ಇಸ್ಲಾಮಾಬಾದ್: ಪಾಕಿಸ್ಥಾನ ತನ್ನ ಭೂಭಾಗದಲ್ಲಿ ಭಾರತದ ವಿಮಾನ ಹಾರಾಟವನ್ನೂ (ಏರ್ ಸ್ಪೇಸ್) ಭಾಗಶಃ ನಿಷೇಧಿಸಿದೆ. ಬುಧವಾರ ನಡೆದ ಸಭೆಯಲ್ಲಿ ಪಾಕ್ ಈ ತೀರ್ಮಾನ ಕೈಗೊಂಡಿದೆ ಎಂದು ವರದಿ ತಿಳಿಸಿದೆ.
ಇದರಿಂದ ಭಾರತ ಪರ್ಯಾಯ ವಾಯು ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ಪಾಕಿಸ್ತಾನದ ಈ ಕ್ರಮದಿಂದ ಭಾರತ 12 ನಿಮಿಷಗಳ ಹೆಚ್ಚುವರಿ ಸಮಯವನ್ನು ಗಾಳಿಯಲ್ಲಿ ವ್ಯಯಿಸಬೇಕಾಗಿದೆ.
ಮುಖ್ಯವಾಗಿ ಏರ್ ಇಂಡಿಯಾದ ಸುಮಾರು 50 ವಿಮಾನಗಳು ಪಾಕಿಸ್ಥಾನದ ಏರ್ ಸ್ಪೇಸ್ ಮೂಲಕ ದಿನನಿತ್ಯ ಹಾರಾಟ ನಡೆಸುತ್ತದೆ. ಅಮೆರಿಕ, ಯುರೋಪ್ ಹಾಗೂ ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೆ ತೆರಳುವ ವಿಮಾನಗಳು ಪಾಕ್ ನ ಏರ್ ಸ್ಪೇಸ್ ಬಳಸುತ್ತಿದ್ದವು.
ಫೆಬ್ರವರಿ ತಿಂಗಳಲ್ಲಿ ಬಾಲಾಕೋಟ್ ಏರ್ ಸ್ಟ್ರೈಕ್ ನಡೆದ ಬಳಿಕ ಪಾಕ್ ನ ಏರ್ ಸ್ಪೇಸ್ ಅನ್ನು ನಿಷೇಧಿಸಿತ್ತು. ನಂತರ ಜುಲೈ 16ರಂದು ಹಾರಾಟಕ್ಕೆ ಮುಕ್ತಗೊಳಿಸಿತ್ತು. ಇದೀಗ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದು ಮಾಡಿದ್ದಕ್ಕೆ ಪಾಕಿಸ್ತಾನ ತೀವ್ರ ಕಳವಳ ವ್ಯಕ್ತಪಡಿಸಿದೆ.
ಬುಧವಾರ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧವನ್ನು ಕಡಿತಗೊಳಿಸಿದ್ದ ಪಾಕಿಸ್ತಾನ, ಈಗ ಪಾಕ್ ನ ಏರ್ ಸ್ಪೇಸ್ ಬಳಸದಂತೆ ಭಾರತಕ್ಕೆ ತಾಕೀತು ಮಾಡಿದೆ.
ಪಾಕಿಸ್ತಾನ ಏರ್ ಸ್ಪೇಸ್ ಅನ್ನು ನಿಷೇಧಿಸಿದರೆ ಹೆಚ್ಚೆಂದರೆ 12 ನಿಮಿಷಗಳ ಅಧಿಕ ಹಾರಾಟ ಸಂಸ್ಥೆಗೆ ದೊಡ್ಡ ಹೊಡೆತ ಅಲ್ಲ ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.