ಅಫಜಲಪುರ: ತಾಲೂಕಿನ ಗೊಬ್ಬೂರ (ಬಿ) ಗ್ರಾಮದಲ್ಲಿ ಉರಿ ಬಿಸಿಲಲ್ಲಿ ಅಲೆದಾಡಿ ಬಳಕೆಗೆ ಮತ್ತು ಕುಡಿಯಲು ನೀರು ತರುವಲ್ಲಿ ನೀರೆಯರು ಪರದಾಡುತ್ತಿದ್ದಾರೆ.
ಗ್ರಾಮದಲ್ಲಿ ಪುರಾತನ ಕಾಲದ 11 ತೆರೆದ ಬಾವಿಗಳಿವೆ. ಇಷ್ಟು ವರ್ಷ ಈ ಬಾವಿಗಳಿಂದ ಗ್ರಾಮಸ್ಥರು ನೀರು ಪಡೆಯುತ್ತಿದ್ದರು. ಈಗ ಅವೆಲ್ಲ ಬತ್ತಿ ಹೋಗಿವೆ. ಗ್ರಾಪಂ ವ್ಯಾಪ್ತಿಯ ವಾಡಿ ತಾಂಡಾ, ಗೊಬ್ಬೂರ ವಾಡಿ ಹಾಗೂ ಗೊಬ್ಬೂರ (ಬಿ) ಸೇರಿದಂತೆ ಒಟ್ಟು 30 ಕೊಳವೆ ಬಾವಿಗಳಿವೆ. ಇವುಗಳಲ್ಲಿ ಕೇವಲ 10 ರಲ್ಲಿ ಮಾತ್ರ ಅಲ್ಪಸ್ವಲ್ಪ ನೀರು ಬರುತ್ತಿದೆ. ಅದು ಒಂದು ಕೊಳವೆ ಬಾವಿಗೆ 10 ಕೊಡಗಳಷ್ಟು ಮಾತ್ರ ನೀರು ಬರುತ್ತಿದೆ. ಈ ಕೊಳವೆ ಬಾವಿಗಳ ಎದುರು ನಸುಕಿನ ಜಾವದಿಂದ ರಾತ್ರಿ ವರೆಗೆ ಗ್ರಾಮಸ್ಥರು ಕಾಯ್ದು ನೀರು ತೆಗೆದುಕೊಂಡು ಹೋಗುವ ಪರಿಸ್ಥಿತಿಯಿದೆ.
ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ಧು ಶಿರಸಗಿ ಅವರು ಗ್ರಾಮದ ಅಂಬೇಡ್ಕರ್ ಭವನದ ಎದುರು ಕೊರೆಸಿದ ಕೊಳವೆ ಬಾವಿಯಲ್ಲಿ ಸ್ವಲ್ಪ ನೀರಿನಮಟ್ಟ ಹೆಚ್ಚಿದೆ. ಗ್ರಾಮದ ಬಹುತೇಕರು ಈಗ ಅದನ್ನೇ ನೆಚ್ಚಿಕೊಂಡಿದ್ದಾರೆ. ಅದರ ಮೇಲೂ ಹೆಚ್ಚಿನ ಒತ್ತಡ ಇರುವುದರಿಂದ ನೀರು ಸಮರ್ಪಕವಾಗಿ ಸಾಕಾಗುತ್ತಿಲ್ಲ. ಹೀಗಾಗಿ ಗ್ರಾಮದ ಯುವಕರು ಕಿಲೋ ಮೀಟರ್‌ಗಟ್ಟಲೇ ದೂರ ಹೋಗಿ ದ್ವಿಚಕ್ರ, ತ್ರಿಚಕ್ರ, ತಳ್ಳು ಬಂಡಿಗಳು ಹಾಗೂ ಎತ್ತಿನ ಬಂಡಿಗಳಲ್ಲಿ ನೀರು ತರುತ್ತಿದ್ದಾರೆ. ಗೊಬ್ಬೂರ (ಬಿ) ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 8250 ಜನಸಂಖ್ಯೆ ಇದೆ. ಇಷ್ಟು ಪ್ರಮಾಣದ ಜನಸಂಖ್ಯೆಗೆ ನೀರು ಸಾಕಾಗುತ್ತಿಲ್ಲ. ಹೀಗಾಗಿ ಎಲ್ಲರೂ ನಿತ್ಯ ನೀರಿಗಾಗಿ ಊಟ, ಕೆಲಸ ಬಿಟ್ಟು ನೀರು ತರಲು ಸುಡು ಬಿಸಿಲಲ್ಲೇ ಅಲೆದಾಡಬೇಕಾದ ಅನಿವಾರ್ಯತೆ ಬಂದಿದೆ.
ಇನ್ನೂ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಒಂದು ವರ್ಷದಿಂದ ಸ್ಥಗಿತವಾಗಿದೆ. ಇದರಿಂದ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಶುದ್ಧೀಕರಣ ಘಟಕ ಸ್ಥಗಿತದ ಬಗ್ಗೆ ವಿಚಾರಿಸಿದಾಗ ನೀರಿನ ಮೂಲವೇ ನಿಂತು ಹೋಗಿದೆ. ಹೀಗಾಗಿ ಶುದ್ಧೀಕರಣ ಘಟಕ ಸ್ಥಗಿತಗೊಳಿಸಲಾಗಿದೆ ಎಂದು ಸಂಬಂಧಿಸಿದವರು ಉತ್ತರಿಸುತ್ತಾರೆ. ಗೊಬ್ಬೂರವಾಡಿ, ವಾಡಿ ತಾಂಡಾ ಹಾಗೂ ಗೊಬ್ಬೂರ (ಬಿ) ಗ್ರಾಮದಲ್ಲಿ ತಲಾ ಒಂದು ಕೊಳವೆ ಬಾವಿ ಖರೀದಿಸಲಾಗಿದೆ. ಇದರಿಂದ ಮಿನಿ ಟ್ಯಾಂಕ್‌ಗಳಿಗೆ ನೀರು ತುಂಬಿ ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಪಂ ಅಧ್ಯಕ್ಷ ಶಿವಾನಂದ ಅಲ್ದೆ ತಿಳಿಸಿದ್ದಾರೆ. ಜಿಪಂನ ಎನ್‌ಆರ್‌ಡಬ್ಲ್ಯುಪಿ ಅಡಿ ಒಂದು ಕೋಟಿ ರೂ. ಅನುದಾನ ತಂದು ತೆರೆದ ಕೊಳವೆ ಬಾವಿ ಕೊರೆಸಲಾಗಿದೆ. ಆದಷ್ಟು ಬೇಗ ಗೊಬ್ಬೂರ (ಬಿ) ಗ್ರಾಪಂ ವ್ಯಾಪ್ತಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ಧು ಶಿರಸಗಿ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಹಿರೇಮಠ