ನವದೆಹಲಿ:ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ)ಯ ಅಂತಿಮ ಪಟ್ಟಿ ಶನಿವಾರ ಬಿಡುಗಡೆಯಾದ ಬೆನ್ನಲ್ಲೇ ದೇಶದ ಇತರ ರಾಜ್ಯಗಳಲ್ಲಿಯೂ ಇದೇ ಮಾದರಿಯನ್ನು ಜಾರಿಗೊಳಿಸಬೇಕೆಂದು ಆಡಳಿತಾರೂಢ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಮೈತ್ರಿಕೂಟದ ಎನ್ ಡಿಎ ಪಕ್ಷಗಳು ಒತ್ತಾಯಿಸಿದೆ.
ಅಸ್ಸಾಂನಲ್ಲಿ ಜಾರಿಯಾದ ಎನ್ ಆರ್ ಸಿ ವಾಣಿಜ್ಯ ನಗರಿ ಮುಂಬೈನಲ್ಲಿಯೂ ಜಾರಿಯಾಗಬೇಕೆಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ ಪ್ರತಿಕ್ರಿಯೆ ನೀಡಿದ್ದಾರೆ.
ಮೆಟ್ರೋಪೊಲಿಟಿಯನ್ ನಗರಿಯಾದ ಮುಂಬೈನಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮವಾಗಿ ವಲಸಿಗರೇ ವಾಸಿಸುತ್ತಿದ್ದಾರೆ. ಹೀಗಾಗಿ ಅಸ್ಸಾಂ ರೀತಿಯಲ್ಲಿ ಮುಂಬೈನಲ್ಲಿಯೂ ಎನ್ ಆರ್ ಸಿ ಜಾರಿಯಾಗಬೇಕು ಎಂದು ಶಿವಸೇನಾ ಮುಖಂಡ, ಕೇಂದ್ರ ಸಚಿವ ಅರವಿಂದ್ ಸಾವಂತ್ ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಸ್ಸಾಂನಲ್ಲಿ ಜಾರಿಗೊಳಿಸಿರುವ ವಿವಾದಿತ ಎನ್ ಆರ್ ಸಿಗೆ ಸಂಬಂಧಿಸಿದಂತೆ ಶಿವಸೇನಾ ಸಂಪೂರ್ಣವಾಗಿ ಬೆಂಬಲ ನೀಡುತ್ತದೆ ಎಂದು ಸಾವಂತ್ ತಿಳಿಸಿದ್ದು, ಇದರಿಂದ ದೇಶದ ಐಕ್ಯತೆ ಮತ್ತು ಆಂತರಿಕ ಭದ್ರತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ) ದೆಹಲಿಯಲ್ಲಿಯೂ ಜಾರಿಯಾಗಬೇಕು. ದೆಹಲಿಯಲ್ಲಿನ ಪರಿಸ್ಥಿತಿ ಇನ್ಮುಂದೆ ಅಪಾಯಕಾರಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿರುವ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ದೆಹಲಿಯಲ್ಲಿ ಅಕ್ರಮವಾಗಿ ವಾಸವಾಗಿರುವ ವಲಸಿಗರು ತುಂಬಾ ಅಪಾಯಕಾರಿ ಎಂದು ತಿಳಿಸಿದ್ದಾರೆ.