ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ: ಕಳೆದ ವರ್ಷ ಮಳೆಯಾಗದೆ ಭೀಕರ ಬರಗಾಲ ಆವರಿಸಿತ್ತು. ಹೀಗಿದ್ದರೂ ತಾಲೂಕಿನ ಜನರಿಗೆ ಭೀಮಾ ನದಿ ಮೇಲೆ ಮತ್ತು ಭೀಮಾ ನದಿಗೆ ಕಟ್ಟಿರುವ ಬ್ರಿಡ್ಜ್ ಕಂ ಬ್ಯಾರೇಜ್‌ಗಳ ಮೇಲೆ ನಂಬಿಕೆ ಇತ್ತು. ಆದರೆ ಭೀಮಾ ನದಿಗೆ ಬೇಲಿ ಇಲ್ಲದಂತೆ ಆಗಿದ್ದು, ಇದ್ದ ನೀರೆಲ್ಲ ಖಾಲಿ -ಖಾಲಿಯಾಗಿ ಜನ-ಜಾನುವಾರುಗಳಿಗೆ ತೀವ್ರ ಸಂಕಷ್ಟ ಬಂದೊದಗಿದೆ.
ಸೊನ್ನ ಬ್ಯಾರೇಜ್‌ನಲ್ಲಿ ಪಾತಾಳ ತಲುಪಿದ ಜಲಮೂಲ: ತಾಲೂಕಿನ ಸೊನ್ನ ಗ್ರಾಮದಲ್ಲಿ ಭೀಮಾ ನದಿಗೆ ಏತ ನೀರಾವರಿ ಯೋಜನೆಯ ಬ್ಯಾರೇಜ್ ಕಟ್ಟಿಸಲಾಗಿದೆ. ಇದು ಸುಮಾರು 3.16 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದರ ಹಿನ್ನೀರು 50 ಕಿ.ಮೀ ವರೆಗೂ ನಿಲ್ಲುತ್ತದೆ. ಅಂದಾಜು 50 ಸಾವಿರ ಎಕರೆಯಷ್ಟು ನೀರಾವರಿಗೆ ಈ ನೀರು ಬಳಕೆ ಮಾಡಬಹುದಾಗಿದೆ. ಆದರೆ ಕಳೆದ ವರ್ಷ ಮಳೆಯಾಗದೆ ಇರುವುದರಿಂದ ಬ್ಯಾರೇಜ್‌ನಲ್ಲಿ ಇದ್ದ ನೀರಿನ ಸಂಗ್ರಹ ಈಗ ಪಾತಾಳ ಸೇರಿದೆ.
ಘತ್ತರಗಿಯಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್‌ನ ಗೇಟ್ ಮುರಿದು ಬಿದ್ದರೂ ಕೇಳುವರಿಲ್ಲ: ಸೊನ್ನ ಬ್ಯಾರೇಜ್‌ನಲ್ಲಿ ನೀರು ಸಂಗ್ರಹ ಮಾಡಿಕೊಂಡು ಹೆಚ್ಚಾದ ನೀರನ್ನು ನದಿಗೆ ಹರಿಸುವುದರ ಜೊತೆಗೆ ತಾಲೂಕಿನ ಇತರ ಗ್ರಾಮಗಳು ಮತ್ತು ಪುಣ್ಯ ಕ್ಷೇತ್ರಗಳಲ್ಲಿ ನೀರು ನಿಲ್ಲಿಸುವ ಯೋಚನೆ ಇಟ್ಟುಕೊಂಡು ಘತ್ತರಗಿ, ದೇವಲ ಗಾಣಗಾಪುರ ಮತ್ತು ಚಿನಮಳ್ಳಿ-ಕಲ್ಲೂರ ಗ್ರಾಮಗಳಲ್ಲಿ ಸಣ್ಣ ಪ್ರಮಾಣದ ಬ್ರಿಡ್ಜ್ ಕಂ ಬ್ಯಾರೇಜ್‌ಗಳನ್ನು ಕಟ್ಟಿಸಲಾಗಿದೆ. ಆದರೆ ಈ ಮೂರು ಬ್ಯಾರೇಜ್‌ಗಳಲ್ಲಿ ನೀರು ಖಾಲಿಯಾಗಿದೆ. ಅದರಲ್ಲೂ ಘತ್ತರಗಿ ಬ್ಯಾರೇಜ್‌ನ ಗೇಟ್‌ಗಳು ಮುರಿದು ಎಲ್ಲೆಂದರಲ್ಲಿ ಬಿದ್ದಿವೆ. ಗೇಟ್‌ಗಳು ಮುರಿದಿದ್ದರಿಂದಲೇ ನೀರು ಖಾಲಿಯಾಗಿದೆ. ಗೇಟ್ ಮುರಿದು ಬಿದ್ದಿದ್ದರ ಬಗ್ಗೆ ಸಂಬಂಧ ಪಟ್ಟ ಇಲಾಖೆ, ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ಇದರಿಂದಾಗಿ ಘತ್ತರಗಿ ಮತ್ತು ಸುತ್ತಮುತ್ತಲಿನ ಭಾಗದ ಊರುಗಳ ಜನರಿಗೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ.
