Advertisement

ಬಾಂಗ್ಲಾ ಹುಲಿಗಳನ್ನು ಬೇಟೆಯಾಡಿದ ಅಫ್ಘಾನ್‌

09:47 AM Sep 11, 2019 | Team Udayavani |

ಚಿತ್ತಗಾಂಗ್‌: ಆತಿಥೇಯ ಬಾಂಗ್ಲಾದೇಶವನ್ನು 224 ರನ್ನುಗಳ ಭರ್ಜರಿ ಅಂತರದಿಂದ ಬಗ್ಗುಬಡಿದ ಅಫ್ಘಾನಿಸ್ಥಾನ ತನ್ನ ಟೆಸ್ಟ್‌ ಇತಿಹಾಸದ ಅಮೋಘ ಹಾಗೂ ಸ್ಮರಣೀಯ ಜಯವನ್ನು ದಾಖಲಿಸಿದೆ. ಗೆಲುವಿಗೆ 398 ರನ್‌ ಗುರಿ ಪಡೆದ ಬಾಂಗ್ಲಾದೇಶ, ಅಂತಿಮ ದಿನವಾದ ಸೋಮವಾರ 173ಕ್ಕೆ ಸರ್ವಪತನ ಕಂಡಿತು.

Advertisement

ಮಳೆ ಹಾಗೂ ಮೋಡ ಕವಿದ ವಾತಾವರಣದ ಕಾರಣ ಮೊದಲ ಅವಧಿಯಲ್ಲಿ 2.1 ಓವರ್‌ಗಳ ಆಟವಷ್ಟೇ ಸಾಗಿತ್ತು. ದ್ವಿತೀಯ ಅವಧಿಯ ಆಟ ನಡೆಯಲೇ ಇಲ್ಲ. ಅಫ್ಘಾನಿಸ್ಥಾನವನ್ನು ಗೆಲ್ಲಿಸಬೇಕೆಂಬ ಕಾರಣಕ್ಕೋ ಏನೋ, ಅಂತಿಮ ಅವಧಿಯಲ್ಲಿ 10 ಓವರ್‌ಗಳ ಆಟಕ್ಕೆ ಅವಕಾಶ ಲಭಿಸಿತು. ಬಾಂಗ್ಲಾ 6ಕ್ಕೆ 136 ರನ್‌ ಮಾಡಿ 4ನೇ ದಿನದಾಟ ಮುಗಿಸಿತ್ತು.

ಇದು ಕೊನೆಯ ಟೆಸ್ಟ್‌ ಪಂದ್ಯವಾಡಿದ ಅಫ್ಘಾನ್‌ ಸ್ಪಿನ್ನರ್‌ ಮೊಹಮ್ಮದ್‌ ನಬಿಗೆ ಲಭಿಸಿದ ಗೆಲುವಿನ ವಿದಾಯವಾಗಿ ದಾಖಲಾಯಿತು.

ರಶೀದ್‌ ನಾಯಕತ್ವದ ದಾಖಲೆ
ಇದು ಅಫ್ಘಾನ್‌ ನಾಯಕ ರಶೀದ್‌ ಖಾನ್‌ ಪಾಲಿಗೆ ಸ್ಮರಣೀಯ ಟೆಸ್ಟ್‌ ಎನಿಸಿತು. ಅವರು ಲೆಗ್‌ಸ್ಪಿನ್‌ ದಾಳಿಯಲ್ಲಿ 49 ರನ್ನಿಗೆ 6 ವಿಕೆಟ್‌ ಹಾರಿಸಿ ಬಾಂಗ್ಲಾ ಪತನದ ರೂವಾರಿ ಎನಿಸಿದರು. ಮೊದಲ ಸರದಿಯಲ್ಲಿ ರಶೀದ್‌ 5 ವಿಕೆಟ್‌ ಉರುಳಿಸಿದ್ದರು. ಇದರೊಂದಿಗೆ ಟೆಸ್ಟ್‌ ಪಂದ್ಯದಲ್ಲಿ ಮೊದಲ ಸಲ “10 ಪ್ಲಸ್‌’ ವಿಕೆಟ್‌ ಉರುಳಿಸಿದ ಸಾಧನೆಗೈದರು.

