Advertisement

ಸಮಾನ ನಾಗರಿಕ ಕಾನೂನು ಜಾರಿಗೆ ತನ್ನಿ

10:02 AM Jul 03, 2019 | Naveen |

ಅಫಜಲಪುರ: ದೇಶದಲ್ಲಿನ ಪ್ರತಿಯೊಬ್ಬ ನಾಗರಿಕರಿಗೂ ಜನಸಂಖ್ಯೆ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಪ್ರಧಾನಮಂತ್ರಿ, ರಾಷ್ಟ್ರಪತಿ ಮತ್ತು ಗೃಹ ಸಚಿವರಿಗೆ ಒತ್ತಾಯಿಸಬೇಕು. 370ನೇ ಕಲಂ ಕಾಯ್ದೆಯನ್ನು ಜಮ್ಮು ಕಾಶ್ಮಿರದಲ್ಲಿ ರದ್ದು ಮಾಡಲು ಆಗುತ್ತಿಲ್ಲ. ಹದಿನೆಂಟು ಕೋಟಿ ಅಲ್ಪಸಂಖ್ಯಾತರು ದೇಶದಲ್ಲಿರುವದರಿಂದ ನಮಗೆ ರಾಮನವಮಿ ಮತ್ತು ಗಣೇಶ ಉತ್ಸವ ಮಾಡಲು ಪರವಾನಗಿ ನೀಡುತ್ತಿಲ್ಲ. ಹೀಗಾಗಿ ದೇಶದಲ್ಲಿ ಸಮಾನ ನಾಗರಿಕ ಕಾನೂನು ಜಾರಿಗೆ ತರಬೇಕು ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ್‌ ಸರಕಾರವನ್ನು ಒತ್ತಾಯಿಸಿದರು.

Advertisement

ತಾಲೂಕಿನ ಗಡಿ ಗ್ರಾಮ ಮಣ್ಣೂರಿನಲ್ಲಿ ಹಮ್ಮಿಕೊಂಡ ವಿರಾಟ್ ಹಿಂದೂ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಗೋಮಾತೆಯನ್ನು ದೇಶದ ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ. ಗೋರಕ್ಷಣೆ ಸಲುವಾಗಿ ತನ್ನ ಪ್ರಾಣವನ್ನೆ ತ್ಯಾಗ ಮಾಡಿದ ಶಿವು ಉಪ್ಪಾರ ಅವರಿಗೆ ನ್ಯಾಯ ಕೊಡಿಸಬೇಕು. ಅಕ್ರಮ ಕಸಾಯಿಖಾನೆಗಳನ್ನು ಬಂದ್‌ ಮಾಡಬೇಕು. ಕೇಂದ್ರ ಸರ್ಕಾರ ಗೋಮಾಂಸ ರಫ್ತು ಆಗುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ದೇಶದ ಗಡಿಯಲ್ಲಿ ಮಳೆ, ಗಾಳಿ, ಚಳಿ ಎನ್ನದೆ ಸೈನಿಕರು 130 ಕೋಟಿ ಜನರನ್ನು ರಕ್ಷಣೆ ಮಾಡುತ್ತಾರೆ. ಜಮ್ಮು ಕಾಶ್ಮೀರದಲ್ಲಿ ನಮ್ಮ ಹೆಮ್ಮೆಯ ಸೈನಿಕರ ಮೇಲೆ ಕೆಲವು ದೇಶದ್ರೋಹಿಗಳು ಕಲ್ಲು ಎಸೆಯುತ್ತಾರೆ. ಅದಕ್ಕಾಗಿ ನಾವೆಲ್ಲರೂ ಜಾಗೃತರಾಗಿ ದೇಶ ಮತ್ತು ಹಿಂದೂ ಸಮಾಜದ ರಕ್ಷಣೆಗಾಗಿ ಕಂಕಣಬದ್ಧರಾಗಿ ಕೆಲಸ ಮಾಡೋಣ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಭಾರತ ಪ್ರಧಾನಿ ಮೋದಿ ಆಡಳಿತದಲ್ಲಿ ಸುರಕ್ಷವಾಗಿದೆ. ದೇಶಕ್ಕೆ ಈಗ ಒಳ್ಳೆಯ ಕಾಲ ಬಂದಿದೆ. ದೇಶದ ವಿರುದ್ಧ ಬಾಲ ಬಿಚ್ಚುವವರನ್ನು ಸದೆ ಬಡಿಯಬೇಕಾಗಿದೆ. ದೇಶದಲ್ಲಿ ಡೋಂಗಿ ಜಾತ್ಯತೀತರು ಹೆಚ್ಚಾಗಿದ್ದಾರೆ. ಅವರಿಂದ ದೇಶಕ್ಕೆ ಕಂಟಕವಿದೆ. ಅಂತವರಿಂದ ದೂರವಿರಿ ಎಂದು ಕರೆ ನೀಡಿದರು.

