ವಾರ್ಸೋ: ವರ್ಷದ ಹಿಂದೆ ಯುದ್ಧ ಪೀಡಿತ ಅಫ್ಘಾನಿಸ್ಥಾನವನ್ನು ತೊರೆದು ಉಕ್ರೇನ್ ದೇಶಕ್ಕೆ ಬಂದಿದ್ದ ಅಜ್ಮಲ್ ರಹಮಾನಿಗೆ ಶಾಂತಿಯ ಸಾಗರಕ್ಕೆ ಬಂದಿಳಿದ ಅನುಭವ. ಮದ್ದುಗುಂಡುಗಳ ಮೊರೆತ ಮರೆತು ಉಕ್ರೇನ್ ನಲ್ಲಿ ನೆಮ್ಮದಿಯಿಂದ ಕಾಲಕಳೆಯುತ್ತಿದ್ದ ಅಜ್ಮಲ್ ಇದೀಗ ಉಕ್ರೇನ್ ನಿಂದಲೂ ಸ್ಥಳಾಂತವಾಗಿದ್ದಾನೆ. ಕಾರಣ ಶಾಂತಿ ಸಾಗರವೀಗ ಭೋರ್ಗರೆಯುತ್ತಿದೆ. ರಷ್ಯಾದ ಪಡೆಗಳ ದಾಳಿಗೆ ಉಕ್ರೇನ್ ಅಕ್ಷರಶಹ ನಲುಗಿದೆ.
“ನಾನು ಯುದ್ಧದ ಕಾರಣದಿಂದ ಒಂದು ದೇಶದಿಂದ ಓಡಿ ಇನ್ನೊಂದು ದೇಶಕ್ಕೆ ಬಂದೆ, ಆದರೆ ಇಲ್ಲಿ ಇನ್ನೊಂದು ಯುದ್ಧ ಪ್ರಾರಂಭವಾಗಿದೆ. ನನ್ನ ದುರಾದೃಷ್ಟ” ಎಂದು ಪೋಲೆಂಡ್‌ಗೆ ದಾಟಿದ ಸ್ವಲ್ಪ ಸಮಯದ ನಂತರ ರಹಮಾನಿ ಸುದ್ದಿಸಂಸ್ಥೆ ಎಎಫ್ ಪಿ ಗೆ ತಿಳಿಸಿದರು.
ಪತ್ನಿ ಮಿನಾ, ಏಳು ವರ್ಷದ ಮಗಳು ಮರ್ವಾ ಮತ್ತು 11 ವರ್ಷದ ಮಗ ಒಮರ್ ರೊಂದಿಗೆ ರಹಮಾನಿ ಉಕ್ರೇನ್ ತೊರೆದಿದ್ದಾರೆ. ಕುಟುಂಬವು ಉಕ್ರೇನಿಯನ್ ಭಾಗದಲ್ಲಿ ಗ್ರಿಡ್‌ಲಾಕ್‌ನಿಂದಾಗಿ ಕಾಲ್ನಡಿಗೆಯಲ್ಲಿ ಗಡಿದಾಟಲು 30 ಕಿಲೋಮೀಟರ್ (19 ಮೈಲುಗಳು) ನಡೆಯ ಬೇಕಾಗಿತ್ತು!
ಇದನ್ನೂ ಓದಿ:ಖಾರ್ಕಿವ್ ನಮ್ಮ ವಶದಲ್ಲಿದೆ…ರಷ್ಯಾ ಸೇನೆಯನ್ನು ಹಿಮ್ಮೆಟ್ಟಿಸಿದ್ದೇವೆ: ಉಕ್ರೇನ್ ಸೇನೆ
ಪೋಲೆಂಡ್ ಗಡಿಯ ಮೆಡಿಕಾ ನಗರಕ್ಕೆ ಬಂದ ಬಳಿಕ ಇತರ ಹಲವು ನಿರಾಶ್ರಿತರೊಂದಿಗೆ ಪ್ರ್ಜಮಿಸ್ಲ್ ನಗರಕ್ಕೆ ತೆರಳಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿದ ಕಾರಣದಿಂದ ಸಾವಿರಾರು ಮಂದಿ ಉಕ್ರೇನ್ ತೊರೆದು ನೆರೆಯ ಪೋಲೆಂಡ್, ಹಂಗೇರಿ ಮತ್ತು ರೊಮಾನಿಯಾ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.