Advertisement

ಬಾರದ ಮಳೆ-ಬಿತ್ತನೆ ಕುಂಠಿತ

10:10 AM Jul 28, 2019 | Naveen |

ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ:
ಕಳೆದ ವರ್ಷದಂತೆ ಈ ವರ್ಷವು ಮಳೆ ಬಾರದೆ ಇರುವುದರಿಂದ ಬಿತ್ತನೆ ಕ್ಷೇತ್ರದಲ್ಲಿ ತೀವ್ರ ಕುಂಠಿತವಾಗುತ್ತಿದೆ. ಮಳೆ ಬಾರದೆ ಇರುವುದರಿಂದ ರೈತರು ಚಿಂತೆಗೀಡಾಗಿದ್ದಾರೆ. ಹೊಟ್ಟೆಗೆ ಹಿಟ್ಟು ಮಾಡಿಕೊಳ್ಳುವುದಿರಲಿ, ಜನ-ಜಾನುವಾರುಗಳಿಗೆ ಕುಡಿಯುವ ನೀರು ಸಿಗದಂತಹ ಸ್ಥಿತಿ ಇದೆ.

Advertisement

ತಾಲೂಕಿನಾದ್ಯಂತ ಅಫಜಲಪುರ, ಅತನೂರ, ಕರ್ಜಗಿ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ಮಳೆ ಕೊರತೆ ಕಾಡುತ್ತಿದೆ. ಅದರಲ್ಲೂ ಅತನೂರ ರೈತ ಸಂಪರ್ಕ ಕೇಂದ್ರದಲ್ಲಿ ತೀರಾ ಮಳೆ ಕೊರತೆ ಕಾಡುತ್ತಿದೆ. ಹೀಗಾಗಿ ರೈತರು ಮುಂಗಾರು ಆರಂಭಗೊಂಡು ತಿಂಗಳು ಕಳೆದರೂ ಬಿತ್ತನೆ ಮಾಡುತ್ತಿಲ್ಲ.

ರೈತನ ಮನ ಮರಗುತ್ತಿದೆ: ದೇವರ ಮೇಲೆ ಭಾರ ಹಾಕಿ ಮಳೆ ಬರುತ್ತದೆ ಎಂದು ನಂಬಿದ ಕೆಲವು ರೈತರು ಮುಂಗಾರು ಆರಂಭದಲ್ಲೇ ಬಿತ್ತನೆ ಮಾಡಿದ್ದಾರೆ. ಆದರೆ ಈಗ ಮಳೆ ಬಾರದೆ ಇರುವುದರಿಂದ ಬಿತ್ತಿದ ಬೆಳೆ ಬಾಡುತ್ತಿದೆ. ಇದರಿಂದ ರೈತರ ಮನ ಮರಗುತ್ತಿದೆ. ಹೀಗಾಗಿ ರೈತರು ಮತ್ತು ಜಾನುವಾರುಗಳ ಪಾಡು ಕಂಡು ದೇವರೇ ಕಣ್ಣು ತೆರೆಯಬೇಕಾದ ಪ್ರಸಂಗ ಎದುರಾಗಿದೆ.

ಶೇ. 21 ಬಿತ್ತನೆ ಬಾಕಿ: ತಾಲೂಕಿನಲ್ಲಿ ಮುಂಗಾರು ಬಿತ್ತನೆ ಕ್ಷೇತ್ರ ಗುರಿ 99850 ಹೆಕ್ಟೇರ್‌ ಇದ್ದು, ಇಲ್ಲಿಯವರೆಗೂ 79627 ಹೆಕ್ಟೇರ್‌ ಬಿತ್ತನೆಯಾಗಿ ಪ್ರತಿಶತ 79ರಷ್ಟು ಗುರಿ ತಲುಪಿದಂತಾಗಿದ್ದು, ಇನ್ನೂ 21 ಪ್ರತಿಶತ ಬಿತ್ತನೆ ಬಾಕಿ ಉಳಿದಿದೆ. ಏಕದಳ ಗುರಿ 2315 ಹೆಕ್ಟೇರ್‌ ಇದ್ದು, ಈ ಪೈಕಿ ಕೇವಲ 281 ಹೆಕ್ಟೇರ್‌ ಬಿತ್ತನೆಯಾಗಿದೆ. ದ್ವಿದಳ 73835 ಹೆಕ್ಟೇರ್‌ ಗುರಿ ಇದ್ದು, 47741 ಹೆಕ್ಟೇರ್‌ ಬಿತ್ತನೆಯಾಗಿದೆ. ಎಣ್ಣೆ ಕಾಳು 2490 ಹೆಕ್ಟೇರ್‌ ಗುರಿ ಪೈಕಿ 175 ಹೆಕ್ಟೇರ್‌ ಬಿತ್ತನೆಯಾಗಿದೆ. ವಾಣಿಜ್ಯ ಬೆಳೆ ಗುರಿ 21210 ಹೆಕ್ಟೇರ್‌ ಇದ್ದು 31430 ಹೆಕ್ಟೇರ್‌ ಬಿತ್ತನೆಯಾಗಿದೆ. ಅಂದರೆ ಗುರಿಗಿಂತ ಹೆಚ್ಚಿನ ಬಿತ್ತನೆಯಾಗಿದೆ.