ಚಿನಮಳ್ಳಿ ಬ್ಯಾರೇಜ್ ಒಡೆದು ಮೂರು ವರ್ಷ ಗತಿಸಿದರೂ ದುರಸ್ತಿಯಾಗಿಲ್ಲ: ಮಲ್ಲಿಕಾರ್ಜುನ ಕ್ಷೇತ್ರವಾದ ಚಿನಮಳ್ಳಿ-ಕಲ್ಲೂರಿನಲ್ಲಿ ಭೀಮಾ ನದಿಗೆ ನಿರ್ಮಿಸಿದ ಬ್ರಿಡ್ಜ್ ಕಂ ಬ್ಯಾರೇಜ್ ಮೂರು ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದ ಒಡೆದು ಹೋಗಿದೆ. ಬ್ಯಾರೇಜ್ ಒಡೆದು ಮೂರು ವರ್ಷ ಗತಿಸಿದರೂ ಇದುವರೆಗೂ ದುರಸ್ತಿ ಮಾಡಿಸಿಲ್ಲ. ಅಷ್ಟು ಕೋಟಿ, ಇಷ್ಟು ಕೋಟಿ ಎಂದು ಹೇಳಿ ಎಲ್ಲರೂ ಕಥೆ ಹೇಳಿದರೇ ವಿನಃ ಚಿನಮಳ್ಳಿ ಬ್ಯಾರೇಜ್ ದುರಸ್ತಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡುವ ಕೆಲಸವನ್ನು ಯಾರೂ ಮಾಡುತ್ತಿಲ್ಲ. ಹೀಗಾಗಿ ಚಿನಮಳ್ಳಿ ಹಾಗೂ ಸುತ್ತಮುತ್ತಲಿನ ಭಾಗದ ಜನ ಜಾನುವಾರುಗಳಿಗೆ ಭಾರಿ ಸಮಸ್ಯೆ ಉಂಟಾಗಿದೆ.
ನದಿ ಉಳಿವಿಗೆ ಸರ್ಕಾರ, ಇಲಾಖೆಗಳ ಮುತುವರ್ಜಿ ಕಮ್ಮಿ: ಭೀಮಾ ನದಿ ಈ ಭಾಗದ ಜೀವನದಿಯಾಗಿದೆ. ಜನ ಜೀವನವೆಲ್ಲ ಭೀಮಾ ನದಿ ಅವಲಂಬಿಸಿದೆ. ಆದರೆ ನದಿ ಉಳಿವಿಗೆ ಸರ್ಕಾರ, ಸಂಬಂಧ ಪಟ್ಟ ಇಲಾಖೆ, ಜನಪ್ರತಿನಿಧಿಗಳು ಮುತುವರ್ಜಿ ವಹಿಸುತ್ತಿಲ್ಲ. ಹೀಗಾಗಿ ಭೀಮಾ ನದಿ ಅಳಿವಿನಂಚಿಗೆ ಬಂದು ನಿಂತಿದೆ. ಈಗಲೂ ಕಾಲ ಮಿಂಚಿಲ್ಲ, ಭೀಮೆ ರಕ್ಷಣೆಗೆ ಸರ್ಕಾರ, ಸಂಬಂಧಪಟ್ಟ ಇಲಾಖೆಗಳು ಮುಂದಾಗಬೇಕು. ಜಲರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಇಲ್ಲದಿದ್ದರೆ ಮುಂಬರುವ ದಿನಗಳು ಇನ್ನಷ್ಟು ಭೀಕರವಾಗಿರಲಿವೆ. ಈಗಲಾದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳುತ್ತಾರಾ ಎಂದು ಕಾಯ್ದು ನೋಡಬೇಕಿದೆ.
ಭೀಮಾ ನದಿ ರಕ್ಷಣೆ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೇವಲ ರಾಜಕೀಯ ಉದ್ದೇಶಕ್ಕಾಗಿ,ಲಾಭಕ್ಕಾಗಿ ಎಲ್ಲರೂ ನದಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಬಡ ಜನರ, ರೈತರ ಪರಿಸ್ಥಿತಿಯನ್ನು ಯಾರೂ ಗಮನ ಹರಿಸುತ್ತಿಲ್ಲ. ಇದರಿಂದ ಭಾರಿ ಸಮಸ್ಯೆ ಎದುರಾಗುತ್ತಿದೆ. ಈಗಲಾದರೂ ಜನಪ್ರತಿನಿಧಿಗಳು, ಇಲಾಖೆಗಳು ಮುತುವರ್ಜಿ ವಹಿಸಿ ಭೀಮಾ ನದಿಯನ್ನು ಉಳಿಸುವ ಕೆಲಸ ಮಾಡಲಿ ಎನ್ನುತ್ತಾರೆ ತಾಲೂಕಿನ ರೈತರು.
ಸಿಎಂ ಬರ್ತಾರಂತ ಹಬ್ಬ ಮಾಡಿದ್ರ ಪ್ರಯೋನವಿಲ್ಲ: ಮುಖ್ಯಮಂತ್ರಿಗಳು ಬರ್ತಾರಂತ ಹಬ್ಬ ಮಾಡಿದಂಗ ಮಾಡಿ ಹೋದ್ರ ಏನೂ ಉಪಯೋಗ ಇಲ್ಲ ಎನ್ನುತ್ತಾರೆ ಸಾರ್ವಜನಿಕರು.