Advertisement

ರಾಣಿ ಅಂದು ನೆಟ್ಟಿದ್ದ ಗಿಡವೀಗ ನೂರಡಿ ಎತ್ತರ !

12:23 PM Sep 10, 2022 | Team Udayavani |

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿಗೆ 1961ರಲ್ಲಿ ಆಗಮಿಸಿದ್ದ ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ ಅವರು ಲಾಲ್‌ಬಾಗ್‌ ಸಸ್ಯತೋಟದಲ್ಲಿ ಗಿಡ ನೆಟ್ಟಿದ್ದರು. ಅದೀಗ ಬರೋಬ್ಬರಿ 100 ಅಡಿ ಎತ್ತರಕ್ಕೆ ಬೆಳೆದಿದೆ !

Advertisement

ಹೌದು, ಬೆಂಗಳೂರಿಗೆ ಆಗಮಿಸಿದ್ದ ರಾಣಿಯನ್ನು ವಿಮಾನ ನಿಲ್ದಾಣದಲ್ಲಿ ಮೈಸೂರಿನ ಮಹಾರಾಜ ಹಾಗೂ ಆಗಿನ ಕರ್ನಾಟಕದ ಮೊದಲ ಗವರ್ನರ್‌ ಆಗಿದ್ದ ಜಯಚಾಮರಾಜೇಂದ್ರ ಒಡೆಯರ್‌ ಅವರು ಸ್ವಾಗತಿಸಿ, ಸಸ್ಯತೋಟ ಲಾಲ್‌ಬಾಗ್‌ಗೂ ಕರೆತಂದಿದ್ದರು. ಆಗ ರಾಣಿ ಗಾಜಿನ ಮನೆ ಮುಂಭಾಗದ ಸಂಕನ್‌ ಗಾರ್ಡನ್‌ ಬಳಿ ಅರಕೇರಿಯಾ ಕುಕ್‌ಪೈನ್‌ ಎಂಬ ಸಸಿಯನ್ನು ನೆಟ್ಟಿದ್ದರು. ಇದಕ್ಕೆ ಕ್ರಿಸ್ಮಸ್‌ ಮರ ಎಂದೂ ಹೆಸರಿದೆ.

ಎಲಿಜಬೆತ್‌ ನೆಟ್ಟಿದ್ದ ಗಿಡ ಈಗ ಸುಮಾರು 100 ಅಡಿ ಎತ್ತರ ಬೆಳೆದಿದ್ದು, 5 ಅಡಿ ಸುತ್ತಳತೆ ಹೊಂದಿದೆ. ಇನ್ನೂ 50 ವರ್ಷಗಳ ಕಾಲ ಬದುಕಬಹುದು 100 ಅಡಿ ಎತ್ತರ ಬೆಳೆಯಬಹುದಂತೆ. ಯುಗೋಸ್ಲೇವಿಯಾ ಅಧ್ಯಕ್ಷ ಮಾರ್ಷಲ್‌ ಟಿಟೋ, ಯುಎನ್‌ ಸೆಕ್ರೆಟರಿ ಜನರಲ್‌ ಡ್ಯಾಗ್‌ ಯಮರ್ಸ್‌ಜೋನ್‌, ನೇಪಾಲದ ಕಿಂಗ್‌ ಬೀರೇಂದ್ರ ಮತ್ತಿತರರೂ ಇಲ್ಲಿ ಸಸಿ ನೆಟ್ಟಿದ್ದರು. ಗಡಿನಾಡ ಗಾಂಧಿ ಖಾನ್‌ ಅಬ್ದುಲ್‌ ಗಫಾರ್‌ ಖಾನ್‌ ಅವರು ರಾಣಿ ನೆಟ್ಟ ಗಿಡದ ಪಕ್ಕದಲ್ಲೇ, ಅದೇ ಜಾತಿಯ ಸಸಿ ನೆಟ್ಟಿದ್ದರು. ಪಂಡಿತ್‌ ಜವಾಹರಲಾಲ್‌ ನೆಹರೂ ಸಹ ಗಾಜಿನ ಮನೆಯ ಮುಂಭಾಗ ಪ್ರೈಡ್‌ ಆಫ್ ಇಂಡಿಯಾ ಎಂಬ ಸಸಿ ನೆಟ್ಟಿದ್ದರು. ಮೊದಲ ರಾಷ್ಟ್ರಪತಿ ಡಾ| ರಾಜೇಂದ್ರ ಪ್ರಸಾದ್‌ ಸಂಪಿಗೆ ಸಸಿ, ಇಂದಿರಾ ಗಾಂಧಿ ಅವರು ಅಶೋಕ ಸಸಿಯನ್ನು ನೆಟ್ಟಿದ್ದರು.

