Advertisement

ಗುಣವಾದರೂ ಮನೆ ಸೇರಲು ಹಿಂದೇಟು

02:04 PM Oct 17, 2020 | Suhan S |

ಹೊನ್ನಾವರ: ಕೋವಿಡ್‌ನಿಂದ ಮುಕ್ತರಾಗಿದ್ದೀರಿ ಎಂದು ಆಸ್ಪತ್ರೆಯವರು ಅಧಿಕೃತ ಪತ್ರ ಕೊಟ್ಟು, ಹೂವು ನೀಡಿ ಮನೆಗೆ ಹೋಗಿ ಎಂದರೆ ಹಿಂದೇಟು ಹಾಕುವ ಪರಿಸ್ಥಿತಿಯಿದೆ. ಇದಕ್ಕೆ ಕಾರಣ ಕೋವಿಡ್‌ ಮುಕ್ತರನ್ನು ಸಮಾಜ ಮಾತ್ರವಲ್ಲ ಮನೆಯವರೂ ಅಸ್ಪೃಶ್ಯರಂತೆ ಕಾಣುವ ರೀತಿ. ಒಬ್ಬೊಬ್ಬರಿಗೆ ಒಂದೊಂದು ಅನುಭವ. ಒಟ್ಟಾರೆ ನಮ್ಮಿಂದ ದೂರಇರಿ, ಕೋವಿಡ್‌ ಬಂದಿತ್ತು ಎಂಬುದನ್ನು ನಾವು ಮರೆಯುವವರೆಗೆ ಹತ್ತಿರ ಬರಬೇಡಿ ಎಂಬುದೇ ಆಗಿದೆ.

Advertisement

ನಾಳೆ ನಿಮಗೆ ಡಿಸ್ಚಾರ್ಜ್‌ ಅಂತೆ, ಮನೆಗೆ ಬಂದರೂ ಅಡ್ಡಾಡಬೇಡಿ, ವಿಶ್ರಾಂತಿ ಪಡೆಯಿರಿಎಂದು ಪಕ್ಕದ ಮನೆಯವರು ಮುಂಚಿನ ದಿನವೇ ಫೋನ್‌ ಮಾಡುತ್ತಾರೆ. ಇಲ್ಲ ಗುಣವಾಗಿದೆ ಎಂದು ಸರ್ಟಿಫಿಕೇಟ್‌ ಕೊಟ್ಟಿದ್ದಾರೆ ಎಂದರೆ, ಅದೆಲ್ಲ ನಾಟಕ, ತಿಂಗಳುಗಟ್ಟಲೆ ವೈರಸ್‌ ಹೋಗುವುದಿಲ್ಲವಂತೆ. ಕೇರಿಯಲ್ಲಿ ಎಲ್ಲರ ಅಭಿಪ್ರಾಯವೂ ಇದೇ ಆಗಿದೆ.ನೀವು ಬರಬೇಡಿ ಎನ್ನುವುದಿಲ್ಲ, ಅಡ್ಡಾಡಬೇಡಿ ಅಷ್ಟೇ ಎಂದು ಎಚ್ಚರಿಸುತ್ತಾರೆ. ಅಣ್ಣ-ತಮ್ಮಂದಿರ ಸಹಿತ ನಾಲ್ಕಾರು ಜನರಿದ್ದ ಮನೆಯಾದರೆ ಆಸ್ಪತ್ರೆಯ ವಾಸ ಮುಗಿಸಿ ಬರುವಷ್ಟರಲ್ಲಿ ಹೊರಗಿನಒಂದು ಕೋಣೆ ಖಾಲಿಮಾಡಿ ಇಟ್ಟಿರುತ್ತಾರೆ. ಒಳಗೆ ಬರಬೇಡಿ, ಊಟ-ತಿಂಡಿ ಇಲ್ಲೇ ಕೊಡುತ್ತೇವೆ, ಸ್ನಾನ ಇತ್ಯಾದಿಗಳು ನಮ್ಮದು ಮುಗಿದ ಮೇಲೆನಿಮಗೆ ಅವಕಾಶ ನೀಡುತ್ತೇವೆ ಎನ್ನುತ್ತಾರೆ. ಕೇರಿಯವರಿಗೂ, ಮನೆಯವರಿಗೂ ಬೇಡವಾದರೆಸರಿ ನಾವೇ ಸಾಮಾನು ಖರೀದಿಸೋಣ ಎಂದು ಪೇಟೆಗೆ ಹೋದರೆ ಅಂಗಡಿಯವನೂ ಹೊರಗೆ ನಿಲ್ಲಿ ಸರ್‌, ಅಲ್ಲೇ ಸಾಮಾನು ತಂದುಕೊಡುತ್ತೇವೆ ಎನ್ನುತ್ತಾರೆ.

