Advertisement

ನಾಮಕೆವಾಸ್ತೆ ಪರಿಸರ ದಿನ-ನಿತ್ಯವೂ ಅರಣ್ಯರೋದನ

10:04 AM Jun 07, 2019 | Naveen |

ಅಫಜಲಪುರ: ಪ್ರತಿ ವರ್ಷ ಜೂನ್‌ ಬಂತೆಂದರೆ ಸಾಕು ಎಲ್ಲರೂ ಪರಿಸರ ದಿನ ಎಂದು ಶುಭ ಕೋರುತ್ತಾರೆ, ಗಿಡ ನೆಟ್ಟು ಆಚರಣೆ ಮಾಡುತ್ತಾರೆ. ಆದರೆ ನಿತ್ಯ ನಡೆಯುತ್ತಿರುವ ಅರಣ್ಯ ರೋಧನವನ್ನು ಯಾರೂ ಕೇಳುತ್ತಿಲ್ಲ.

Advertisement

ಹೆಸರಿಗೆ ಮಾತ್ರ ದಿನಾಚರಣೆ: ಜೂನ್‌ 5ರಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ. ಪರಿಸರ ದಿನದ ಪ್ರಯುಕ್ತ ಅರಣ್ಯ ಇಲಾಖೆಯವರು ಗಿಡ-ಮರಗಳನ್ನು ನೆಡುತ್ತಾರೆ. ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. ಇದೊಂದು ದಿನ ಹಿಗ್ಗಿನಿಂದ ಕೆಲಸ ಮಾಡಿ, ಮುಂದಿನ ದಿನಗಳಲ್ಲಿ ಸುಮ್ಮನಾಗುತ್ತಾರೆ. ಇದರಿಂದ ಪರಿಸರ ರಕ್ಷಣೆಯಾಗುತ್ತಿಲ್ಲ. ಬದಲಾಗಿ ಭಕ್ಷಣೆಯಾಗುತ್ತಿದೆ.

ಮರಗಳ್ಳರಿಗಿಲ್ಲ ಯಾರದ್ದೂ ಭಯ: ತಾಲೂಕಿನಾದ್ಯಂತ ಅಕ್ರಮ ಟಿಂಬರ್‌ ಮಾಫಿಯಾ ಹೆಚ್ಚಾಗುತ್ತಿದೆ. ಎಲ್ಲೆಂದರಲ್ಲಿ ಗಿಡ ಮರಗಳನ್ನು ಕಡಿದು ಮಾರಾಟ ಮಾಡುವ ಜಾಲ ಬೆಳೆದಿದೆ. ಮರಗಳ್ಳರು ಹೆಚ್ಚಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳದೆ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದೆ. ಮರಗಳ್ಳರಿಗೆ ಯಾರ ಭಯವೂ ಇಲ್ಲದಂತಾಗಿದ್ದು, ಅವ್ಯಾಹತವಾಗಿ ಮರಗಳ್ಳತನ ನಡೆಯುತ್ತಿದೆ.

ಕೊಡಲಿ ಪೆಟ್ಟಿಗೆ ಬಲಿಯಾಗಿವೆ ಲೆಕ್ಕವಿಲ್ಲದಷ್ಟು ಗಿಡ-ಮರ: ಅಕ್ರಮ ದಂಧೆಕೋರರಿಗೆ ತಾಲೂಕಿನ ರೈತರೇ ಗುರಿಯಾಗಿದ್ದಾರೆ. ರೈತರು ಪುಡಿಗಾಸಿನ ಆಸೆಗೆ ತಮ್ಮ ಜಮೀನುಗಳಲ್ಲಿರುವ ಗಿಡ-ಮರಗಳನ್ನು ಕಡಿಯಲು ಅನುಮತಿ ಕೊಡುತ್ತಿದ್ದಾರೆ. ಹೀಗಾಗಿ ಕಟ್ಟಿಗೆ ವ್ಯಾಪಾರಿಗಳು ಗಿಡ-ಮರಗಳನ್ನು ಕಡಿದು ಹಾಕುತ್ತಿದ್ದಾರೆ. ಇವರ ಕೊಡಲಿ ಪೆಟ್ಟಿಗೆ ಲೆಕ್ಕವಿಲ್ಲದಷ್ಟು ಗಿಡ-ಮರಗಳು ಬಲಿಯಾಗಿವೆ.

ಸಂಬಂಧ ಪಟ್ಟವರು ಕ್ರಮ ಕೈಗೊಳ್ಳುವರೆ?: ತಾಲೂಕಿನಲ್ಲಿರುವ ಅಕ್ರಮ ಕಟ್ಟಿಗೆ ಅಡ್ಡೆಗಳ ಮೇಲೆ ಸಂಬಂಧಪಟ್ಟ ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳುವರೆ? ಎನ್ನುವ ಪ್ರಶ್ನೆ ಕಾಡುತ್ತಿದೆ. ರೈತರ ಹೊಲ- ಗದ್ದೆಗಳು, ರಸ್ತೆ ಪಕ್ಕದ ಗಿಡ-ಮರಗಳಿಗೆ ಸಾಕಷ್ಟು ಬಾರಿ ಕೊಡಲಿ ಪೆಟ್ಟು ಬಿಳುತ್ತಿದೆ. ಅಕ್ರಮ ನಡೆಯುತ್ತಿರುವುದು ಅರಣ್ಯಾಧಿಕಾರಿಗಳ ಗಮನಕ್ಕಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಈಗ ಮರಗಳನ್ನು ಕಡಿಯುತ್ತಿರುವುದರಿಂದ ಭೀಕರ ಬರಗಾಲ ಆವರಿಸಿದೆ. ಈಗಲಾದರೂ ಅಕ್ರಮಕ್ಕೆ ತಡೆ ನೀಡಿ ಮರಗಿಡಗಳನ್ನು ಉಳಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next