ ಬಹಳ ಕಷ್ಟ. ಇವರೆಲ್ಲಾ ನಗರ ಪ್ರದೇಶದಲ್ಲಿ, ರಾ.ಹೆದ್ದಾರಿಗಳಲ್ಲಿದ್ದವರು. ಬಾರ್‌ ನೌಕರರಿಗೆ ಮಾತ್ರವಲ್ಲದೆ ಲಾಡ್ಜ್ ನೌಕರರಿಗೂ ಇದರ ಪರಿಣಾಮ ಬೀರುತ್ತಿದೆ.

‘ವೀಕೆಂಡಿ’ಗರ ಪರದಾಟ
ಶನಿವಾರ, ರವಿವಾರದ ವೀಕ್‌ಎಂಡ್‌ ಪಾರ್ಟಿ ಮಾಡುತ್ತಿದ್ದವರು ಒಮ್ಮೆಲೆ ಕಂಗಾಲಾಗಿದ್ದಾರೆ. ಬಂದ್‌ ಆದ ಮದ್ಯದಂಗಡಿಗಳ ಗಿರಾಕಿಗಳಿಗೆ ಹಾಲಿ ಇರುವ ಮದ್ಯದಂಗಡಿಯವರು ಪೂರೈಸುವಷ್ಟು ವ್ಯವಸ್ಥೆಯನ್ನು ಒಮ್ಮಿಂದೊಮ್ಮೆಲೆ ಪುನಃಸ್ಥಾಪಿಸುವುದು ಕಷ್ಟಸಾಧ್ಯ. ವೀಕ್‌ಎಂಡ್‌ ಪಾರ್ಟಿ ಮಾಡುವವರು ಬಹುತೇಕರು ಸ್ಥಿತಿವಂತರು. ಅವರು ಕಡಿಮೆ ದರ್ಜೆಯ ರೆಸ್ಟೋರೆಂಟ್‌ಗಳಿಗೆ ಹೋಗಲು ಹಿಂದೆ ಮುಂದೆ ನೋಡುವವರು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಬೆಳೆದುನಿಂತ ಪಡುಬಿದ್ರಿಯಂತಹ ನಗರದಲ್ಲಿ ಸಾಲುಸಾಲಾಗಿ ಮದ್ಯ ದಂಗಡಿಗಳು ಬಂದ್‌ ಆಗಿವೆ. ಇದಕ್ಕೆ ಹೋಗುವ ಗಿರಾಕಿಗಳು ಬಹಳ ದೂರ ಪ್ರಯಾಣ ಬೆಳೆಸಬೇಕು. ಬಂದ್‌ ಆದ ಮದ್ಯದಂಗಡಿಗಳ ಕಟ್ಟಡಗಳೂ ಹಾಳು ಸುರಿದರೆ ಅದಕ್ಕೆ ಪರ್ಯಾಯ ವ್ಯಾಪಾರ ಸಂಸ್ಥೆಗಳು ಹೊಂದಾಣಿಕೆಯಾಗುವುದು ಅಷ್ಟು ಸುಲಭವಲ್ಲ. ಒಟ್ಟಾರೆಯಾಗಿ ಸರ್ವೋಚ್ಚ ನ್ಯಾಯಾಲಯದ ಒಂದು ತೀರ್ಪು ಹಲವು ಆಯಾಮಗಳಲ್ಲಿ ಪರಿಣಾಮ ಬೀರುತ್ತಿದೆ.

ಕಡಬ: ವೈನ್‌ಶಾಪ್‌ ಎದುರು ದಿನವಿಡೀ ಕ್ಯೂ
ಕಡಬ:
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯ ನಿರ್ದಿಷ್ಟ ದೂರದವರೆಗೆ ವೈನ್‌ಶಾಪ್‌ ಅಥವಾ ಬಾರ್‌ಗಳು ಇರುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಈ ವ್ಯಾಪ್ತಿಗಿಂತ ಹೊರಗಿನ ಬಾರ್‌ ಮತ್ತು ವೈನ್‌ಶಾಪ್‌ಗ್ಳಲ್ಲಿ ಜನಸಂದಣಿ ಉಂಟಾಗಿದೆ. ಕಡಬ ಪೇಟೆಯಿಂದ ಹೊರಗಿರುವ ಸರಕಾರಿ ಸ್ವಾಮ್ಯದ ವೈನ್‌ಶಾಪ್‌ನಲ್ಲಿ ಶನಿವಾರದಿಂದ ದಿನವಿಡೀ ಸರದಿಯ ಸಾಲು ಕಾಣಿಸಿಕೊಂಡಿದೆ. ಶನಿವಾರಕ್ಕಿಂತಲೂ ರವಿವಾರದ ಸಾಲು ಉದ್ದನೆಯದಾಗಿತ್ತು.

Advertisement

ಕಡಬ-ಸುಬ್ರಹ್ಮಣ್ಯ ರಾ.ಹೆ. ಬದಿಯಲ್ಲಿದ್ದ 1 ವೈನ್‌ಶಾಪ್‌, 1 ಬಾರ್‌ ಬಂದ್‌ ಆಗಿದೆ. ಆದರೆ ಸರಕಾರಿ ಸ್ವಾಮ್ಯದ ವೈನ್‌ಶಾಪ್‌ ಪಂಜ ರಸ್ತೆಯಲ್ಲಿ ಪೇಟೆಯಿಂದ ಸುಮಾರು 250 ಮೀಟರ್‌ ದೂರದಲ್ಲಿದೆ. ಮುಖ್ಯರಸ್ತೆಯಲ್ಲಿನ ವೈನ್‌ಶಾಪ್‌ ಮತ್ತು ಬಾರ್‌ ಬಂದ್‌ ಆಗಿರುವುದರಿಂದ ಪಾನಪ್ರಿಯರೆಲ್ಲ ಅತ್ತ ಧಾವಿಸಿದ್ದಾರೆ. ಇದರಿಂದಾಗಿ ಶನಿವಾರದಿಂದ ಇಲ್ಲಿ ದಿನವಿಡೀ ಸರದಿಯ ಸಾಲು ಕಾಣಿಸಿದೆ. ರವಿವಾರವಂತೂ ಬೆಳಗ್ಗಿನಿಂದಲೂ ಉದ್ದನೆಯ ಸಾಲು ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next