ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸುಮಾರು 111 ಮಂದಿ ರೈತರು ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸುವ ಮೂಲಕ ಅಖಾಡಕ್ಕಿಳಿಯಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ತಮಿಳುನಾಡು ರೈತ ಸಂಘದ ಮುಖಂಡ ಪಿ.ಅಯ್ಯಕಣ್ಣ ಪಿಟಿಐ ಜೊತೆ ಮಾತನಾಡುತ್ತ, ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುತ್ತಿರುವ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ತಮಿಳುನಾಡಿನ 111 ಮಂದಿ ರೈತರು ಅಖಾಡಕ್ಕಿಳಿಯಲಿದ್ದಾರೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ 2014ರಲ್ಲಿ ಘೋಷಿಸಿದ್ದ ಪ್ರಣಾಳಿಕೆಯಂತೆ ನಮ್ಮ ಬೇಡಿಕೆಯನ್ನು ಈಡೇರಿಸಿದಲ್ಲಿ ನಾವು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವ ನಿರ್ಧಾರವನ್ನು ಕೈಬಿಡುವುದಾಗಿ ಹೇಳಿದರು. ರೈತರ ಬೇಡಿಕೆ ಈಡೇರಿಸುವಂತೆ ಅಯ್ಯಕಣ್ಣ ನೇತೃತ್ವದಲ್ಲಿ 2017ರಲ್ಲಿ ದೆಹಲಿಯಲ್ಲಿ ಅರೆಬೆತ್ತಲಾಗಿ ನೂರು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು.
ನಾವು ಭಾರತೀಯ ಜನತಾ ಪಕ್ಷವಾಗಲಿ ಅಥವಾ ಪ್ರಧಾನಿ ಮೋದಿ ಅವರ ವಿರೋಧಿಗಳಲ್ಲ. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಏರುವ ಮೊದಲು ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ಕೊಟ್ಟಿದ್ದರು. ಅಲ್ಲದೇ ನಮ್ಮ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದರು. ಇದೀಗ ಐದು ವರ್ಷಗಳ ಕಾಲ ಪ್ರಧಾನಿಯಾಗಿದ್ದರು ಕೂಡಾ ನಮ್ಮ ಬೇಡಿಕೆ ಈಡೇರಿಸಿಲ್ಲ ಯಾಕೆ ಎಂದು ಅಯ್ಯಕಣ್ಣ ಪ್ರಶ್ನಿಸಿದ್ದಾರೆ.
ಈಗಾಗಲೇ ತಿರುವಣ್ಣಾಮಲೈ ಮತ್ತು ತಿರುಚಿರಾಪಳ್ಳಿಯಿಂದ ಸುಮಾರು 300 ರೈತರನ್ನು ವಾರಣಾಸಿಗೆ ಕಳುಹಿಸಲು ರೈಲ್ವೆ ಟಿಕೆಟ್ ಕಾಯ್ದಿರಿಸಲಾಗಿದೆ ಎಂದು ಈ ಸಂದರ್ಭದಲ್ಲಿ ವಿವರಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಬೆಳೆಗೆ ಬೆಂಬಲ ಬೆಲೆ, ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ ಗಳ ಸಾಲಮನ್ನಾ, 60 ವರ್ಷ ದಾಟಿದ ರೈತರಿಗೆ 5000 ಪಿಂಚಣಿ ನೀಡುವುದಾಗಿ ಭರವಸೆ ನೀಡಿತ್ತು.