ಅಫಜಲಪುರ: ಹಳ್ಳಿಗಾಡಿನ ಜನತೆಗೆ ಮನೆ ಕಟ್ಟುವುದು, ಮದುವೆ ಮಾಡಿಸುವುದು ಬಹಳ ಕಷ್ಟದ ಕೆಲಸ, ಹೀಗಾಗಿ ಸಾಮೂಹಿಕ ಮದುವೆ ಮಾಡುತ್ತಿದ್ದೇವೆ ಎಂದು ಜಿಡಗಾ, ಮುಗುಳಖೋಡ, ಕರ್ಜಗಿ ಮಠದ ಪೀಠಾಧಿ ಪತಿ ಡಾ| ಮುರುಘರಾಜೇಂದ್ರ ಮಹಾ ಸ್ವಾಮೀಜಿ ನುಡಿದರು.
ತಾಲೂಕಿನ ಕರ್ಜಗಿ ಗ್ರಾಮದ ಯಲ್ಲಾಲಿಂಗೇಶ್ವರ ಮಠದ ಜಾತ್ರೆ ಪ್ರಯುಕ್ತ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 28 ಜೋಡಿಗಳಿಗೆ ಆಶೀರ್ವಾದ ಮಾಡಿ ಅವರು ಮಾತನಾಡಿದರು.
ಪ್ರತಿವರ್ಷದಂತೆ ಈ ವರ್ಷವೂ ಕರ್ಜಗಿ ಮಠದ ಜಾತ್ರೆ ಪ್ರಯುಕ್ತ ಸಾಮೂಹಿಕ ಮದುವೆ ಮಾಡಿಸಲಾಗುತ್ತಿದೆ. ಸಾಮೂಹಿಕ ಮದುವೆಗಳಿಂದ ಬಡ ಜನರ ಆರ್ಥಿಕ ಭಾರ ಕಡಿಮೆಯಾಗುತ್ತದೆ. ಆದ್ದರಿಂದ ಇಂತಹ ಮದುವೆಗೆ ಒತ್ತು ನೀಡಿ ಎಂದರು.
ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ಮಠಗಳಿಂದಲೇ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವಾಗಿದೆ ಎಂದರು. ಕರ್ಜಗಿ ಗ್ರಾಮದ ಮುಖಂಡ ರಾಜು ಜಿಡ್ಡಗಿ ವಧು-ವರರಿಗೆ ಮಂಗಳಸೂತ್ರ, ಕಾಲುಂಗುರ ಸೇವೆ ಸಲ್ಲಿಸಿದರು. ಶಿವಲಿಂಗಯ್ಯ ಅವರಿಂದ ವಧು-ವರರಿಗೆ ದಂಡಿ, ಭಾಸಿಂಗ, ಹಾರ, ಮಹಾಂತಯ್ಯ ಹೀರೆಮಠ ಅವರಿಂದ ಬಟ್ಟೆ ಸೇವೆ ಸಲ್ಲಿಸಲಾಯಿತು. ಸಮಾಜ ಸೇವಕ ಜೆ.ಎಂ ಕೊರಬು ಜಾತ್ರೆ ಮತ್ತು ಸಾಮೂಹಿಕ ವಿವಾಹಕ್ಕೆ ಬಂದವರಿಗೆ ಪ್ರಸಾದ ವ್ಯವಸ್ಥೆ ಮಾಡಿಸಿದ್ದರು.
ಸಾಮೂಹಿಕ ವಿವಾಹಕ್ಕೂ ಮೊದಲು ಬೆಳಗ್ಗೆ ಜಾತ್ರೆ ನಿಮಿತ್ತ ಶ್ರೀ ಸಿದ್ಧರಾಮೇಶ್ವರ ಮತ್ತು ಯಲ್ಲಾಲಿಂಗೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಜರುಗಿತು. ಸಂಜೆ 5ಗಂಟೆಗೆ ಉಡಚಾಣ ಹಟ್ಟಿ ಗ್ರಾಮದಿಂದ ಕುಂಭಮೇಳ, ನಂದಿಕೊಲದೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಿತು. ಡಾ| ಮುರುಘರಾಜೇಂದ್ರ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿದರು.
ಜಿ.ಪಂ ಮಾಜಿ ಅಧ್ಯಕ್ಷ ನೀತಿನ ಗುತ್ತೇದಾರ, ತಾ.ಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ, ರಾಮಣ್ಣಾ ನಾಯ್ಕೋಡಿ, ಮಾಹಾಂತಯ್ಯ ಹೀರೆಮಠ, ರಮೇಶ ಬಾಕೆ, ಚಂದು ದೇಸಾಯಿ, ಕಾಶೀನಾಥ ಹಳಗೋದಿ, ಅಂಬಣ್ಣ ನರಗೋದಿ, ಗೀತಾ ಕೊರಬು, ಮಲ್ಲಪ್ಪ ಕಿಣಗಿ, ಭೀಮಶಾ ಪರೀಟ, ಕಾಂತು ಉಪ್ಪಿನ, ಗೊಲ್ಲಾಳ ಮಲಘಾಣ, ಮಹೇಶ ಹಿರೋಳಿ, ಬಸು ಹೂಗಾರ, ವಿಠೊಭಾ ಹಳಗೋದಿ, ಭೀಮಾ ನಾಯ್ಕೋಡಿ, ಪುನ್ನಪ್ಪ ಡಾಳೆ, ಶ್ರೀಮಂತ ನಾವಿ, ಶ್ರೀಶೈಲ ಘತ್ತರಗಿ, ಇರ್ಪಾನ್ ಜಮಾದಾರ, ಭೀಮಾಶಂಕರ ಬಿರಾದಾರ, ಗಜಾನಂದ ನರಗೋದಿ ಇತರರು ಇದ್ದರು.