Advertisement

ಆಫ್ರಿಕಾ ಗೆಲ್ಲಲೇಬೇಕಿದೆ: ಜಾಕ್‌ ಕ್ಯಾಲಿಸ್‌

12:58 AM Jun 04, 2019 | Team Udayavani |

ಲಂಡನ್‌: ದಕ್ಷಿಣ ಆಫ್ರಿಕಾ ವಿಶ್ವಕಪ್‌ನ ಮುಂದಿನ ಯಾವುದೇ ಪಂದ್ಯಗಳಲ್ಲಿ ತಪ್ಪು ಮಾಡಲೇಬಾರದು ಮತ್ತು ಸೆಮಿಫೈನಲಿಗೇರುವ ಆಸೆ ಜೀವಂತವಿರಿಸಿಕೊಳ್ಳಬೇಕಾದರೆ ಇನ್ನುಳಿದ ಏಳೂ ಪಂದ್ಯಗಳಲ್ಲಿ ಗೆಲುವು ಸಾಧಿಸಲೇ ಬೇಕಾಗಿದೆ ಎಂದು ಮಾಜಿ ಆಲ್‌ರೌಂಡರ್‌ ಜಾಕ್‌ ಕ್ಯಾಲಿಸ್‌ ಹೇಳಿದ್ದಾರೆ.

Advertisement

ದಕ್ಷಿಣ ಆಫ್ರಿಕಾ ಆರಂಭಿಕ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡಿಗೆ 104 ರನ್ನಿನಿಂದ ಶರಣಾಗಿದ್ದರೆ, ರವಿವಾರ ಬಾಂಗ್ಲಾದೇಶದ ವಿರುದ್ಧ 21 ರನ್ನಿನಿಂದ ಸೋತು ತೀವ್ರ ಆಘಾತಕ್ಕೆ ಒಳಗಾಗಿದೆ.

ರನ್‌ಧಾರಣೆ ಅಗತ್ಯ
ದಕ್ಷಿಣ ಆಫ್ರಿಕಾ ಕಡಿಮೆಪಕ್ಷ ಆರು ಪಂದ್ಯಗಳಲ್ಲಿ ಗೆಲ್ಲಬೇಕಿದೆ. ಐದು ಪಂದ್ಯಗಳಲ್ಲಿ ಉತ್ತಮ ರನ್‌ಧಾರಣೆ ಯೊಂದಿಗೆ ಗೆದ್ದರೆ ಅಗ್ರ ನಾಲ್ಕರಲ್ಲಿ ಸ್ಪರ್ಧೆ ಮುಗಿಸಬಹುದು ಎಂದು ಕ್ಯಾಲಿಸ್‌ ವಿವರಿಸಿದರು.

ರೌಂಡ್‌ ರಾಬಿನ್‌ ಮಾದರಿಯ ಈ ಕೂಟದಲ್ಲಿ ಅಗ್ರ ನಾಲ್ಕು ತಂಡಗಳು ಸೆಮಿಫೈನಲಿಗೇರಲಿವೆ. ಹಾಗಾಗಿ ಬುಧವಾರ ನಡೆಯುವ ಭಾರತ ವಿರುದ್ಧದ ಪಂದ್ಯದಲ್ಲಿ ಒಂದು ವೇಳೆ ಸೋತರೆ ದಕ್ಷಿಣ ಆಫ್ರಿಕಾದ ರನ್‌ಧಾರಣೆ ಮತ್ತು ಮುನ್ನಡೆಗೆ ಹೊಡೆತ ಬೀಳುವ ಸಾಧ್ಯತೆಯಿದೆ. ಯಾಕೆಂದರೆ ಒಂದು ವೇಳೆ ಅಂಕ ಮತ್ತು ಗೆಲುವು ಸಮನಾದರೆ ಮುನ್ನಡೆಯ ನಿರ್ಧಾರವನ್ನು ರನ್‌ರೇಟ್‌ ಮೂಲಕ ಮಾಡಲಾಗುತ್ತದೆ.