ಬೆಳೆಗಳ ಮಾಹಿತಿ: 2018-19ರಲ್ಲಿ 59312 ಹೆಕ್ಟೇರ್‌ ಬಿತ್ತನೆಯಾಗಿದೆ. ಈ ವರ್ಷದಲ್ಲಿ 47555 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹತ್ತಿ ಕಳೆದ ವರ್ಷ 7113 ಹೆಕ್ಟೇರ್‌ ಬಿತ್ತನೆಯಾಗಿತ್ತು. ಈ ವರ್ಷ 18830 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮೆಕ್ಕೆಜೋಳ ಕಳೆದ ವರ್ಷ 773 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈ ವರ್ಷ 180 ಹೆಕ್ಟೇರ್‌ ಬಿತ್ತನೆಯಾಗಿದೆ. ಸೂರ್ಯಕಾಂತಿ ಕಳೆದ ವರ್ಷ 907 ಹೆಕ್ಟೇರ್‌ ಬಿತ್ತನೆಯಾಗಿತ್ತು. ಈ ವರ್ಷ 142 ಹೆಕ್ಟೇರ್‌ ಬಿತ್ತನೆಯಾಗಿದೆ. ಕಬ್ಬು ಕಳೆದ ವರ್ಷ 25693 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈ ವರ್ಷ 12600 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿ ಅರ್ಧದಷ್ಟು ಕಬ್ಬು ಕ್ಷೇತ್ರ ಕಡಿಮೆಯಾಗಿದೆ. ಹೆಸರು ಕಳೆದ ವರ್ಷ 602 ಹೆಕ್ಟೇರ್‌ ಬಿತ್ತನೆಯಾಗಿತ್ತು. ಈ ವರ್ಷ ಕೇವಲ 100 ಹೆಕ್ಟೇರ್‌ ಬಿತ್ತನೆಯಾಗಿದೆ.

Advertisement

ಕಳೆದ ವರ್ಷ ತೊಗರಿ, ಕಬ್ಬು, ಮೆಕ್ಕೆಜೋಳ, ಹೆಸರು, ಸೂರ್ಯಕಾಂತಿ ಬೆಳೆಗಳು ಹೆಚ್ಚು ಬಿತ್ತನೆಯಾಗಿದ್ದವು. ಈ ವರ್ಷ ಕಡಿಮೆಯಾಗಿವೆ. ಕಳೆದ ವರ್ಷ ಕಡಿಮೆ ಬಿತ್ತನೆಯಾಗಿದ್ದ ಹತ್ತಿ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದೆ.

ಮಳೆ ಮಾಹಿತಿ: ತಾಲೂಕಿನಲ್ಲಿ ಪ್ರಸಕ್ತ ವರ್ಷದಲ್ಲಿ ವಾಡಿಕೆ ಮಳೆ ಜುಲೈ ಅಂತ್ಯದ ವರೆಗೆ 275 ಮಿ.ಮೀ ಆಗಬೇಕಿತ್ತು. ಆದರೆ 202.5 ಮಿ.ಮೀ ಮಳೆಯಾಗಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

ಅಫಜಲಪುರ ವಲಯದಲ್ಲಿ ಅತೀ ಹೆಚ್ಚು 284.3 ಮಿ.ಮೀ, ಕರ್ಜಗಿಯಲ್ಲಿ 248.4 ಮಿ.ಮೀ, ಅತನೂರ ವಲಯದಲ್ಲಿ 157.5 ಮಿ.ಮೀ., ಗೊಬ್ಬೂರ (ಬಿ) 119.9 ಮಿ.ಮೀ ಮಳೆಯಾಗಿದೆ. ಹೀಗಾಗಿ ರೈತರು ಚಿಂತೆಗೆ ಒಳಗಾಗುವಂತೆ ಆಗಿದೆ.

