ಇಸ್ಲಾಬಾಮಾದ್/ಕಾಬೂಲ್: ಅಫಾನಿಸ್ಥಾನದ ಹೆರಾತ್, ಲಷ್ಕರ್ ಘಾ, ಕಂದಹಾರ್‌ನಲ್ಲಿ ತಾಲಿಬಾನ್ ಉಗ್ರರು ಮತ್ತು ಆ ದೇಶದ ಯೋಧರ ನಡುವೆ ರವಿವಾರ ಭೀಕರ ಕಾಳಗ ನಡೆದಿದೆ. ಮೂರು ಪ್ರಾಂತ್ಯಗಳ ವ್ಯಾಪ್ತಿಯಲ್ಲಿರುವ ಗ್ರಾಮೀಣ ಭಾಗದಲ್ಲಿ ಮತ್ತು ಇತರ ಭಾಗಗಳಲ್ಲಿ ಉಗ್ರ ಸಂಘಟನೆ ಕಂಬಂಧ ಬಾಹುಗಳನ್ನು ಈಗಾಗಲೇ ವಿಸ್ತರಿಸಿದೆ. ಅದಕ್ಕೆ ಪೂರಕವಾಗಿ ಉಗ್ರರು ಸಿಡಿಸಿದ ರಾಕೆಟ್‌ಗಳ ಪೈಕಿ ಮೂರು ಕಂದಹಾರ್ ವಿಮಾನ ನಿಲ್ದಾಣದ ರನ್‌ವೇಗೆ ಅಪ್ಪಳಿಸಿದೆ. ಶನಿವಾರ ರಾತ್ರಿ ಪ್ರಾಂತೀಯ ಸರಕಾರದ ಅಧಿಕಾರಿಗಳು ಈ ಅಂಶ ಖಚಿತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಂದಹಾರದ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟಗಳನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮುಖ್ಯಸ್ಥ ಮಸ್ಸೂದ್ ಪಸ್ತೂನ್ ಹೇಳಿದ್ದಾರೆ.
ಯುದ್ಧಗ್ರಸ್ತ ರಾಷ್ಟ್ರದ ಎರಡನೇ ಅತೀದೊಡ್ಡ ನಗರವಾಗಿರುವ ಕಂದಹಾರ್‌ನ ವಿಮಾನ ನಿಲ್ದಾಣ ಅಫ್ಘಾನಿಸ್ಥಾನದ ವಾಯುಪಡೆಗೆ ಸರಕು, ಶಸ್ತ್ರಾಸ್ತ್ರ ಮತ್ತು ಇತರ ಅಗತ್ಯಗಳನ್ನು ಪೂರೈಸಲು, ಸರಕಾರಿ ಅಧಿಕಾರಿಗಳು, ನಾಗರಿಕರ ವಿಮಾನಯಾನಕ್ಕೆ ಪ್ರಮುಖ ಕೊಂಡಿಯೇ ಆಗಿದೆ.
ಲಷ್ಕರ್ ಘಾದ ನಗರದ ಒಳಭಾಗದಲ್ಲಿ ಉಗ್ರರು ಹಾಗೂ ಸರಕಾರಿ ಪಡೆಗಳ ನಡುವೆ ಘನಘೋರ ಹೋರಾಟ ನಡೆಸಿದೆ. ಸಂಗ್ರಾಮದ ಬಗ್ಗೆ ಸುದ್ದಿಸಂಸ್ಥೆ “ಎಎಫ್ಪಿ’ ಜತೆಗೆ ಮಾತನಾಡಿದ ಸ್ಥಳೀಯ ಹಲೀಮ್ ಕರಿಮಿ “ತಾಲಿಬಾನ್ ಅಥವಾ ಸರಕಾರಿ ಪಡೆಗಳು ನಮ್ಮ ಮೇಲೆ ಕರುಣೆ ತೋರಿಸುವುದಿಲ್ಲ ಮತ್ತು ಬಾಂಬ್ ಹಾಕುವುದನ್ನು ನಿಲ್ಲಿಸುವುದಿಲ್ಲ’ ಎಂದರು.
ಅಡಗುತಾಣ ಧ್ವಂಸ: ಕಂದಹಾರ್ ಪ್ರಾಂತ್ಯದ ಝೆರೈ ದಿಲ್ಲೆಯಲ್ಲಿ ತಾಲಿಬಾನ್ ಉಗ್ರರ ಅಡಗುತಾಣವನ್ನು ಆಫ್ಘಾನ್ ಪಡೆಗಳು ನಾಶಮಾಡಿವೆ. ಈ ವಿಡಿಯೋವನ್ನು ಅಲ್ಲಿನ ರಕ್ಷಣ ಸಚಿವಾಲಯ ಬಿಡುಗಡೆ ಮಾಡಿದೆ.
262 ಉಗ್ರರ ಸಾವು :
ಅಫ್ಘಾನಿಸ್ಥಾನದ ರಕ್ಷಣ ಸಚಿವಾಲ ಯ ಟ್ವೀಟ್ ಮಾಡಿದ ಪ್ರಕಾರ 24 ಗಂಟೆಗಳಲ್ಲಿ 262 ಮಂದಿ ತಾಲಿ ಬಾನಿಗಳು ಜೀವ ಕಳೆದುಕೊಂಡಿ ದ್ದಾರೆ. ಪಕ್ತಿಕಾ ಪ್ರಾಂತ್ಯದ ವ್ಯಾಪ್ತಿ ಯಲ್ಲಿ ನಡೆದ ಗುಂಡಿನ ಚಕಮಕಿ ಯಲ್ಲಿ ನಾಲ್ವರು ಪಾಕಿಸ್ಥಾನದ ಉಗ್ರರೂ ಹತ್ಯೆಗೀಡಾಗಿದ್ದಾರೆ.