ಅಫಜಲಪುರ: ರಾಜ್ಯದಲ್ಲಿ ಮಳೆ ಕೊರತೆ ಇದೆ ಎಂದು ಮುಗಿಲ ಕಡೆ ಮುಖ ಮಾಡುವ ಹೊತ್ತಿಗೆ ಮಹಾರಾಷ್ಟ್ರದಲ್ಲಿ ಉಂಟಾದ ಭೀಕರ ಮಳೆಯಿಂದ ಭಾರಿ ಪ್ರಮಾಣದ ನೀರು ಭೀಮಾ ನದಿಗೆ ಹರಿದು ಬರುತ್ತಿರುವುದಿರಂದ ತಾಲೂಕಿನ ಭೀಮಾ ನದಿ ಪಾತ್ರದ ಹಳ್ಳಿಗಳು ತಲ್ಲಣಗೊಳ್ಳುತ್ತಿವೆ.
Advertisement
ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದ ಅಲ್ಲಿನ ಪ್ರದೆಶಗಳು ಮಾತ್ರವಲ್ಲ ಕರ್ನಾಟಕದ ಅನೇಕ ಜಿಲ್ಲೆಗಳು, ತಾಲೂಕು ಹಳ್ಳಿಗಳು ಹಾನಿಗೀಡಾಗಿವೆ. ಅದರಲ್ಲೂ ಅಫಜಲಪುರ ತಾಲೂಕಿನ ಭೀಮಾ ನದಿ ಪಾತ್ರದ ಮಣ್ಣೂರ, ಶೇಷಗಿರಿವಾಡಿ, ಉಡಚಣ, ಮಂಗಳೂರ, ಬಂಕಲಗಾ, ಶಿವೂರ, ಸೊನ್ನ, ಹಿರಿಯಾಳ, ಹಾವಳಗಿ, ಅಳ್ಳಗಿ (ಬಿ), ಅಳ್ಳಗಿ (ಕೆ), ಗುಡ್ಡೇವಾಡಿ, ದೇಸಾಯಿ ಕಲ್ಲೂರ, ಅಫಜಲಪುರ ಪಟ್ಟಣ, ಘತ್ತರಗಿ, ತೆಲ್ಲೂರ, ದೇವಲ ಗಾಣಗಾಪುರ, ಹಳ್ಳಿ, ಚಿನಮಳ್ಳಿ, ಬಂದರವಾಡ, ಸಾಗನೂರ, ಸಂಗಾಪುರ, ಘೂಳನೂರ ಹಾಗೂ ಹತ್ತಾರು ಹಳ್ಳಿಗಳಲ್ಲಿ ಪ್ರವಾಹದ ನೀರು ಅವಾಂತರ ಸೃಷ್ಟಿಸಿದೆ.
Related Articles
Advertisement
ಮಳೆ ಕೊರತೆಯಿಂದಲೂ ಬೆಳೆ ಹಾಳು: ಇನ್ನೂ ಮಹಾ ಮಳೆಯಿಂದ ಭೀಮಾ ನದಿಯಲ್ಲಿ ಪ್ರವಾಹ ಬಂದು ಬೆಳೆ ಹಾಳಾದರೆ ತಾಲೂಕಿನ ಬಹುತೇಕ ಕಡೆಯಲ್ಲಿ ಮಳೆಯೇ ಬಂದಿಲ್ಲ. ಹೀಗಾಗಿ ಮಳೆ ಕೊರತೆಯಿಂದಲೂ ಸಾಕಷ್ಟು ಬೆಳೆ ಹಾಳಾಗುತ್ತಿದೆ. ತಾಲೂಕಿನಾದ್ಯಂತ ವಾರ್ಷಿಕ ವಾಡಿಕೆ ಮಳೆ 667.3 ಮಿ.ಮೀ ಆಗಬೇಕಾಗಿತ್ತು. ಜನವರಿಯಿಂದ ಜುಲೈ ಅಂತ್ಯದವರೆಗೆ 275.4 ಮಿ.ಮೀ ಮಳೆಯಾಗಬೇಕಿತ್ತು. ಇದರಲ್ಲಿ ಕೇವಲ 226.1 ಮಿ.ಮೀ ಮಳೆಯಾಗಿದೆ. ಹೀಗಾಗಿ 49.3 ಮಿ.ಮೀ ಮಳೆ ಕೊರತೆಯಾಗಿದೆ.
ಕಳೆದ ವರ್ಷ ಭೀಕರ ಬರಗಾಲ ಆವರಿಸಿ ತಾಲೂಕಿನ ಜನ ಜಾನುವಾರುಗಳು ಪರಿತಪಿಸುವಂತಾಗಿತ್ತು. ಈಗ ಪ್ರವಾಹ ಮತ್ತು ಬರ ಎರಡರಿಂದಲೂ ತಾಲೂಕಿನ ರೈತರು, ಜನ ಸಾಮಾನ್ಯರು ಹೈರಾಣಾಗುವಂತಾಗಿದೆ.
ಸರ್ಕಾರ ಈ ಸಂದಿಗ್ಧ ಪರಿಸ್ಥಿತಿ ಅವಲೋಕಿಸಿ ನೆರೆ ಮತ್ತು ಬರ ಹಾವಳಿ ಪರಿಹಾರ ಕೊಟ್ಟು ರೈತರು, ಜನಸಾಮಾನ್ಯರಿಗೆ ಆಸರೆಯಾಬೇಕಾಗಿದೆ. ನಮಗೆ ಮಳೆ ಬಂದರೂ ಅನುಕೂಲವಾಗಿಲ್ಲ. ನೆರೆ ಬಂದರೂ ಸುಖವಾಗಿಲ್ಲ. ಬರಗಾಲ ಆವರಿಸಿ ಬಿತ್ತಿದ ಬೆಳೆ ಫಸಲು ನೀಡುವ ಲಕ್ಷಣ ಕಾಣುತ್ತಿಲ್ಲ. ಸರ್ಕಾರ ನಮ್ಮ ಪರಿಸ್ಥಿತಿ ಕಂಡೂ ಕೈ ಹಿಡಿಯದಿದ್ದರೆ, ನಾವು ಪುನಃ ಸಾವಿನ ಮನೆ ಬಾಗಿಲಿಗೆ ಬಂದು ನಿಲ್ಲುವ ಪರಿಸ್ಥಿತಿ ಬರುತ್ತದೆ ಎನ್ನುತ್ತಾರೆ ರೈತರು.