ಕೊಹಿನೂರು ವಜ್ರದ ಒಡತಿ
ಅತ್ಯದ್ಭುತ “ಬೆಳಕಿನ ಶಿಖರ’ ಎನಿಸಿಕೊಳ್ಳುವ ವಿಶ್ವವಿಖ್ಯಾತ ವಜ್ರ “ಕೊಹಿನೂರ್‌’ನ ಒಡತಿಯಾಗಿದ್ದವರು 2 ನೇ ಎಲಿಜಬೆತ್‌. ಈ ಕಿರೀಟ ಮುಂದಿನ ರಾಜ 3ನೇ ಚಾರ್ಲ್ಸ್‌ ಅವರ ಪತ್ನಿ ಕ್ಯಾಮಿಲ್ಲಾ ಅವರ ಮುಡಿಗೇರಲಿದೆ. ಈ ಕಿರೀಟದಲ್ಲಿ ಕೊಹಿನೂರ್‌ ಸೇರಿ 2,800 ವಜ್ರಗಳಿವೆ. ಕ್ಯಾಮಿಲ್ಲಾ ಅವರು ಚಾರ್ಲ್ಸ್‌ನ 2ನೇ ಪತ್ನಿಯಾಗಿರುವ ಕಾರಣ, ಅವರಿಗೆ ಕಿರೀಟ ದಕ್ಕುತ್ತದೆಯೇ ಎಂಬ ಸಂಶಯವಿತ್ತು. ಆದರೆ, “ನನ್ನ ಬಳಿಕ ಕ್ಯಾಮಿಲ್ಲಾ ಅದರ ಒಡತಿ’ ಎಂದು ರಾಣಿ ಎಲಿಜಬೆತ್‌ ಘೋಷಿಸಿ ವಿವಾದಕ್ಕೆ ತೆರೆಎಳೆದಿದ್ದರು. ಕೊಹಿನೂರ್‌ ವಜ್ರವು 14ನೇ ಶತಮಾನದಲ್ಲಿ ಭಾರತದ ಗೋಲ್ಕೊಂಡಾ ಗಣಿಯಲ್ಲಿ ಸಿಕ್ಕಿತ್ತು. 1849ರಲ್ಲಿ ಆಂಗ್ಲೋ ಸಿಖ್‌ ಯುದ್ಧದಲ್ಲಿ ಸೋತ ಮಹಾರಾಜ ದುಲೀಪ್‌ ಸಿಂಗ್‌ ಇದನ್ನು ಬ್ರಿಟಿಷರಿಗೆ ಒಪ್ಪಿಸಿದ್ದರು. ಈ ವಜ್ರವು 186 ಕ್ಯಾರೆಟ್‌ನಷ್ಟು ಶುದ್ಧತೆ ಹೊಂದಿತ್ತು.

ನಾಳೆ ಶೋಕಾಚರಣೆ
ಎಲಿಜಬೆತ್‌ ಅವರ ಗೌರವಾರ್ಥ ಭಾರತವು ರವಿವಾರ (ಸೆ.11) ಒಂದು ದಿನದ ಶೋಕಾಚರಣೆ ಘೋಷಿಸಿದೆ. ಎಲ್ಲ ಸರಕಾರಿ ಕಚೇರಿಗಳು ಸೇರಿದಂತೆ ರಾಷ್ಟ್ರಧ್ವಜ ಹಾರುತ್ತಿರುವಂಥ ಕಟ್ಟಡಗಳಲ್ಲಿ ಅರ್ಧಕ್ಕೆ ಧ್ವಜವನ್ನು ಹಾರಿಸ ಲಾಗುವುದು’ ಎಂದು ಸರಕಾರ ಹೇಳಿದೆ.

Advertisement

ಚಾರ್ಲ್ಸ್‌ “ರಾಜ’;ಇಂದು ಅಧಿಕೃತ ಘೋಷಣೆ
ಬ್ರಿಟನ್‌ನ ಹೊಸ ರಾಜ 3ನೇ ಚಾರ್ಲ್ಸ್‌ ಅವರು ಶುಕ್ರವಾರ ಸ್ಕಾಟ್ಲೆಂಡ್‌ನಿಂದ ಲಂಡನ್‌ಗೆ ವಾಪಸಾಗಿದ್ದಾರೆ. ಶನಿವಾರ ಯು.ಕೆ.ಯ ಆ್ಯಕ್ಸೆಷನ್‌ ಕೌನ್ಸಿಲ್‌ ಸಭೆ ಸೇರಿ 3ನೇ ಚಾರ್ಲ್ಸ್‌ರನ್ನು ಅಧಿಕೃತವಾಗಿ ರಾಜ ಎಂದು ಘೋಷಿಸಲಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next