Advertisement

ಕುಡಿವ ನೀರಿಗೆ ಬಾಯ್ಬಿಡುತ್ತಿರುವ ಜನ

10:51 AM Apr 25, 2019 | Naveen |

ಅಫಜಲಪುರ: ತೀವ್ರ ಬರಗಾಲದಿಂದ ಎಲ್ಲಿ ನೋಡಿದರೂ ನೀರಿಗಾಗಿ ಪರದಾಟ ಶುರುವಾಗಿದೆ. ಕುಡಿಯುವ ನೀರಿಗಾಗಿ ಜನಸಾಮಾನ್ಯರು ಬಾಯಿ ಬಿಡುವಂತಾಗಿದೆ. ಕೆರೆಯಲ್ಲಿ ಮೊಳಕಾಲುದ್ದ ಹೊಂಡ ತೆಗೆದಾಗ ಜೀವ ಜಲ ಬರುತ್ತಿದ್ದರೂ ಸಮರ್ಪಕ ಪೂರೈಕೆ ಇಲ್ಲದೆ ಜನರಿಗೆ ದಿಕ್ಕೇ ತೋಚದಂತಾಗಿದೆ.

Advertisement

ತಾಲೂಕಿನ ಬಳೂರ್ಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಳ ತೀರದಂತಾಗಿದೆ. ಬಳೂರ್ಗಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು ಹಳಿಯಾಳ, ಫಲಾಲಸಿಂಗ್‌ ತಾಂಡಾ, ಹೀರೂ ನಾಯಕ ತಾಂಡಾ, ಬಳೂರ್ಗಿ ಗ್ರಾಮ ಬರುತ್ತವೆ. ಸುಮಾರು 8500ಕ್ಕೂ ಹೆಚ್ಚು ಜನಸಂಖ್ಯೆ ಇಲ್ಲಿದೆ. ದಿನ ಬೆಳಗಾದರೆ ಬಿಂದಿಗೆ ಹಿಡಿದು ದೂರದ ಖಾಸಗಿಯವರ ಹೊಲಗದ್ದೆಗಳಿಗೆ ನೀರಿಗಾಗಿ ಮಕ್ಕಳಿಂದ ವೃದ್ಧರ ವರೆಗೆ ಅಲೆದಾಡುವ ದೃಶ್ಯ ಸಾಮಾನ್ಯವಾಗಿ ಕಾಣುತ್ತಿರುತ್ತದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಗ್ರಾಮ ಪಂಚಾಯಿತಿಯೂ ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕು ಎಂದು ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.

ಇದ್ದು ಇಲ್ಲದಂತಿರುವ ಕೊಳವೆ ಬಾವಿ-ತೆರೆದ ಬಾವಿ: 12ಕ್ಕೂ ಹೆಚ್ಚು ಕೊಳವೆ ಬಾವಿಗಳು ಇದ್ದರೂ ಇವುಗಳ ಪೈಕಿ ಎಂಟರಲ್ಲಿ ಮಾತ್ರ ಸ್ವಲ್ಪ ನೀರು ಬರುತ್ತದೆ. ಮೂರು ತೆರೆದ ಬಾವಿಗಳಿದ್ದು, ಮೂರರಲ್ಲೂ ನೀರಿಲ್ಲ. ಅಲ್ಲದೇ ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಗ್ರಾ.ಪಂನಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಎಲ್ಲಿಯೂ ಹನಿ ನೀರು ಸಿಗುತ್ತಿಲ್ಲ. ಸಂಪೂರ್ಣ ಅಂತರ್ಜಲ ಬತ್ತಿ ಹೋಗಿದೆ. ಹೀಗಾಗಿ ನೀರಿಗಾಗಿ ಗ್ರಾಮಸ್ಥರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮೊಳಕಾಲುದ್ದದ ಹೊಂಡದಲ್ಲಿ ಬಂತು ಜೀವಜಲ: ಬಳೂರ್ಗಿ ಗ್ರಾಮದಲ್ಲಿರುವ ಕೆರೆಯ ಮಧ್ಯದಲ್ಲಿ ಮೊಳಕಾಲುದ್ದದ ಹೊಂಡ ಕೊರೆಯಲಾಗಿದ್ದು, ಹೊಂಡದಲ್ಲಿ ಜೀವ ಜಲ ಬಂದಿದೆ. ಅಲ್ಲಿಂದ ಈಗ ಗ್ರಾಮಸ್ಥರು ಬಳಕೆಗಾಗಿ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಹೊಂಡದಲ್ಲಿ ಒಳ್ಳೆಯ ನೀರು ಬರುತ್ತಿದೆ. ಆದರೆ ಹೊಂಡದ ಸುತ್ತ ಯಾವುದೇ ಸುರಕ್ಷತಾ ಬೇಲಿ ಇಲ್ಲದ್ದರಿಂದ ರಾತ್ರಿ ವೇಳೆಯಲ್ಲಿ ಹಂದಿಗಳು ಒದ್ದಾಡಿ ನೀರನ್ನು ಕಲುಷಿತಗೊಳಿಸುತ್ತಿವೆ. ಹೀಗಾಗಿ ಈ ನೀರು ಕುಡಿಯುವುದಕ್ಕೆ ಜನ ಹಿಂದೇಟು ಹಾಕುತ್ತಿದ್ದಾರೆ. ಸಂಬಂಧಪಟ್ಟವರು ಈ ಹೊಂಡಕ್ಕೆ ಸುಸಜ್ಜಿತವಾಗಿ ಬೇಲಿ ಹಾಕುವ ಕೆಲಸ ಮಾಡಿದರೆ ಗಾಮಸ್ಥರಿಗೆ ಅನುಕೂಲವಾಗಲಿದೆ.

