Advertisement

ಅಫಜಲಪುರದಲ್ಲಿ ಪಾಚಿಗಟ್ಟಿದ ನೀರೇ ಸರಬರಾಜು

01:14 PM May 27, 2019 | Naveen |

ಅಫಜಲಪುರ: ಬತ್ತಿದ ಅಂತರ್ಜಲ, ನದಿ, ಕೆರೆ, ಬಾವಿ, ಕೊಳವೆ ಬಾವಿಗಳ ಅಂತರ್ಜಲ ಕುಸಿದು ಪಟ್ಟಣದ 35 ಸಾವಿರ ಜನರ ಗೋಳು ಹೇಳತೀರದಂತಾಗಿದೆ. ಪುರಸಭೆ ನಿರ್ಮಿಸಿದ ಫಿಲ್ಟರ್‌ ಬೆಡ್‌ ನಾಮಕೇ ವಾಸ್ತೆ ಎನ್ನುವಂತಾಗಿದೆ.

Advertisement

ಪುರಸಭೆ ನಿರ್ಲಕ್ಷ್ಯ: ಪಟ್ಟಣಕ್ಕೆ ನೀರು ಸಬರಾಜು ಆಗುವುದು ತಾಲೂಕಿನ ಸೊನ್ನ ಏತ ನೀರಾವರಿ ಬ್ರಿಡ್ಜ್ ಕಂ ಬ್ಯಾರೇಜ್‌ನಿಂದ. ಅಲ್ಲಿ ವರ್ಷಗಟ್ಟಲೇ ನಿಂತಿರುವ, ಪಾಚಿಗಟ್ಟಿದ ನೀರನ್ನೇ ಪುರಸಭೆಯವರು ಸರಿಯಾಗಿ ಫಿಲ್ಟರ್‌ ಮಾಡದೆ ಸರಬರಾಜು ಮಾಡುತ್ತಿದ್ದಾರೆ. ಬ್ಯಾರೇಜ್‌ನಿಂದ ನೀರನ್ನು ಜಾಕವೆಲ್ಗೆ ಹರಿಸಿ ಅಲ್ಲಿಂದ ಫಿಲ್ಟರ್‌ಬೆಡ್‌ಗೆ ಹಾಕಲಾಗುತ್ತದೆ. ಆದರೆ ಫಿಲ್ಟರ್‌ ಬೆಡ್‌ ನಾಮಕೇ ವಾಸ್ತೆ ಆಗಿದ್ದು, ಪಾಚಿಗಟ್ಟಿದ ನೀರನ್ನು ಶುದ್ಧೀಕರಿಸದೆ ನೇರವಾಗಿ ಪೈಪ್‌ಲೈನ್‌ ಮೂಲಕ ಸರಬರಾಜು ಮಾಡುತ್ತಿದ್ದಾರೆ. ಇದು ಪಟ್ಟಣದ ಜನತೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕ ಹೆಚ್ಚಿಸಿದೆ.