ರಶೀದ್‌ ಇದೇ ಮೊದಲ ಸಲ ಟೆಸ್ಟ್‌ ತಂಡದ ನಾಯಕತ್ವ ವಹಿಸಿದ್ದರು. ಈಗ ಮೊದಲ ಟೆಸ್ಟ್‌ನಲ್ಲೇ ಗೆಲುವು ಕಂಡ ವಿಶ್ವದ ಅತ್ಯಂತ ಕಿರಿಯ ಕಪ್ತಾನನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಶೀದ್‌ ನಾಯಕತ್ವ ವಹಿಸಿದ ಪ್ರಥಮ ಟೆಸ್ಟ್‌ನಲ್ಲೇ “10 ಪ್ಲಸ್‌’ ವಿಕೆಟ್‌ ಹಾಗೂ ಅರ್ಧ ಶತಕ ದಾಖಲಿಸಿದ ವಿಶ್ವದ ಮೊದಲ ಕ್ರಿಕೆಟಿಗನೂ ಹೌದು.

Advertisement

3 ಟೆಸ್ಟ್‌, 2 ಗೆಲುವು
ಈ ಸಾಧನೆಯೊಂದಿಗೆ ಅಫ್ಘಾನಿಸ್ಥಾನ ಅತೀ ಕಡಿಮೆ ಟೆಸ್ಟ್‌ ಗಳಲ್ಲಿ 2 ಗೆಲುವು ಸಾಧಿಸಿದ ಆಸ್ಟ್ರೇಲಿಯದ ದಾಖಲೆಯನ್ನು ಸರಿದೂಗಿಸಿತು. ಇದು ಅಫ್ಘಾನ್‌ ಆಡಿದ ಕೇವಲ 3ನೇ ಟೆಸ್ಟ್‌ ಆಗಿದೆ. ಕ್ರಿಕೆಟ್‌ ಜನಕರೆಂಬ ಖ್ಯಾತಿಯ ಇಂಗ್ಲೆಂಡ್‌ 4 ಟೆಸ್ಟ್‌ ಗಳಲ್ಲಿ 2 ಜಯ ಸಾಧಿಸಿ ದ್ವಿತೀಯ ಸ್ಥಾನದಲ್ಲಿದೆ. ಭಾರತ 2 ಗೆಲುವಿಗೆ 30 ಟೆಸ್ಟ್‌ ತೆಗೆದುಕೊಂಡಿತ್ತು. ಇದೇ ಸಾಧನೆಗಾಗಿ ಬಾಂಗ್ಲಾ ಅತ್ಯಧಿಕ 60 ಟೆಸ್ಟ್‌ ಆಡಿದೆ. ಬಾಂಗ್ಲಾ ಈಗ ಎಲ್ಲ 10 ರಾಷ್ಟ್ರಗಳ ವಿರುದ್ಧ ಟೆಸ್ಟ್‌ ಸೋಲುಂಡ ವಿಶ್ವದ ಮೊದಲ ರಾಷ್ಟ್ರವೆಂಬ ಸಂಕಟಕ್ಕೆ ಸಿಲುಕಿತು.

ಸಂಕ್ಷಿಪ್ತ ಸ್ಕೋರ್‌
ಅಫ್ಘಾನಿಸ್ಥಾನ-342 ಮತ್ತು 260. ಬಾಂಗ್ಲಾದೇಶ-205 ಮತ್ತು 173 (ಶಕಿಬ್‌ 44, ಶದ್ಮಾನ್‌ 41, ರಶೀದ್‌ 49ಕ್ಕೆ 6, ನಬಿ 59ಕ್ಕೆ 3).

ಪಂದ್ಯಶ್ರೇಷ್ಠ: ರಶೀದ್‌ ಖಾನ್‌.

Advertisement

Udayavani is now on Telegram. Click here to join our channel and stay updated with the latest news.

Next