Advertisement

ಅಫ್ಘಾನಿಸ್ಥಾನಕ್ಕೆ ಐತಿಹಾಸಿಕ ಟೆಸ್ಟ್ ಗೆಲುವು

10:02 AM Mar 18, 2019 | Team Udayavani |

ಡೆಹ್ರಾಡೂನ್: ಐರ್ಲೆಂಡ್ ವಿರುದ್ಧದ  ಏಕೈಕ ಟೆಸ್ಟ್ ಪಂದ್ಯವನ್ನು ಏಳು ವಿಕೆಟ್ ಗಳಿಂದ ಗೆದ್ದ ಅಫ್ಘಾನಿಸ್ಥಾನ ಕ್ರಿಕೆಟ್ ತಂಡ ಇತಿಹಾಸ ನಿರ್ಮಿಸಿದೆ. ತನ್ನ ಟೆಸ್ಟ್ ಇತಿಹಾಸದಲ್ಲಿ ಚೊಚ್ಚಲ ಗೆಲುವು ದಾಖಲಿಸಿದೆ.

Advertisement

ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನ್ ಆಲ್ ರೌಂಡ್ ಪ್ರದರ್ಶನ ನೀಡಿ ಗೌರವಯುತ ಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಐರ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಗಳಿಸಿದ್ದು ಕೇವಲ 172 ರನ್ ಮಾತ್ರ. ವಿಶೇಷವೇನೆಂದರೆ 11ನೇ ಆಟಗಾರನಾಗಿ ಬ್ಯಾಟಿಂಗ್ ಮಾಡಿದ ಟಿಮ್ ಮುರ್ತಾಫ್ 54 ರನ್ ಗಳಿಸಿ ತಂಡದ ಪರ ಅತೀ ಹೆಚ್ಚು ರನ್ ಗಳಿಸಿದ್ದರು. 

ರಹಮತ್ ಶಾ, ಹಶ್ಮತುಲ್ಲಾಹ್ ಶಹೀದಿ ಮತ್ತು ನಾಯಕ ಅಸ್ಗರ್ ಅಫ್ಘಾನ್ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ಥಾನ ಮೊದಲ ಇನ್ನಿಂಗ್ಸ್ ನಲ್ಲಿ 314 ರನ್ ಗಳಿಸಿತು. ರೆಹಮತ್ ಶಾ 98 ರನ್ ಔಟ್ ಆಗಿ ಅಫ್ಘಾನ್ ಪರ ಮೊದಲ ಟೆಸ್ಟ್ ಶತಕ ಬಾರಿಸುವ ಅವಕಾಶ ತಪ್ಪಿಸಿಕೊಂಡರು. ಶಹೀದಿ ಮತ್ತು ಅಸ್ಗರ್ ಅಫ್ಘಾನ್ ತಲಾ 61 ಮತ್ತು 67 ರನ್ ಗಳಿಸಿದರು.


142 ರನ್ ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ರ‍್ಲೆಂಡ್ ತಂಡಕ್ಕೆ ಆಂಡ್ರೂ ಬಾಲ್ಬಿರ್ನಿ ಮತ್ತು ಕೆವಿನ್ ಒಬ್ರೈನ್  ಆಸರೆಯಾದರು. ಬಾಲ್ಬಿರ್ನಿ 82 ರನ್ ಗಳಿಸಿದರೆ ಒಬ್ರೈನ್  56 ರನ್ ಗಳಿಸಿದರು. ಅಂತಿಮವಾಗಿ ತಂಡ 288 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಅಫ್ಘಾನ್ ಪರ ರಶೀದ್ ಖಾನ್ ಐದು ವಿಕೆಟ್ ಕಿತ್ತರು. 

ಟೆಸ್ಟ್ ಇತಿಹಾಸದ ಮೊದಲ ಜಯ ಸಾಧಿಸಲು 147 ರನ್ ಗಳಿಸುವ ಗುರಿ ಪಡೆದ ಅಫ್ಘಾನಿಸ್ಥಾನಕ್ಕೆ ಮತ್ತೆ ರೆಹಮತ್ ಶಾ ನೆರವಾದರು. ಶಾ 76 ರನ್ ಗಳಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ಇಹ್ಸಾನುಲ್ಲಾಹ್ ಜನಾತ್ 65 ರನ್ ಗಳಿಸಿದರು. ಇವರಿಬ್ಬರ 139 ರನ್ ಜೊತೆಯಾಟದ ನೆರವಿನಿಂದ ಅಫ್ಘಾನ್ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಎರಡೂ ಇನ್ನಿಂಗ್ಸ್ ಗಳಲ್ಲಿ ಅರ್ಧಶತಕ ಬಾರಿಸಿದ ರೆಹಮತ್ ಶಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.


ಭಾರತವನ್ನು ಹಿಂದಿಕ್ಕಿದ ಅಫ್ಘಾನ್: ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಜಯ ಸಾಧಿಸಲು ಭಾರತ ಬರೋಬ್ಬರಿ 20 ವರ್ಷಗಳ ಕಾಲ ಕಾದಿತ್ತು. ತಾನಾಡಿದ 25ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಸಲ ಗೆಲುವಿನ ನಗೆ ಬೀರಿತ್ತು. ಆದರೆ ಅಫ್ಘಾನಿಸ್ಥಾನ ತನ್ನ ಎರಡನೇ ಟೆಸ್ಟ್ ಪಂದ್ಯದಲ್ಲೇ ಜಯ ಸಾಧಿಸಿ ದಾಖಲೆ ಬರೆಯಿತು. 2018ರಲ್ಲಿ ಭಾರತದ ವಿರುದ್ಧ ಟೆಸ್ಟ್ ಪದಾರ್ಪಣೆ ಮಾಡಿದ್ದ ಅಫ್ಘಾನ್ ಮೊದಲ ಪಂದ್ಯದಲ್ಲಿ ಸೋತಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next