ಮುಂದಿನ ತಿಂಗಳು ಗ್ರಾಮದ ನಂದಿ ಬಸವೇಶ್ವರ ಜಾತ್ರೆ ಇದೆ. ಜಾತ್ರೆ ಸಂದರ್ಭದಲ್ಲಿ ಗ್ರಾಮಕ್ಕೆ ಬಹಳಷ್ಟು ಜನ ಆಗಮಿಸುತ್ತಾರೆ. ಹೀಗಾಗಿ ಜಾತ್ರೆ ಸಂದರ್ಭದಲ್ಲಿ ನೀರಿನ ಸಮಸ್ಯೆ ಆಗದಂತೆ ಸಂಬಂಧ ಪಟ್ಟವರು ವ್ಯವಸ್ಥೆ ಮಾಡಬೇಕಾಗಿದೆ.

Advertisement

ಬಳೂರ್ಗಿ ಗ್ರಾಮ ಹಾಗೂ ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹಾಗೆ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಬಳೂರ್ಗಿ ಗ್ರಾಮದ ಕೆರೆಯಲ್ಲಿ ತೆಗೆದಿರುವ ಹೊಂಡದಲ್ಲಿ ನೀರು ಬಂದಿದೆ. ಈ ನೀರು ಜನರಿಗೆ ಸದುಪಯೋಗ ಆಗುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಗ್ರಾಮದ ನೀರಿನ ಸಮಸ್ಯೆ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
•ಬಳೂರ್ಗಿ ಗ್ರಾ.ಪಂ ಅಧ್ಯಕ್ಷೆ

ಗ್ರಾಮಕ್ಕೆ ಭೇಟಿ ನೀಡಿ ನೀರಿನ ಸಮಸ್ಯೆ ಕಂಡು ಬಂದರೆ, ಟ್ಯಾಂಕರ್‌ ಅಥವಾ ಖಾಸಗಿಯವರಿಂದ ನೀರು ಖರೀದಿಸಿ ಗ್ರಾಮಸ್ಥರಿಗೆ ನೀರು ಪೂರೈಸಲಾಗುತ್ತಿದೆ.
ಲಿಯಾಕತ್‌ ಅಲಿ,
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿ

ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ. ಇಂತಹ ಸಂದರ್ಭದಲ್ಲಿ ಗ್ರಾ.ಪಂನವರು ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆಯಲ್ಲಿ ಮೊಳಕಾಲುದ್ದ ಹೊಂಡ ಕೊರೆದಾಗ ನೀರು ಬಂದಿದ್ದು ಅಚ್ಚರಿ ಬೆಳವಣಿಗೆಯಾಗಿದೆ. ಹೊಂಡಕ್ಕೆ ಬೇಲಿ ಇಲ್ಲದ್ದರಿಂದ ಹಂದಿಗಳು ಒದ್ದಾಡಿ ನೀರನ್ನು ಕಲುಷಿತಗೊಳಿಸುತ್ತಿವೆ. ಹೀಗಾಗಿ ಈ ನೀರನ್ನು ಗ್ರಾಮಸ್ಥರು ಬಳಸುವಂತಾಗಲು ಗ್ರಾ.ಪಂ ಹೊಂಡದ ಸುತ್ತ ಬೇಲಿ ನಿರ್ಮಿಸಬೇಕು.
• ಸದ್ದಾಮ ನಾಕೇದಾರ, ಬಳೂರ್ಗಿ

•ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next