Advertisement
ಮಂಗಳೂರಿನ ಮೀನುಗಾರಿಕ ಮುಖಂಡರು ಹೇಳುವ ಪ್ರಕಾರ ದಕ್ಕೆಯ ಸುತ್ತ-ಮುತ್ತಲಿನ ಕಡಲಿನಲ್ಲಿ ಸುಮಾರು 10ಕ್ಕೂ ಅಧಿಕ ಬೋಟ್‌ಗಳು ಇನ್ನೂ ನೀರಿನಲ್ಲಿಯೇ ಇವೆ. ಕಡಲಿನ ಆಳಕ್ಕೆ ಹೋಗಿರುವ ಇಂತಹ ಬೋಟ್‌ಗಳ ತೆರವು ಕಾರ್ಯಾಚರಣೆ ಪೂರ್ಣ ಪ್ರಮಾಣದಲ್ಲಿ ನಡೆಯಲಿಲ್ಲ. ಹೀಗಾಗಿ ಸದ್ಯ ಮೀನುಗಾರಿಕೆ ನಡೆಸುತ್ತಿರುವ ಬೋಟ್‌ಗಳ ಸಂಚಾರಕ್ಕೆ ಸಂಚಕಾರ ಎದುರಿಸುವಂತಾಗಿದೆ. ಒಂದು ವರ್ಷದಲ್ಲಿ ಸುಮಾರು 12 ಬೊಟ್‌ಗಳು ಮಂಗಳೂರು ವ್ಯಾಪ್ತಿಯಲ್ಲಿ ವಿವಿಧ ಕಾರಣಗಳಿಂದ ಮುಳು ಗಡೆಯಾಗಿದ್ದು, ಈ ಪೈಕಿ ಎಲ್ಲವನ್ನೂ ನೀರಿನಿಂದ ತೆಗೆಯಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಮೂಲಗಳು ತಿಳಿಸಿವೆ. ಆದರೆ ಕೆಲವು ಬೋಟ್‌ಗಳು ಇನ್ನೂ ನೀರಲ್ಲಿ ಇದೆ ಎಂದು ಮೀನುಗಾರರು ಆಪಾದಿಸುತ್ತಿದ್ದಾರೆ. ಬೋಟ್‌ಗಳಿಗೆ ವಿಮೆ ಸೌಲಭ್ಯ ಇದ್ದರೂ ಬೋಟ್ ತೆರವು ಮಾಡುವ ವೆಚ್ಚ ದುಬಾರಿ ಆಗುವ ಕಾರಣದಿಂದ ಬಹುತೇಕ ಬೋಟ್‌ಗಳು ನೀರಿನಲ್ಲಿಯೇ ಬಾಕಿಯಾಗಿವೆ ಎಂಬ ದೂರು ಕೇಳಿ ಬಂದಿದೆ.
Related Articles
Advertisement
ಮೀನುಗಾರಿಕೆ ದೋಣಿಗಳ ಸಂಚಾರ, ಲಕ್ಷ ದ್ವೀಪಕ್ಕೆ ಮಿನಿ ಹಡಗುಗಳ ಸಂಚಾರಕ್ಕೆ ಮಂಗಳೂರು ಬಂದರಿನ ಅಳಿವೆಬಾಗಿಲಿನಲ್ಲಿ ತುಂಬಿರುವ ಬೃಹತ್ ಪ್ರಮಾಣದ ಹೂಳು ಬಹಳಷ್ಟು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಇದರಿಂದಾಗಿ ಇಲ್ಲಿ ಹಲವು ಅವಘಡಗಳು ಸಂಭವಿಸಿವೆ. ಇಲ್ಲಿಯೂ ಕೆಲವು ಬೋಟ್ ಮುಳುಗಡೆ ಯಾಗಿತ್ತು. ಅವುಗಳನ್ನು ತೆರವು ಮಾಡಲಾಗಿದೆ ಎಂದು ಹೇಳುತ್ತಿದ್ದರೂ ಪೂರ್ಣ ತೆರವು ಆಗಿಲ್ಲ ಎನ್ನಲಾಗಿದೆ.
ಮುಳುಗಿದ ಪ್ರಮುಖ ಹಡಗುಗಳು :
ಇರೀಟ್ರಿಯಾ ದೇಶದ “ಡೆನ್ ಡೆನ್’ ಹಡಗು 2007 ಜೂ. 23ರಂದು ನವಮಂಗಳೂರು ಬಂದರಿನಿಂದ ಹೊರಟು ತಣ್ಣೀರುಬಾವಿ ಬಳಿ ಅಪಾಯಕ್ಕೆ ಸಿಲುಕಿ ಮುಳುಗಡೆಯಾಗಿತ್ತು. 2008 ಜು. 17ರಂದು ನವಮಂಗಳೂರು ಬಂದರಿನಿಂದ ಹೊರಟಿದ್ದ ಇತಿಯೋಪಿಯಾದ “ಏಶಿಯನ್ ಫಾರೆಸ್ಟ್’ ಹಡಗು ತಣ್ಣೀರುಬಾವಿ ಕಡೆಗೆ ಚಲಿಸಿ ಅಪಾಯಕ್ಕೆ ಸಿಲುಕಿ ಮರುದಿನ (ಜು. 18) ಅರಬಿ ಸಮುದ್ರದಲ್ಲಿ ಮುಳುಗಡೆಯಾಗಿತ್ತು. 2017ರಲ್ಲಿ ಆಂಧ್ರಪ್ರದೇಶ ಮೂಲದ “ಧರ್ತಿ’ ಕಂಪೆನಿಗೆ ಸೇರಿದ ಬಾರ್ಜ್ ಅನ್ನು ಉಳ್ಳಾಲಕ್ಕೆ ತರಿಸಲಾಗಿತ್ತು. ಅಲೆಗಳ ಹೊಡೆತಕ್ಕೆ ಬಾರ್ಜ್ ಸಮುದ್ರದೊಳಗೆ ಮುಳುಗಿತ್ತು.
ತೆರವಿಗೆ ಕ್ರಮ : ಬೋಟ್ ತೆರವಿಗೆ ಸಂಬಂಧಿಸಿ ವಿಶೇಷ ಕ್ರಮ ವಹಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಡಿ. 1ರಂದು ಮುಳುಗಡೆಯಾದ ಬೋಟ್ ತೆರವಿಗೆ ಸಂಬಂಧಿಸಿ ಸೋಮೇಶ್ವರದಲ್ಲಿ ಎಡಿಬಿ ಕಾಮಗಾರಿ ನಡೆಸುತ್ತಿರುವ ಬಾರ್ಜ್, ಕ್ರೇನ್ ಸಹಾಯದಿಂದ ಕಾರ್ಯಾಚರಣೆ ನಡೆಸಲಾಗುವುದು. -ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.