ಅಫಜಲಪುರ: ತಾಲೂಕಿನಲ್ಲಿ ಮಳೆಯಾಗದೆ ಸಾಕಷ್ಟು ಕಡೆ ಬಿತ್ತನೆಯಾಗಿಲ್ಲ, ಬಿತ್ತಿದ ಬೆಳೆಗಳು ಸರಿಯಾಗಿ ಬೆಳವಣಿಗೆಯಾಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಭೀಮಾ ನದಿಯಲ್ಲಿ ಪ್ರವಾಹ ಬಂದು ನದಿ ದಂಡೆ ಊರುಗಳಲ್ಲಿ ಸಾಕಷ್ಟು ಪ್ರಮಾಣದ ಬೆಳೆ, ಜಮೀನು, ಆಸ್ತಿಪಾಸ್ತಿ ನಷ್ಟವಾಗಿದೆ. ಹೀಗಾಗಿ ಅಧಿಕಾರಿಗಳು ಎಲ್ಲದರ ಸರ್ವೇ ಮಾಡಿ, ಮಾಹಿತಿ ಸಲ್ಲಿಸುವಂತೆ ಶಾಸಕ ಎಂ.ವೈ. ಪಾಟೀಲ ಸೂಚಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ತಾಲೂಕಿಗೆ ನೆರೆ ಮತ್ತು ಬರ ಎರಡೂ ದಾಳಿ ಇಟ್ಟಿವೆ. ಒಂದು ಕಡೆ ಮಳೆಯಾಗದೆ ಬೆಳೆ ಒಣಗುತ್ತಿವೆ. ಇನ್ನೊಂದು ಕಡೆ ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದ ಭೀಮಾ ನದಿ ದಂಡೆಯ ಊರುಗಳಲ್ಲಿ ನೆರೆ ಉಂಟಾಗಿ ಸಾಕಷ್ಟು ಹಾನಿಯಾಗಿದೆ. ಹೀಗಾಗಿ ಅಫಜಲಪುರ ತಾಲೂಕಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಹಾಗೂ ತಾಲೂಕನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಅನುದಾನ ನೀಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.
ಬೆಳೆ ಸರ್ವೇ ಕೆಲಸಕ್ಕೆ ನೇಮಕವಾದ ನೋಡಲ್ ಅಧಿಕಾರಿಗಳು, ಕೃಷಿ, ತೋಟಗಾರಿಕೆ, ಕಂದಾಯ, ಗ್ರಾಪಂ ಪಿಡಿಒಗಳು ಸೇರಿ ಸರ್ವೇ ಮಾಡಬೇಕು. ಯಾರೂ ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳದೆ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ನೆರೆಯಿಂದ ತಾಲೂಕಿನಲ್ಲಿ 41 ಗ್ರಾಮಗಳು ನಷ್ಟ ಅನುಭವಿಸಿವೆ. ಉಳಿದ ಕಡೆ ಬರ ಆವರಿಸಿದೆ. ಮೊದಲು ನೆರೆ ಸಮೀಕ್ಷೆ ಮಾಡಿ, ಬಳಿಕ ಬರದ ಸಮೀಕ್ಷೆ ಮಾಡಿ ವರದಿ ಸಲ್ಲಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಜಿಲ್ಲಾ ನೋಡಲ್ ಅಧಿಕಾರಿ ಸೋಮಪ್ಪ ಕಡಕೋಳ, ತಹಶೀಲ್ದಾರ್ ಮಧುರಾಜ್ ಕೂಡಲಗಿ ಮಾತನಾಡಿ, ಸಮೀಕ್ಷೆ ಸಂದರ್ಭದಲ್ಲಿ ಯಾವ ರೈತರ ಜಮೀನೂ ಬಿಟ್ಟು ಹೋಗದಂತೆ ಎಚ್ಚರಿಕೆಯಿಂದ ಸಮೀಕ್ಷೆ ಮಾಡಬೇಕು. ಯಾವೊಬ್ಬ ರೈತರು ತಮ್ಮ ಜಮೀನು ಸರ್ವೇ ಆಗಿಲ್ಲವೆಂದು ದೂರು ನೀಡಬಾರದು, ಹಾಗೆ ಕೆಲಸ ಮಾಡಿ. ಬೆಳೆ ಹಾಳಾದ ರೈತರಿಗೆ ಎನ್‌ಡಿಆರ್‌ಎಫ್ ಅಡಿಯಲ್ಲಿ ಪರಿಹಾರ ನೀಡಲಾಗುತ್ತದೆ ಎಂದರು.
