ಅಫ್ಘಾನಿಸ್ತಾನದ ಮಹಿಳೆಯರು ಬುರ್ಖಾ ಧರಿಸಬೇಕು ಎಂಬ ತಾಲಿಬಾನ್ ಹುಕುಂ ವಿರುದ್ಧ ಪ್ರತಿಭಟನೆಯ ಅಂಗವಾಗಿ ಅಫ್ಘಾನ್ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು, ಅದರ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಆನ್ ಲೈನ್ ಅಭಿಯಾನ ಆರಂಭಿಸಿದ್ದಾರೆ. ತಾಲಿಬಾನ್ ತಾಕೀತಿಗೆ ಸಡ್ಡು ಹೊಡೆದಿರುವ ಅಫ್ಘಾನಿಸ್ತಾನ್ ಮತ್ತು ವಿದೇಶಗಳಲ್ಲಿ ವಾಸವಾಗಿರುವ ನೂರಾರು ಅಫ್ಘಾನ್ ಮಹಿಳೆಯರು #AfghanistanCulture ಹ್ಯಾಶ್ ಟ್ಯಾಗ್ ಮೂಲಕ ಆನ್ ಲೈನ್ ಅಭಿಯಾನ ಆರಂಭಿಸಿದ್ದಾರೆ.
ಮಹಿಳೆಯರ ಇಡೀ ದೇಹ ಹಾಗೂ ಮುಖ ಮುಚ್ಚಿಕೊಳ್ಳುವ ಬುರ್ಖಾ ಧರಿಸಬೇಕೆಂಬ ತಾಲಿಬಾನ್ ಆದೇಶಕ್ಕೆ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಖುದ್ದು ಸಾಂಪ್ರದಾಯಿಕ ಉಡುಗೆ ತೊಟ್ಟು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಮಹಿಳೆಯರ ಉಡುಗೆ, ತೊಡುಗೆಯನ್ನು ನಿಷೇಧಿಸುವ ತಾಲಿಬಾನ್ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಹಿಳೆಯರು #DoNotTouchMyClothes (ನಮ್ಮ ಉಡುಗೆ ವಿಚಾರದಲ್ಲಿ ಹಸ್ತಕ್ಷೇಪ ಬೇಡ) ಎಂಬ ಹ್ಯಾಶ್ ಟ್ಯಾಗ್ ನಡಿಯೂ ಅಭಿಯಾನ ನಡೆಯುತ್ತಿದೆ ಎಂದು ವರದಿ ವಿವರಿಸಿದೆ.
ಅಫ್ಘಾನ್ ಮಹಿಳೆಯರು ಧರಿಸುವ ಸಾಂಪ್ರದಾಯಿಕ ಉಡುಗೆ ಪಾದದವರೆಗೂ ಮುಚ್ಚಲಿದೆ. ಅಲ್ಲದೇ ತಮ್ಮ ತಲೆಯ ಭಾಗವನ್ನೂ ಸಾಂಪ್ರದಾಯಿಕ ಉಡುಗೆಯಲ್ಲಿ ಮುಚ್ಚಿಕೊಳ್ಳುತ್ತಾರೆ. ಈ ಹಿಂದೆಯೂ ತಾಲಿಬಾನ್ ಆಡಳಿತ ನಡೆಸಿದ್ದ ವೇಳೆ ಬುರ್ಖಾ ಕಡ್ಡಾಯವಾಗಿ ಧರಿಸುವ ನಿರ್ಬಂಧ ಹೇರಿತ್ತು. ಇದೀಗ ಮತ್ತೆ ಆಗಸ್ಟ್ 15ರಂದು ಅಫ್ಘಾನಿಸ್ತಾನದ ಅಧಿಕಾರವನ್ನು ಮರಳಿ ತೆಕ್ಕೆಗೆ ತೆಗೆದುಕೊಂಡ ತಾಲಿಬಾನ್ ಷರಿಯಾ ಕಾನೂನನ್ನು ಜಾರಿಗೊಳಿಸಿದೆ.
ತಮೀನಾ ಅಝೀಜ್ ಎಂಬ ಯುವತಿ, ನಾನು ಸಾಂಪ್ರದಾಯಿ ಅಫ್ಘಾನ್ ಉಡುಗೆ ತೊಡಲು ಹೆಮ್ಮೆ ಪಡುತ್ತೇನೆ. ಇದು ವಿವಿಧ ವರ್ಣದ ಮತ್ತು ಸುಂದರ ಉಡುಗೆಯಾಗಿದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾಳೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾದ ಮೇಲೆ ಉಗ್ರರು ಹಲವಾರು ಷರಿಯಾ ಆದೇಶಗಳನ್ನು ಹೊರಡಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ವಾತಂತ್ರ್ಯವನ್ನು ಕುಂಠಿತಗೊಳಿಸಲಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಯುವತಿಯರಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡಲಾಗುವುದು, ಆದರೆ ಯುವತಿಯರು ಮತ್ತು ಯುವಕರು ಪ್ರತ್ಯೇಕ ಕಲಿಕೆ ಮತ್ತು ಇಸ್ಲಾಮಿಕ್ ಡ್ರೆಸ್ ಕೋಡ್ ಕಡ್ಡಾಯ ಎಂದು ತಾಲಿಬಾನ್ ಘೋಷಿಸಿತ್ತು.