ಮುಂಬಯಿ: ಕೊರೊನಾ ಬಿಕ್ಕಟ್ಟಿನಿಂದ ಕಳೆದ ಎರಡು ವರ್ಷಗಳಿಂದ ಮುಚ್ಚಿದ್ದ ಪಾರಂಪರಿಕ ಆಷಾಢ ಏಕಾದಶಿ ಪಂಢರಾಪುರ ವಾರ್ಕರಿ ಪಾದಯಾತ್ರೆ ಪಲ್ಲಕಿ ಉತ್ಸವ ಈ ವರ್ಷ ಸಂಪ್ರದಾಯಿಕವಾಗಿ ನಡೆಯಲಿದೆ.
2 ವರ್ಷಗಳಲ್ಲಿ ಕೊರೊನಾ ದಿಂದಾಗಿ ಸಂತರ ಪಲ್ಲಕಿಗಳ ಪಾದಯಾತ್ರೆ ಬದಲು ಎಸ್‌ಟಿ ಬಸ್‌ಗಳ ಮೂಲಕ ಪಂಢರಾ ಪುರಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವರ್ಷ ಸಂತ ಜ್ಞಾನೇಶ್ವರ ಮಹಾ ರಾಜರ ಪಲ್ಲಕಿಯು ವಾರ್ಕರಿ ಪಾದ ಯಾತ್ರೆಯೊಂದಿಗೆ ಜೂ. 21ರಂದು ಆಳಂದಿಯಿಂದ ಪಂಢರಾಪುರಕ್ಕೆ ತೆರಳಲಿದೆ.
ಈ ವರ್ಷದಿಂದ ವಾಹನ ಪಾಸ್ ಈ ವರ್ಷ ಸಮಾರಂಭದ ದಿನ ಹೆಚ್ಚಾಗಿರುವುದರಿಂದ ಪಲ್ಲಕಿ ಸಮಾ ರಂಭವು ಲೋನಾಂದಾದಲ್ಲಿ ಎರಡೂವರೆ ದಿನ ಮತ್ತು ಫಲ್ಟಾನ್‌ನಲ್ಲಿ ಎರಡು ದಿನಗಳವರೆಗೆ ಇರುತ್ತದೆ. ವಾರ್ಕರಿಗಳ ಬೇಡಿಕೆಯಂತೆ ಈ ವರ್ಷದಿಂದ ಸಂಸ್ಥಾನದ ಸಹಿ ಮತ್ತು ಮುದ್ರೆಯೊಂದಿಗೆ ವಾಹನ ಪಾಸ್‌ಗಳನ್ನು ನೀಡಲಾಗುವುದು ಎಂದು ಶ್ರೀ ಸಂತ ಜ್ಞಾನೇಶ್ವರ ಮಹಾರಾಜ್ ಪಲ್ಲಕಿ (ಪಾಲ್ಕಿ) ಸೋಹಲಾ ಮುಖ್ಯಸ್ಥ ನ್ಯಾಯವಾದಿ ವಿಕಾಸ್ ಧಾಗೆ ಪಾಟೀಲ್ ಅವರು ಹೇಳಿದ್ದಾರೆ. ಶ್ರೀಕ್ಷೇತ್ರ ಪಂಢರಾಪುರದ ಸಂತ ಜ್ಞಾನೇಶ್ವರ ಮಹಾರಾಜರ ಮಠದಲ್ಲಿ ಆಷಾಢ ವಾರಿ ದಿಂಡಿ ಪಲ್ಲಕಿ ಯೋಜನೆ ಸಭೆಯು ಪಲ್ಲಕಿ ಸಮಾರಂಭದ ಮುಖ್ಯಸ್ಥ ಬಾಳಾಸಾಹೇಬ ಅರಫಾಲ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಊರ್ಜಿತ್ ಸಿಂಗ್ ಶಿತೋಲೆ, ಮುಖ್ಯ ಟ್ರಸ್ಟಿ ಯೋಗೀಶ್ ದೇಸಾಯಿ, ಟ್ರಸ್ಟಿ ಡಾ| ಅಭಯ ತಿಲಕ್, ನಾಮದೇವ್ ಮಹಾರಾಜ್ ವಾಸ್ಕರ್, ರಾಣು ಮಹಾರಾಜ್ ವಾಸ್ಕರ್, ಶ್ರೀ ವಿಠಲ-ರುಕ್ಮಿಣಿ ಮಂದಿರ ಸಮಿತಿಯ ಟ್ರಸ್ಟಿ ಮೌಳಿ ಜಲಗಾಂವ್ಕರ್, ದಿಂಡಿ ಸಮಾಜದ ಅಧ್ಯಕ್ಷ ಭಾವು ಮಹಾರಾಜ್ ಗೋಸಾವಿ, ಕಾರ್ಯದರ್ಶಿ ಮಾರುತಿ ಗೋಸಾವಿ ಉಪಸ್ಥಿತರಿದ್ದರು.