ಸಣ್ಣ ನೀರಾವರಿ ಇಲಾಖೆ ಎಇಇ ಶಾಂತಪ್ಪ ಜಾಧವ ಮಾತನಾಡಿ, ದೇವಲ ಗಾಣಗಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಪ್ರವಾಹದ ನೀರಿನಿಂದ ಹಾನಿಯಾಗಿದೆ. ಕೂಡು ರಸ್ತೆ, ಬ್ಯಾರೇಜ್ ತಡೆಗೋಡೆ ಒಡೆದು 5.9 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿದರು.
ಶಾಸಕ ಎಂ.ವೈ. ಪಾಟೀಲ ಇದಕ್ಕೆ ಉತ್ತರಿಸಿ, ಗೇಟ್‌ಗಳನ್ನು ತೆಗೆದು ಹೈಡ್ರಾಲಿಕ್ ಗೇಟ್ ಅಳವಡಿಸಿದರೆ ಸ್ವಲ್ಪ ಸಮಸ್ಯೆ ಕಡಿಮೆಯಾಗಬಹುದು ಎಂದರು. ಆಗ ಅಧಿಕಾರಿ, ಒಂದು ಬ್ಯಾರೇಜ್‌ನ ಹೈಡ್ರಾಲಿಕ್ ಗೇಟ್ ಅಳವಡಿಕೆಗೆ ಅಂದಾಜು 35 ಕೋಟಿ ರೂ. ವೆಚ್ಚವಾಗಲಿದೆ ಎಂದು ತಿಳಿಸಿದರು.
ಪಿಡಬ್ಲ್ಯುಡಿ ಇಲಾಖೆ ಜೆಇ ಉಮೇಶ ಅಲೆಗಾಂವ ಮಾತನಾಡಿ, ನೆರೆಯಿಂದಾಗಿ ಮಂಗಳೂರ, ದುದ್ದುಣಗಿ, ಭೋಸಗಾ ಗ್ರಾಮಗಳು ಸೇರಿದಂತೆ ಒಟ್ಟು 190 ಲಕ್ಷ ರೂ. ಅಂದಾಜಿನ ರಸ್ತೆ ಹಾಗೂ 40 ಲಕ್ಷ ರೂ. ಅಂದಾಜಿನ ಸಿಡಿಗಳು ಹಾನಿಯಾಗಿವೆ ಎಂದು ಮಾಹಿತಿ ನೀಡಿದರು.
ಪಿಆರ್‌ಇ ಜೆಇ ಉಮೇಶ ಮುನವಳ್ಳಿ ಮಾತನಾಡಿ, ಪ್ರವಾಹದ ನೀರಿನಿಂದ ತಾಲೂಕಿನಲ್ಲಿ ಒಂಭತ್ತು ರಸ್ತೆ, ಏಳು ಸಿಡಿಗಳು ಹಾಳಾಗಿವೆ. ಸುಮಾರು 59.75 ಲಕ್ಷ ರೂ. ಗಳಷ್ಟು ನಷ್ಟ ಉಂಟಾಗಿದೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆ, ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ತಾಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ, ಪುರಸಭೆ ಮುಖ್ಯಾಧಿಕಾರಿ ಅಶೋಕ ಬಿಲಗುಂದಿ, ತಾ.ಪಂ ಇಒ ರಮೇಶ ಸುಲ್ಪಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಪಿಡಿಒಗಳು, ಗ್ರಾಮ ಲೆಕ್ಕಿಗರು ಇದ್ದರು.