ನೀರು ಸರಬರಾಜು ಅವ್ಯವಸ್ಥೆಗೆ ಬೇಸತ್ತ ಜನ: ಒಂದು ಕಡೆ ಪಾಚಿಗಟ್ಟಿದ ವಾಸನೆಯುಕ್ತ ನೀರು, ಇನ್ನೊಂದು ಕಡೆ ಅದೇ ನೀರು ಸರಬರಾಜು ಮಾಡುವಲ್ಲಿ ಪುರಸಭೆಯವರ ಅವೈಜ್ಞಾನಿಕ ಧೋರಣೆಯಿಂದಾಗಿ ಜನ ಬೇಸತ್ತು ಹೋಗಿದ್ದಾರೆ. ಪಟ್ಟಣದ ತುಂಬೆಲ್ಲ ಚರಂಡಿಗಳಲ್ಲಿ ನೀರಿನ ಪೈಪಲೈನ್‌ ಅಳವಡಿಸಿದ್ದಾರೆ. ಅನೇಕ ಕಡೆಗಳಲ್ಲಿ ಚರಂಡಿಗಳಲ್ಲಿನ ಪೈಪ್‌ಗ್ಳು ಒಡೆದು ನೀರು ಪೋಲಾಗುತ್ತಿದೆ. ಅಲ್ಲದೇ ಚರಂಡಿ ನೀರು ನಲ್ಲಿ ನೀರಿಗೆ ಬೆರೆತು ಇನ್ನಷ್ಟು ಕೊಳಕು ವಾಸನೆ ಬೀರುತ್ತಿದೆ. ನೀರು ಫಿಲ್ಟರ್‌ ಮಾಡಲು ಬ್ಲೀಚಿಂಗ್‌ ಪೌಡರ್‌ ಹಾಗೂ ನೀರು ಶುದ್ಧೀಕರಣಕ್ಕೆ ಬಳಕೆ ಮಾಡುವ ಯಾವುದೇ ಪೌಡರ್‌ ಬಳಕೆ ಮಾಡುತ್ತಿಲ್ಲ. ಇದರಿಂದಾಗಿ ಬಹಳಷ್ಟು ಸಮಸ್ಯೆಯಾಗುತ್ತಿದೆ. ಪುರಸಭೆಯವರು ನೀರು ಶುದ್ಧೀಕರಣಕ್ಕಾಗಿ ಬಳಸುವ ಪೌಡರ್‌ ದಾಸ್ತಾನು ತೋರಿಸಿ ಎಂದರೆ ತೋರಿಸಲು ಮಾತ್ರ ದಾಸ್ತಾನು ಇಟ್ಟಿದ್ದಾರೆ. ಅದನ್ನು ಬಳಸುತ್ತಿಲ್ಲ. ಯಾರೇ ಬಂದು ಕೇಳಿದರೂ ನಾನಿನ್ನು ಚಾರ್ಜ್‌ ತೆಗೆದುಕೊಂಡಿಲ್ಲ. ನನಗೆ ಅದರ ಮಾಹಿತಿ ಇಲ್ಲ ಎಂದು ಇಲ್ಲಿನ ಸಿಬ್ಬಂದಿ ಹಾರಿಕೆ ಉತ್ತರ ನೀಡುತ್ತಿದ್ದಾರೆ.

ಜಾಕವೆಲ್ ಬಳಿಯ ನೀರಲ್ಲಿ ಎಮ್ಮೆಗಳ ಈಜಾಟ: ಪಟ್ಟಣಕ್ಕೆ ಸರಬರಾಜು ಆಗುವ ನೀರಿನ ಜಾಕವೆಲ್ ಬಳಿ ಇರುವ ನಿಂತ ನೀರಲ್ಲಿ ಪಟ್ಟಣದ ಎಮ್ಮೆಗಳು, ದನ-ಕರುಗಳು ಈಜಾಡಿ ಮತ್ತಷ್ಟು ಕೊಳಕು ಮಾಡುತ್ತಿವೆ. ಅದೇ ನೀರನ್ನು ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ. ಅಲ್ಲದೇ ಪಟ್ಟಣದ ಸಾರ್ವಜನಿಕರು ಬಳಸುವ ಚರಂಡಿ ನೀರು ನೇರವಾಗಿ ಜಾಕವೆಲ್ ಬಳಿ ಪಟ್ಟಣಕ್ಕೆ ಸರಬರಾಜು ಆಗುವ ನೀರಿಗೆ ಬಂದು ಸೇರಿ ಮತ್ತಷ್ಟು ಗಲೀಜು ಮಾಡುತ್ತಿದೆ. ಈ ಸಮಸ್ಯೆ ಕುರಿತು ಪುರಸಭೆ ಯಾವುದೇ ಮುಂಜಾಗೃತಾ ಕ್ರಮ ಕೈಗೊಳ್ಳುತ್ತಿಲ್ಲ.

ಪುರಸಭೆಗೆ ಹಿಡಿ ಶಾಪ: ಪುರಸಭೆಯವರು ಸರಿಯಾದ ಕ್ರಮದಲ್ಲಿ ಹಾಗೂ ವೈಜ್ಞಾನಿಕವಾಗಿ ನೀರು ಹರಿಸುತ್ತಿಲ್ಲ. ಆದ್ದರಿಂದ ಜನ ಹಿಡಿ ಶಾಪ ಹಾಕುತ್ತಿದ್ದಾರೆ.