ಅಷ್ಟರಲ್ಲಿ ಪರಿಚಿತರು ಹತ್ತಿರ ಬಂದವರು ನೋಡಿಯೂ ನೋಡದಂತೆ ದೂರ ಸರಿದು ಹೋಗುತ್ತಾರೆ. ನಿತ್ಯ ಓಡಾಡುವ ರಸ್ತೆಯಅಂಗಡಿಯವರೂ, ಪರಿಚಿತರೂ ಕಣ್ಣರಳಿಸಿ ನೋಡುವಾಗ ಇವ ಈ ಬದಿಗೆ ಬರದಿರಲಿ ಎಂಬ ಮುಖಭಾವ ಇರುತ್ತದೆ. ಬಿಲ್‌ ತಿಂಗಳ ನಂತರ ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತ ಹಾಲಿನವನು, ಪೇಪರಿನವನುಗೇಟ್‌ನಲ್ಲೇ ಇಟ್ಟು ಹೋಗುತ್ತಾರೆ. ಸಂಜೆ ವಾಕಿಂಗ್‌ ಗೂ ಹೋಗುವಂತಿಲ್ಲ. ನಾವು ಎಡಕ್ಕೆ ಹೋದರೆ ಉಳಿದವರು ಬಲದಿಂದ ಯಾರೊಂದಿಗೋ ಫೋನ್‌ನಲ್ಲಿ ಮಾತನಾಡುವಂತೆ ಮಾಡಿ ದೂರ ಹೋಗುತ್ತಾರೆ. ಎದುರು ಸಿಕ್ಕಾಗ ತಲೆತಿನ್ನುವವರೆಲ್ಲ ಪರಿಚಯವಿಲ್ಲದವರಂತೆ ಮಾಡುತ್ತಾರೆ. ಮಧ್ಯಾಹ್ನ, ಸಂಜೆ ಊಟ ಮಾಡಿ ತಾಟು, ಪಾತ್ರೆ ತೊಳೆದು ಸ್ಯಾನಿಟೈಸರ್‌ ಹಚ್ಚಿ ಒಳಗೆ ಕೊಡಬೇಕು. ಇದಕ್ಕಿಂತ ಕೋವಿಡ್‌ ವಾರ್ಡೆ ವಾಸಿ. ಅಲ್ಲಿ ಬೇಧಬಾವ ಇಲ್ಲ ಅನ್ನಿಸದೇ ಇರದು. ಹೀಗೆ ಹೋದಲ್ಲಿ, ಬಂದಲ್ಲಿ ಕೋವಿಡ್‌ ಗುಣವಾದವರೊಂದಿಗೆ ಅಂತರ ಕಾಯ್ದುಕೊಳ್ಳುವ ಬದಲು, ಕಂಡಕೂಡಲೇ ಮಾಸ್ಕ್ ಏರಿಸುವ ಬದಲು, ಮೊದಲೇ ಈ ಕೆಲಸ ಎಲ್ಲರೂ ಮಾಡಿದ್ದರೆ ಕೋವಿಡ್‌ ಹರಡುತ್ತಲೇ ಇರಲಿಲ್ಲ.

