ಲಕ್ನೋ : ಪವಿತ್ರ ಗಂಗಾ ಜಲವನ್ನು ದೇವರಿಗೆ ಅರ್ಪಿಸಲು ಪಾದಯಾತ್ರೆ ಕೈಗೊಂಡು ಬಾಘಪತ್ ನ ಪುರ ಮಹಾದೇವ ದೇವಸ್ಥಾನದಲ್ಲಿ ಮೂರು ದಿನಗಳ ಉತ್ಸವ ಪ್ರಯುಕ್ತ ಲಕ್ಷಾಂತರ ಸಂಖ್ಯೆಯಲ್ಲಿ ಸೇರುವ ಕನ್ವರಿಯಾಗಳು ದಿಲ್ಲಿಯ ಬಳಿಕ ಇದೀಗ ಉತ್ತರ ಪ್ರದೇಶದಲ್ಲಿ ಹಿಂಸೆಗೆ ತೊಡಗಿ ಕರ್ತವ್ಯದಲ್ಲಿ ನಿರತರಾಗಿದ್ದ ಪೊಲೀಸರ ಮೇಲೆ ದಾಳಿಗೈದ ಘಟನೆ ನಡೆದಿದೆ.
ಆ.7ರಂದು ನಡೆದಿರುವ ಈ ಹಿಂಸಾತ್ಮಕ ಆಕ್ರೋಶ ಸಿಸಿಟಿಯಲ್ಲಿ ದಾಖಲಾಗಿದ್ದು ಅದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಯಾತ್ರಾನಿರತ ಕನ್ವರಿಯಾಗಳು ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ಪೊಲೀಸರ ವಾಹನಗಳನ್ನು ಧ್ವಂಸ ಮಾಡಿ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಕನ್ವರಿಯಾಗಳೊಂದಿಗೆ ಕೆಲವು ಸ್ಥಳೀಯರು ಕೂಡ ಸೇರಿ ಹಿಂಸಾಕೃತ್ಯ ಎಸಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ದಿನಗಳ ಹಿಂದಷ್ಟೇ ಪಶ್ಚಿಮ ದಿಲ್ಲಿಯ ಮೋತಿ ನಗರ ಪ್ರದೇಶದಲ್ಲಿ ಓರ್ವ ಕನ್ವರಿಯಾ ಮೇಲೆ ಕಾರೊಂದು ಹರಿದ ಪರಿಣಾವಾಗಿ ಆತ ಗಂಭೀರವಾಗಿ ಗಾಯಗೊಂಡಿದ್ದ. ಇದರಿಂದ ತೀವ್ರವಾಗಿ ಕ್ರುದ್ಧರಾಗಿದ್ದ ಕನ್ವರಿಯಾಗಳು ಕಾರನ್ನು ಧ್ವಂಸ ಮಾಡಿ ಪೊಲೀಸರ ಮೇಲೆ ದಾಳಿ ನಡೆಸಿದ್ದರು.
ಅನಂತರದಲ್ಲಿ ಅದೇ ಬಗೆಯ ಹಿಂಸಾಕೃತ್ಯದಲ್ಲಿ ಕನ್ವರಿಯಾಗಳು ಉತ್ತರಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ತೊಡಗಿದ್ದಾರೆ.
ಕನ್ವರಿಯಾಗಳ ಈ ಅವಾಂತರದ ನಡುವೆಯೂ ಯಾತ್ರಿಗಳನ್ನು ಸ್ವಾಗತಿಸುವ ಕ್ರಮದ ಪ್ರಕಾರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಮೀರತ್ ವಲಯ) ಪ್ರಶಾಂತ್ ಕುಮಾರ್ ಅವರು ಹೆಲಿಕಾಪ್ಟರ್ ನಿಂದ ಕನ್ವರಿಯಾಗಳ ಮೇಲೆ ಪುಷ್ಪವೃಷ್ಟಿ ಮಾಡಿದ್ದು ಅದರ ವಿಡಿಯೋ ಕೂಡ ವೈರಲ್ ಆಗಿದೆ.
ಶ್ರಾವಣ ಮಾಸದ ಮೊದಲ ದಿನವಾಗಿ ಕಳೆದ ಜು.28ರಂದು ಕನ್ವರಿಯಾಗಳ ಯಾತ್ರೆ ಆರಂಭಗೊಂಡಾಗ ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ವತಃ ಹೆಲಿಕಾಪ್ಟರ್ ಸಮೀಕ್ಷೆ ಕೈಗೊಂಡು ಕನ್ವರಿಯಾಗಳ ಮೇಲೆ ಪುಷ್ಪ ವೃಷ್ಟಿ ಮಾಡಿದ್ದರು.