Advertisement

ಹಗಲು-ರಾತ್ರಿ ನೀರಿಗಾಗಿ ನಿಲ್ಲುವುದೇ ಕೆಲಸ: ಪುರಸಭೆಯವರು ಸರಿಯಾಗಿ ನೀರು ಸರಬರಾಜು ಮಾಡದೆ ಇರುವುದರಿಂದ ಪಟ್ಟಣ ನಿವಾಸಿಗಳು ಹಗಲು-ರಾತ್ರಿ ನೀರಿಗಾಗಿ ಪರದಾಡುವಂತಾಗಿದೆ. ಪಟ್ಟಣದ ಸುತ್ತಮುತ್ತ ಇರುವ ಹೊಲ ಗದ್ದೆಗಳಿಗೆ ಹೋಗಬೇಕು, ಇಲ್ಲವಾದರೆ ಖಾಸಗಿಯವರ ಮನೆಗಳಲ್ಲಿ ಕೊರೆಸಿದ ಕೊಳವೆ ಬಾವಿಗಳ ಬಳಿ ಹೋಗಿ ನೀರನ್ನು ಬೇಡುವ ಪರಿಸ್ಥಿತಿ ಬಂದಿದೆ. ಒಟ್ಟಿನಲ್ಲಿ ಪಟ್ಟಣದಲ್ಲಿ ನೀರು ಸರಬರಾಜು ವ್ಯವಸ್ಥೆ ಅವೈಜ್ಞಾನಿಕವಾಗಿದೆ. ಪುರಸಭೆಯವರಿಗೆ ಎಲ್ಲ ಸಮಸ್ಯೆ ಗೊತ್ತಿದ್ದರೂ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗುತ್ತಿದ್ದಾರೆ.

15 ದಿನಕ್ಕೊಮ್ಮೆ ನೀರು ಬಿಡ್ತಾರ್ರಿ, ನೀರಿಲ್ದೆ ಹ್ಯಾಂಗ್‌ ಇರಬೇಕು. ಬ್ಯಾರೇದವರ ಹೊಲ-ಗದ್ದಿ, ಮನಿಗೊಳಿಗೆ ನೀರು ಕೊಡ್ರಿ ಅಂತ ಭಿಕ್ಷೆ ಬೇಡೋದು ಆಗ್ಯಾದ್‌. ನಮ್‌ ಗೋಳು ಕೇಳ್ಳೋರು ಯಾರೂ ಇಲ್ದಂಗ್‌ ಆಗ್ಯಾದ್‌. ಪುರಸಭೆದವರಿಗೆ ಟ್ಯಾಂಕರ್‌ ಮೂಲಕ ನೀರು ಬಿಡ್ರಿ ಅಂದ್ರ, ನಮಗ್‌ ಟ್ಯಾಂಕರ್‌ ನೀರು ಕೊಡ್ಲಾಕ್‌ ಆದೇಶ ಇಲ್ಲ ಅಂತಾರ್ರಿ.
• ಸಿದ್ಧು ನಂದಿ, ಪಟ್ಟಣ ನಿವಾಸಿ

ಪಟ್ಟಣಕ್ಕೆ ಶುದ್ಧ ನೀರು ಪೂರೈಕೆ ಆಗುವುದೇ ಇಲ್ಲ. ಪುರಸಭೆಯವರು ನೀರು ಶುದ್ಧೀಕರಣಕ್ಕಾಗಿ ಬ್ಲಿಚಿಂಗ್‌ ಮತ್ತು ಆಲಂ ಪೌಡರ್‌ ಖರೀದಿಸುತ್ತಾರೆ. ಆದರೆ ಒಮ್ಮೆಯೂ ಬಳಕೆ ಮಾಡುವುದಿಲ್ಲ. ನೀರು ಶುದ್ಧೀಕರಣಕ್ಕಾಗಿ ಖರ್ಚು ಮಾಡುತ್ತಾರೆ. ಚರಂಡಿ ನೀರು ನದಿಗೆ ಸೇರಿ ಅದೇ ನೀರು ಲಿಫ್ಟ್‌ ಆಗಿ ಪಟ್ಟಣಕ್ಕೆ ಸರಬರಾಜು ಮಾಡುತ್ತಿದ್ದಾರೆ. ನೀರು ಪರೀಕ್ಷೆ ಮಾಡಿಸಿ ಸರಬರಾಜು ಮಾಡಬೇಕು.
ರಫಾತ್‌ ಜಾಗಿರದಾರ್‌, ಪಟ್ಟಣ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next