ಚೈತ್ರಾ ಕುಂದಾಪುರ ಮಾತನಾಡಿ, ಹಿಂದೂ ಸಮಾಜದಲ್ಲಿ ಮಹಿಳೆಯರಿಗೆ ಬಹಳಷ್ಟು ಗೌರವವಿದೆ. ಹಿಂದೂ ಸಮಾಜವನ್ನು ಒಡೆಯುವ ಸಲುವಾಗಿ ಲವ್‌ ಜಿಹಾದ್‌ ಪ್ರಹಾರ ಮಾಡಲಾಗುತ್ತಿದೆ. ನಮ್ಮತನ ಕಾಪಾಡಿಕೊಳ್ಳಲು ಲವ್‌ ಜಿಹಾದ್‌ನಿಂದ ಜಾಗೃತರಾಗಿರಬೇಕಾಗಿದೆ ಎಂದರು.

Advertisement

ಹೈದ್ರಾಬಾದ ಕರ್ನಾಟಕ ಶ್ರೀರಾಮಸೇನೆ ಅಧ್ಯಕ್ಷ ವಿಜು ಪಾಟೀಲ, ವಿಜಯಪುರ ಜಿಲ್ಲಾಧ್ಯಕ್ಷ ರಾಕೇಶ ಮಠ, ಶ್ರೀರಾಮಸೇನೆ ತಾಲೂಕು ಅಧ್ಯಕ್ಷ ಅನೀಲಗೌಡ ಕರೂಟಿ, ಗ್ರಾಮ ಘಟಕದ ಅಧ್ಯಕ್ಷ ಈರಣ್ಣ ಜಮಾದಾರ ಸುನೀಲ ಶೆಟ್ಟಿ, ಸಚೀನ್‌ ಕೊಪ್ಪ, ಮಾಜಿ ಜಿಪಂ ಅಧ್ಯಕ್ಷ ನಿತೀನ್‌ ಗುತ್ತೇದಾರ, ಗುರುಬಾಳ ಜಕಾಪುರ, ಸಂಗಪ್ಪ ಎಮ್ಮೆನವರ, ಭೀಮಾಶಂಕರ ಪೂಜಾರಿ, ಸರ್ವೇಶ ಅಕಮಂಚಿ, ಸುಭಾಷ ಪ್ಯಾಟಿ, ಸುನೀಲ ಚಣೇಗಾಂವ, ರಾಹುಲ್ ಹೊಸೂರಕರ, ರಾಗವೇಂದ್ರ ಕಾಸಾರ ವಿಶ್ವನಾಥ ನಾವಾಡಿ ಸಚೀನ ಪೂಜಾರಿ, ದಯಾನಂದ ಜಮಾದಾರ, ಶಂಕರ ಆಲೂರ, ಸೋಮನಾಥ ನಂದಿಮಠ, ಪ್ರಭು ಹೂಗಾರ, ಜಗದೀಶ ದೇಶಟ್ಟಿ ಹಾಗೂ ಶ್ರೀರಾಮ ಸೇನೆ ಪದಾಧಿಕಾರಿಗಳಿದ್ದರು.

ಪೊಲೀಸ್‌ ಬಂದೋಬಸ್ತ್: ಸಾರ್ವಜನಿಕ ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀರಾಮ ದೇವರ ಮೂರ್ತಿ ಮೆರವಣಿಗೆ ನಡೆಯಿತು. ಸಿಪಿಐ ಮಹಾಂತೇಶ ಪಾಟೀಲ ಹಾಗೂ ಪಿಎಸ್‌ಐ ಮಂಜುನಾಥ ಹೂಗಾರ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಿಗಿ ಬಂದೋಬಸ್ತ್ ಒದಗಿಸಿದ್ದರು.

ಮಹಾರಾಷ್ಟ್ರದ ಗಡಿಭಾಗದಿಂದ, ಇಂಡಿ ತಾಲೂಕಿನ ಸುತ್ತಮುತ್ತಲಿನಿಂದ, ವಿಜಯಪುರ, ಕಲಬುರಗಿ ಸುತ್ತಮುತ್ತಲಿನಿಂದ ಜನರು ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next