Advertisement

Afghanistan: ಭಾರತದಲ್ಲಿ ರಾಯಭಾರಿ ಕಚೇರಿ ಮುಚ್ಚಿದ ಆಫ್ಘನ್‌

07:50 PM Oct 01, 2023 | Team Udayavani |

ಅಫ್ಘಾನಿಸ್ತಾನ ಸರ್ಕಾರವು ಭಾರತದಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಮುಚ್ಚಿದೆ. ಸಿಬ್ಬಂದಿ ಮತ್ತು ಸಂಪನ್ಮೂಲ ಕೊರತೆ, ದೇಶದ ಹಿತಾಸಕ್ತಿಗೆ ತಕ್ಕಂತೆ ಕಾರ್ಯನಿರ್ವಹಿಸಲು ವಿಫ‌ಲವಾಗಿರುವ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಅಫ್ಘಾನಿಸ್ತಾನ ರಾಯಭಾರ ಕಚೇರಿಯು ಹೇಳಿದೆ. ಈ ರಾಯಭಾರ ಕಚೇರಿಯ ಉಸ್ತುವಾರಿಯನ್ನು ಭಾರತ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ.

Advertisement

ತಾಲಿಬಾನ್‌ ಸರ್ಕಾರ ಗುರುತಿಸಿಲ್ಲ
2021ರಲ್ಲಿ ಅಫ್ಘಾನಿಸ್ತಾನದ ನಿಯಂತ್ರಣವನ್ನು ತಾಲಿಬಾನ್‌ ತೆಗೆದುಕೊಂಡಿತು. ಭಾರತವು ಇಲ್ಲಿಯವರೆಗೆ ತಾಲಿಬಾನ್‌ ಸರ್ಕಾರವನ್ನು ಗುರುತಿಸಿಲ್ಲ. ಆದರೆ ರಾಯಭಾರ ಕಚೇರಿ ತನ್ನ ಕಾರ್ಯಾಚರಣೆ ಮುಂದುವರಿಸಲು ಅನುಮತಿ ನೀಡಿತ್ತು. ಈ ಹಿಂದೆ ಅಫ್ಘಾನಿಸ್ತಾನ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಅವರು ನೇಮಿಸಿದ್ದ ರಾಜತಾಂತ್ರಿಕ ಅಧಿಕಾರಿಗಳೇ ಮುಂದುವರಿದಿದ್ದರು.

ಭಾರತದಿಂದ ಬೆಂಬಲ ಇಲ್ಲ
ಭಾರತ ಸರ್ಕಾರದಿಂದ ಸೂಕ್ತ ಬೆಂಬಲ ಇಲ್ಲದ ಕಾರಣ, ತನ್ನ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅಫ್ಘಾನಿಸ್ತಾನ ರಾಯಭಾರ ಕಚೇರಿ ಆರೋಪಿಸಿದೆ. ಈ ಆರೋಪಗಳು ಕುರಿತು ಭಾರತ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆಫ್ಘನ್‌ನ ಹಿತಾಸಕ್ತಿ ಕಾಪಾಡಲು ವಿಫ‌ಲ
ಅಫ್ಘಾನಿಸ್ತಾನದ ಹಿತಾಸಕ್ತಿ ಕಾಪಾಡಲು ಹಾಗೂ ಆಫ್ಘನ್‌ ಪ್ರಜೆಗಳ ನಿರೀಕ್ಷೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸುವಲ್ಲಿ ನಾವು ವಿಫ‌ಲವಾಗಿದ್ದೇವೆ ಎಂದು ಅಲ್ಲಿನ ರಾಯಭಾರಿ ಕಚೇರಿ ಒಪ್ಪಿಕೊಂಡಿದೆ.

ಸಿಬ್ಬಂದಿ ಕೊರತೆ:
ಅನಿರೀಕ್ಷಿತ ಪರಿಸ್ಥಿತಿಯಿಂದಾಗಿ ಸಿಬ್ಬಂದಿ ಕೊರತೆ ಹಾಗೂ ಸಂಪನ್ಮೂಲಗಳಲ್ಲಿ ಗಮನಾರ್ಹ ಕಡಿತ ಕಂಡುಬಂದಿದೆ. ಹೀಗಾಗಿ ಭಾರತದಲ್ಲಿ ಕಾರ್ಯಾಚರಣೆ ಮುಂದುವರಿಸಲು ಸವಾಲಾಗಿದೆ ಎಂದು ಅಫ್ಘಾನಿಸ್ತಾನ ರಾಯಭಾರಿ ಕಚೇರಿ ಹೇಳಿದೆ. “ರಾಜತಾಂತ್ರಿಕರ ವೀಸಾ ನವೀಕರಣ ಸೇರಿದಂತೆ ಸಮಯೋಚಿತ ಮತ್ತು ಸೂಕ್ತ ಬೆಂಬಲ ಕೊರತೆಯು ಪ್ರತಿನಿತ್ಯದ ನಮ್ಮ ಕರ್ತವ್ಯಗಳನ್ನು ನಿಭಾಯಿಸಲು ಕಷ್ಟವಾಗುತ್ತಿತ್ತು’ ಎಂದು ಅಫ್ಘಾನಿಸ್ತಾನ ರಾಯಭಾರಿ ಕಚೇರಿ ಅಸಹಾಯಕತೆ ವ್ಯಕ್ತಪಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next