ಅಫಜಲಪುರ: ಕೊವಿಡ್-19 ಮಹಾಮಾರಿ ಎಲ್ಲೆಲ್ಲೂ ತನ್ನ ರುದ್ರನರ್ತನ ಶುರುಮಾಡಿದೆ. ಸರ್ಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮನೆಯಲ್ಲಿರಿ ಎಂದು ಎಷ್ಟು ಹೇಳಿದರೂ ಜನ ಕೇಳುತ್ತಿಲ್ಲ. ಹಳ್ಳಿಗಾಡಿನ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದರೆ, ನಗರವಾಸಿಗಳು ಮಾತ್ರ ತಮಗೇನೂ ಸಂಬಂಧವಿಲ್ಲ ಎನ್ನುವಂತೆ ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ.
ನಗರ ವಾಸಿಗಳ ಬೇಜವಾಬ್ದಾರಿ: ಕೊರೊನಾ ಸೋಂಕು ಹರಡದಂತೆ ತಡೆಯಲು ಸರ್ಕಾರ ದಿಟ್ಟ ಕ್ರಮ ಕೈಗೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದರೆ ನಗರ ವಾಸಿಗಳು ಮಾತ್ರ ನಿಯಮಗಳನ್ನು ಪಾಲಿಸುತ್ತಿಲ್ಲ. ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿರುವ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪಡಿತರ ಧಾನ್ಯ ವಿತರಣೆ ಮಾಡಲಾಗುತ್ತಿದ್ದು, ಪಡಿತರ ಧಾನ್ಯ ಪಡೆದುಕೊಳ್ಳಲು ಪಟ್ಟಣದ ನಿವಾಸಿಗಳು ಗುಂಪುಗುಂಪಾಗಿ ಬಂದು ನಿಲ್ಲುತ್ತಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಕೃಷಿ ಕಾಯಕ: ಹಳ್ಳಿಗಳಲ್ಲಿ ಜನಸಾಮಾನ್ಯರು ಸಾಮಾಜಿಕ ಅಂತರ ಕಾಯ್ದುಕೊಂಡು ದೈನಂದಿನ ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕಡಲೆ ರಾಶಿ ಮಾಡುತ್ತಿದ್ದಾರೆ.
ನಮ್ ಜನ್ಮದಾಗ ಇಂತ ಜಡ್ಡು ಕಂಡಿಲ್ಲ, ಕೇಳಿಲ್ಲ. ಆದರೂ ನಮಗೀಗ ಇಂತ ಪರಿಸ್ಥಿತಿ ಬಂದಾದ ಅಂದ್ರ ಸರ್ಕಾರ ಹೇಳಿದಂಗ ನಾವೆಲ್ಲ ಕೇಳಬೇಕಾಗ್ತದ. ಹಿಂಗಾಗಿ ಎಲ್ಲರೂ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಡಲೆ ರಾಶಿ ಮಾಡಿದ್ದಿವಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದೇವೆ.
ಜೀವಪ್ಪ ದೊಡ್ಮನಿ, ರೈತ
ಮಲ್ಲಿಕಾರ್ಜುನ ಹಿರೇಮಠ