ಆಸ್ಪತ್ರೆಯಲ್ಲಿ ಒಂಟಿತನ, ನರ್ಸ್‌, ವೈದ್ಯರ ವಿರಳ ಓಡಾಟ ಮಾನಸಿಕ, ದೈಹಿಕವಾಗಿ ದಣಿದು ಮನೆಸೇರಿದವರಿಗೆ ಪ್ರೀತಿಯ ಸ್ಪರ್ಶ ಇರಲಿ ಎನ್ನುತ್ತಾರೆ ಮಾನಸಿಕ ತಜ್ಞರು. ಇದು ಮನೆಯವರಿಗೆ ಅರ್ಥವಾಗುವುದಿಲ್ಲ, ಉಳಿದವರೂ ಅರ್ಥಮಾಡಿಕೊಳ್ಳುವುದಿಲ್ಲ. ಕೋವಿಡ್‌ ಗುಣಮುಖರಾದವರು ಸಮಾಜ ಮಾತ್ರವಲ್ಲ ಮನೆಯವರ ದೃಷ್ಟಿಯಿಂದಲೂ ಅಸ್ಪ್ರಶ್ಯರಾಗಿಯೇಇರುತ್ತಾರೆ. ಇದು ಎಷ್ಟು ಕಾಲ ಎಂಬುದು ಯಾರಿಗೂ ಗೊತ್ತಿಲ್ಲ.

ತಹಶೀಲ್ದಾರ್ ತನಕ ದೂರು :  ಕೆಲವರು ತಮ್ಮನ್ನು ಅಸ್ಪೃಶ್ಯರಾಗಿ ಕಾಣುತ್ತಿರುವುದಕ್ಕೆ ನೊಂದು, ಕುಸಿದು ಹೋಗಿದ್ದಾರೆ. ಕೆಲವರು ತಹಶೀಲ್ದಾರ್‌ ತನಕ ದೂರಿದ್ದಾರೆ. ಮನೆಯಲ್ಲಿ ಜಗಳಗಳಾಗಿವೆ.ವಾಸ್ತವವಾಗಿ ಒಮ್ಮೆ ಕೋವಿಡ್‌ ಬಂದು ಹೋದವರಿಂದ ಕೋವಿಡ್‌ ಹರಡುವುದಿಲ್ಲ. ಅವರಿಗೂ ಕೋವಿಡ್‌ ತಗಲುವುದಿಲ್ಲ. ಕೋವಿಡ್‌ ಬರುವುದಕ್ಕಿಂತ ಬರಬಹುದು ಎಂಬ ಭಯ ಇವರಿಗೆ ಕಾಳಜಿ ಹುಟ್ಟಿಸಿ ಮಾಸ್ಕ್ಹಾಕಿಕೊಳ್ಳುವ, ಸ್ಯಾನಿಟೈಸರ್‌ ಮಾಡುವ, ಅಂತರ ಕಾಯ್ದುಕೊಳ್ಳುವ ಮನಸ್ಸು ನೀಡುವ ಬದಲು ಕೋವಿಡ್‌ ಗೆದ್ದು ಬಂದವರಿಗೆ ಮಾನಸಿಕ ಹಿಂಸೆ ನೀಡುವುದರಿಂದ ಗುಣಮುಖರಾದವರ ಮಾನಸಿಕ ಸ್ಥೈರ್ಯ ಕುಂದುತ್ತದೆ. ದೇಹದ ಆರೋಗ್ಯ ಸುಧಾರಿಸುವುದಿಲ್ಲ. ಗುಣವಾಗಿ ಬಂದವರನ್ನು ಎಲ್ಲರಂತೆ ಮೊದಲಿನ ಆತ್ಮೀಯತೆಯಿಂದ ನೋಡಿಕೊಳ್ಳಿ ಎನ್ನುತ್ತಾರೆ ನಿಮಾನ್ಸ್‌ನ ಮಾನಸಿಕ ತಜ್ಞರು.

Advertisement

 

-ಜೀಯು

Advertisement

Udayavani is now on Telegram. Click here to join our channel and stay updated with the latest news.

Next