ಭಾರತದ ಸವಾಲು ಸುಲಭವಲ್ಲ
“ಭಾರತ ವಿರುದ್ಧದ ಪಂದ್ಯ ನಮಗೆ ಸುಲಭವಲ್ಲ. ಆದರೆ ಅದು ಭಾರತಕ್ಕೆ ಮೊದಲ ಪಂದ್ಯವಾಗಿದ್ದರೆ ನಮಗೆ ಮೂರನೆಯದು. ಹಾಗಾಗಿ ಸ್ವಲ್ಪಮಟ್ಟಿಗೆ ನಾವು ಮೇಲುಗೈ ಸಾಧಿಸಬಹುದು. ಭಾರತ ಕಳೆದೊಂದು ವಾರದಿಂದ ಆಡಿಲ್ಲ. ಅವರಿಗೆ ಮೊದಲ ಪಂದ್ಯದ ನರ್ವಸ್‌ ಇರಬಹುದು. ಆದರೆ ನಾವು ಪಂದ್ಯಕ್ಕೆ ಒಗ್ಗಿಕೊಂಡಿದ್ದೇವೆ’ ಎಂದರು ಕ್ಯಾಲಿಸ್‌.

Advertisement

“ಕ್ರಿಕೆಟ್‌ನಲ್ಲಿ ಕೆಲವೊಮ್ಮೆ ಪವಾಡ ನಡೆಯುತ್ತದೆ. ಒಂದು ವೇಳೆ ನಾವು ಭಾರತ ವಿರುದ್ಧ ಗೆದ್ದರೆ ಮುಂದಿನ ಪಂದ್ಯಗಳಲ್ಲಿ ಗೆಲ್ಲಲು ಪ್ರಯತ್ನಿಸಬಹುದು ಮತ್ತು ಸೆಮಿಫೈನಲ್‌ ರೇಸ್‌ನಲ್ಲಿ ನಾವು ಕೂಡ ಸ್ಪರ್ಧಿಯಾಗಬಹುದು’ ಎಂದು ಕ್ಯಾಲಿಸ್‌ ಹೇಳಿದರು.

ಬಾಂಗ್ಲಾ ವಿರುದ್ಧದ ಪಂದ್ಯದ ವೇಳೆ ನಾಯಕ ಫಾ ಡು ಪ್ಲೆಸಿಸ್‌ ಸಮರ್ಪಕ ಪರ್ಯಾಯ ಯೋಜನೆ ಹಾಕಿಕೊಂಡಿಲ್ಲ ಎಂದು ಕ್ಯಾಲಿಸ್‌ ಟೀಕಿಸಿದರು. ಪಂದ್ಯದ ಬಗ್ಗೆ ಯೋಜನೆ ಹಾಕಿಕೊಳ್ಳುವುದು ಒಳ್ಳೆಯದು. ಆದರೆ ಒಂದು ವೇಳೆ ಅದು ಕಾರ್ಯಗತಗೊಳ್ಳದಿದ್ದ ಸಂದರ್ಭ ನಮ್ಮಲ್ಲಿ ಪರ್ಯಾಯ ಯೋಜನೆ ಇರುವ ಅಗತ್ಯವಿರುತ್ತದೆ ಎಂದ ಕ್ಯಾಲಿಸ್‌, ಈ ಪಂದ್ಯದಲ್ಲಿ ನಾವು ಒಂದು ಹೆಜ್ಜೆ ಹಿಂದೆ ಇದ್ದೆವು ಎಂದರು. ದಕ್ಷಿಣ ಆಫ್ರಿಕಾ ವೇಗದ ಬೌಲರ್‌ಗಳಿಗೆ ಗಾಯವಾಗಿರುವುದರಿಂದ ತಂಡಕ್ಕೆ ಹೊಡೆತ ಬಿದ್ದಿದೆ ಎಂಬುದನ್ನು ಕ್ಯಾಲಿಸ್‌ ಒಪ್ಪಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next