ಅಫಜಲಪುರ: ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದ ತಾಲೂಕಿನ ಭೀಮಾ ನದಿ ಉಕ್ಕಿ ಹರಿದ ಪರಿಣಾಮ ಬಹಳಷ್ಟು ಬೆಳೆ, ಮನೆ, ಆಸ್ತಿ ಪಾಸ್ತಿಗಳಿಗೆ ನಷ್ಟ ಉಂಟಾಗಿದೆ. ಭೀಮಾನದಿಯಲ್ಲಿ ನೆರೆ ಇಳಿದ ಮೇಲೆ ಈಗ ನಷ್ಟದ ಬರೆ ಬಿದ್ದಿದೆ.
ತಾಲೂಕಿನಲ್ಲಿ ಹರಿಯುವ ಭೀಮಾ ನದಿಯಲ್ಲಿ ಈಗ ಪ್ರವಾಹ ತಗ್ಗಿದ್ದರಿಂದ ಎಲ್ಲೆಲ್ಲಿ ಏನೇನು ಹಾನಿಯಾಗಿದೆ ಎಂದು ಕಾಣುತ್ತಿದೆ.
ಮಹಾ ಮಳೆ ನೀರಿನಿಂದ ತುಂಬಿ ಹರಿದ ಭೀಮಾ ನದಿ ಪ್ರವಾಹದ ರಭಸಕ್ಕೆ ಮನೆ, ಮಠ, ಆಸ್ತಿ ಪಾಸ್ತಿಗಳೆಲ್ಲ ಕೊಚ್ಚಿಕೊಂಡು ಹೋಗಿವೆ. ಅದರಂತೆ ತಾಲೂಕಿನ ಘತ್ತರಗಿ ಹಾಗೂ ದೇವಲ ಗಾಣಗಾಪುರ ಬ್ರೀಜ್ ಕಂ ಬ್ಯಾರೇಜ್‌ಗಳಿಗೂ ಪ್ರವಾಹದ ಬಿಸಿ ತಟ್ಟಿದೆ. ಹಾಗಾಗಿ ಬ್ಯಾರೇಜ್ ಪಕ್ಕದ ತಡೆ ಗೋಡೆ ಒಡೆದಿದೆ. ಬ್ಯಾರೇಜ್ ಮೇಲೆ ಅಕ್ಕ ಪಕ್ಕದಲ್ಲಿ ತಡೆಗೋಡೆ ಕೂಡ ಒಡೆದು ಕೊಚ್ಚಿಕೊಂಡು ಹೋಗಿದೆ. ಅಷ್ಟು ಮಾತ್ರವಲ್ಲದೆ ಪಕ್ಕದ ತಡೆ ಗೋಡೆ ಒಡೆದು ಬಹಳಷ್ಟು ಹಾನಿಯಾಗಿದೆ. ತಡೆಗೋಡೆ ಒಂದು ವೇಳೆ ಪೂರ್ತಿಯಾಗಿ ಒಡೆದರೆ ಸಂಪೂರ್ಣ ಬ್ಯಾರೇಜ್ ಒಡೆದು ಕೊಚ್ಚಿಕೊಂಡು ಹೋಗುವ ಸಾಧ್ಯತೆ ಹೆಚ್ಚಾಗಿದೆ. ಸದ್ಯ ಕೇವಲ ಸಿಮೆಂಟ್ ಕಿತ್ತುಕೊಂಡು ಹೋಗಿದೆ. ಅನಾಹುತ ಆಗುವುದು ಸ್ವಲ್ಪದರಲ್ಲೇ ತಪ್ಪಿದೆ.
ಘತ್ತರಗಿ ಮತ್ತು ದೇವಲ ಗಾಣ ಗಾಪುರಗಳಲ್ಲಿ ಕೋಟ್ಯಂತರ ಮೌಲ್ಯದಷ್ಟು ಹಾನಿಯಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಬ್ಯಾರೇಜ್ ಮೇಲಿನ ಸಿಮೆಂಟ್ ರಸ್ತೆ ಕೂಡ ಮಳೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಒಳಗಿನ ಕಬ್ಬಿಣದ ರಾಡ್‌ಗಳು ಹೊರ ಬಂದು ಪ್ರಯಾಣಿಕರಿಗೆ ಜೀವ ಭಯ ಹುಟ್ಟಿಸಿವೆ. ಅಲ್ಲದೆ ಬ್ಯಾರೇಜ್ ಅಕ್ಕ ಪಕ್ಕದ ರೈತರ ಹೊಲಗಳಲ್ಲಿ ಹಾಕಿಕೊಂಡಿದ್ದ ಪಂಪ್‌ಸೆಟ್‌ಗಳು ಕೂಡ ಪ್ರವಾಹದ ನೀರಿನಿಂದ ಕೊಚ್ಚಿಕೊಂಡು ಹೋಗಿವೆ. ಪ್ಲಾಸ್ಟಿಕ್ ಪೈಪ್‌ಗ್ಳು ತೇಲಿಕೊಂಡು ಬ್ಯಾರೇಜ್‌ಗೆ ತಡೆದುಕೊಂಡು ನಿಂತಿವೆ. ಹೀಗಾಗಿ ಪ್ರವಾಹದ ನೀರಿನಿಂದ ಕೋಟ್ಯಂತರ ರೂ. ಮೌಲ್ಯದ ಬೆಳೆ ಹಾಳಾಗಿದೆ. ಹೀಗಾಗಿ ಸಂಬಂಧ ಪಟ್ಟವರು ಹಾನಿಗೊಳಗಾದ ಬ್ಯಾರೇಜ್‌ಗಳನ್ನು ಕೂಡಲೇ ರಿಪೇರಿ ಮಾಡಬೇಕು. ಜತೆಗೆ ಭೂಮಿ, ಬೆಳೆ ಹಾಳಾಗಿರುವ ಬಗ್ಗೆ ಮಾಹಿತಿ ಪಡೆದು ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.