ಕಳೆದ ವರ್ಷ ಜನವರಿಯಿಂದ ಡಿಸೆಂಬರ್‌ ವರೆಗೆ ವಾಡಿಕೆ ಮಳೆ 667.3 ಮಿ.ಮೀ ಇತ್ತು. ಆದರೆ ಕೇವಲ 398.3 ಮಿ.ಮೀ ಮಳೆಯಾಗಿತ್ತು. ಕಳೆದ ವರ್ಷ 268.5 ಎಂ.ಎಂ ಮಳೆ ಕೊರತೆಯಾಗಿತ್ತು. ಈ ಬಾರಿ ಅಗಸ್ಟ್‌ ವರೆಗೆ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಇದ್ದು, ರೈತರು ನಿಟ್ಟುಸಿರು ಬಿಡುವಂತಾಗಿದೆ.

ತಾಲೂಕಿನಾದ್ಯಂತ ವಾಡಿಕೆಯಷ್ಟು ಮಳೆಯಾಗಿಲ್ಲ. ಹೀಗಾಗಿ ಬಿತ್ತನೆ ಸ್ವಲ್ಪ ಕುಂಠಿತವಾಗಿದೆ. ಅತನೂರ, ಗೊಬ್ಬೂರ ಸೇರಿದಂತೆ ಕೆಲವು ಕಡೆ ಮಳೆಯಾಗಿಲ್ಲ. ಇನ್ನೂ ಮಳೆಯಾಗುವ ಲಕ್ಷಣಗಳಿವೆ. ಹೀಗಾಗಿ ರೈತರು ಬಿತ್ತನೆಗೆ ಭೂಮಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಲಭ್ಯವಿದೆ.
• ಮಹಮ್ಮದ್‌ ಖಾಸಿಂ,
ಸಹಾಯಕ ಕೃಷಿ ನಿರ್ದೇಶಕ

ಕೃಷಿ ಇಲಾಖೆ ಅಧಿಕಾರಿಗಳು ಮಳೆಯಾಗಿದೆ ಎಂದು ಮಾಧ್ಯಮದಲ್ಲಿ ಹೇಳಿಕೆ ನೀಡುತ್ತಾರೆ. ಆದರೆ ನಮ್ಮ ಕಡೆ ಮಳೆಯೇ ಆಗುತ್ತಿಲ್ಲ. ಸುಳ್ಳು ಮಾಹಿತಿ ನೀಡುವುದರಿಂದ ಯಾರಿಗೂ ಲಾಭವಿಲ್ಲ.
ಮಹಾಂತಯ್ಯ ಸ್ವಾಮಿ ಚೌಕಿಮಠ,
  ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಅತನೂರ

ಹೋದ ವರ್ಷ ಮಳಿ ಬರಲಿಲ್ಲ. ಕುಡಿಲಿಕ್‌ ನೀರ್‌ ಸಿಗಲಾರದಂಗ್‌ ಆಗಿತ್ತು. ಈ ವರ್ಷನೂ ಮಳಿ ಬರವಲ್ದು. ಒಣ ಮಣ್ಣಾಗ್‌ ಬಿತ್ತಿ ಕುಂತಿದೇವು. ಮಳಿ ಬಂದ್ರ ನಾಲ್ಕು ಕಾಳ್‌ ಬೆಳೆದು ನಮ್‌ ಹೊಟ್ಟಿ ತುಂಬಸ್ಕೋತಿವಿ. ಇಲ್ಲಾಂದ್ರ ಈ ಸಲ ಊರ್‌ ಬಿಟ್ಟು ದೇಶಾಂತರ ಹೋಗಬೇಕಾತದ್ರಿ ಎನ್ನುತ್ತಾರೆ ಅತನೂರ, ಗೊಬ್ಬೂರ ವಲಯದ ರೈತರು.

Advertisement

Udayavani is now on Telegram. Click here to join our channel and stay updated with the latest news.

Next