Advertisement

ಸರ್ಕಾರಿ ಆಸ್ಪತ್ರೆಗೇ ಅಂಟಿದೆ ರೋಗ!

09:45 AM May 12, 2019 | Naveen |

ಅಫಜಲಪುರ: ಸರ್ಕಾರ ಬಡ ಜನರಿಗೆ ಉಚಿತವಾಗಿ ಆರೋಗ್ಯ ಸೇವೆ ಸಿಗಲೆಂದು ಕೋಟ್ಯಂತರ ರೂ. ಖರ್ಚು ಮಾಡಿ ಆಸ್ಪತ್ರೆಗಳನ್ನು ನಿರ್ಮಿಸುತ್ತದೆ. ಆದರೆ ಸರ್ಕಾರಿ ಆಸ್ಪತ್ರೆಗಳು ಬಡ ರೋಗಿಗಳ ಸೇವೆ ಮಾಡದೆ ಸ್ವತಃ ರೋಗಗ್ರಸ್ಥವಾಗಿವೆ. ಇದಕ್ಕೆ ತಕ್ಕ ಉದಾಹರಣೆ ಪಟ್ಟಣದಲ್ಲಿರುವ ಜರ್ಮನ್‌ ತಂತ್ರಜ್ಞಾನದಲ್ಲಿ ಕಟ್ಟಿರುವ ನೂರು ಹಾಸಿಗೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ.

Advertisement

ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ನೂರು ಹಾಸಿಗೆಯ ಹೈಟೆಕ್‌ ಆಸ್ಪತ್ರೆಯಲ್ಲಿ ಎಲ್ಲವೂ ಇವೆ. ಆದರೆ ಯಾವುದೂ ಉಪಯೋಗಕ್ಕಿಲ್ಲ. ಆಸ್ಪತ್ರೆಯಲ್ಲಿ ವೈದ್ಯರು ಇದ್ದಾರೆ. ಆದರೆ ಕರ್ತವ್ಯಕ್ಕೆ ಬರುವುದಿಲ್ಲ. ನೂರು ಹಾಸಿಗೆ ಇವೆ. ಆದರೆ ಅವುಗಳ ಪೈಕಿ 50 ಮಾತ್ರ ಹಾಕಲಾಗಿದೆ. ಉಳಿದ 50 ಹಾಸಿಗೆ ಕತ್ತಲ ಕೋಣೆ ಸೇರಿಕೊಂಡಿವೆ. ಆಸ್ಪತ್ರೆಯಲ್ಲಿ ಸ್ವಚ್ಛತೆ ಕೊರತೆ ಇದೆ. ಸರ್ಕಾರದ ಯೋಜನೆಗಳು, ಅನುದಾನ ಎಲ್ಲವೂ ಬರುತ್ತದೆ. ಇಲ್ಲಿ ಎಲ್ಲ ವಸ್ತುಗಳಿವೆ. ಆದರೆ ಅವು ಪ್ರಯೋಜನಕ್ಕೆ ಬಾರದಂತಾಗಿವೆ. ಇಲ್ಲಿಗೆ ಬರುವ ಹತ್ತಾರು ಹಳ್ಳಿಗಳ ರೋಗಿಗಳ ಪಾಲಿಗೆ ಇದು ಅವಾಂತರಗಳ ತಾಣ ಎನ್ನುವಂತಾಗಿದೆ.

ರೋಗಿಗಳಿಗೆ ನಿತ್ಯ ನರಕ: ಉಚಿತ ಆರೋಗ್ಯ ಸೇವೆ ಸಿಗುತ್ತದೆ ಎಂದು ಸರ್ಕಾರಿ ಆಸ್ಪತ್ರೆಗೆ ಬಡವರು ಬರುತ್ತಾರೆ. ಆದರೆ ಇಲ್ಲಿ ಯಾವ ಸೇವೆಯೂ ಸರಿಯಾಗಿ ಸಿಗುತ್ತಿಲ್ಲ. ವೈದ್ಯರು ಆಸ್ಪತ್ರೆಗೆ ಬರುವುದಿಲ್ಲ, ಇರುವ ವೈದ್ಯರು ಎಲ್ಲವನ್ನು ನೋಡಿಕೊಳ್ಳಬೇಕು. ಅದರಲ್ಲಿ ಗರ್ಭೀಣಿಯರು, ಬಾಣಂತಿಯರಿಗಾಗಿ ವಿಶೇಷ ಕಾಳಜಿ ಬೇಕಾಗುತ್ತದೆ. ಆದರೆ ಅದು ಇಲ್ಲಿಲ್ಲ. ಬಾಣಂತಿಯರಿಗೆ, ಗರ್ಭಿಣಿಯರಿಗೆ ಹಾಗೂ ರೋಗಿಗಳಿಗೆ ಬೆಡ್‌ ಮೇಲೆ ಬೇಡ್‌ಶೀಟ್ ಹಾಕದೆ ಮಲಗಿಸಲಾಗುತ್ತದೆ. ಹೀಗಾಗಿ ರೋಗಿಗಳು ನಿತ್ಯ ನರಕ ಅನುಭವಿಸುವಂತಾಗಿದೆ.

ಶುದ್ಧ ನೀರು, ಆಸನಗಳಿಲ್ಲ: ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗಿದೆ. ಆದರೆ ಒಮ್ಮೆಯೂ ಶುದ್ಧ ನೀರನ್ನು ಯಾರೂ ಕುಡಿದಿಲ್ಲ. ಶುದ್ಧೀಕರಣ ಘಟಕ ಅಳವಡಿಸಿ ಆರಂಭವೇ ಮಾಡಿಲ್ಲ. ಹೊರಗೆ ರೋಗಿಗಳಿಗೆ ಕುಡಿಯುವ ಹಾಗೂ ಬಳಸುವ ಸಲುವಾಗಿ ಸಿಂಟೆಕ್ಸ್‌ ಇಡಲಾಗಿದೆ. ಆದರೆ ಈ ನೀರು ರೋಗಿಗಳ ಬಳಕೆಗೆ ಸಿಗುತ್ತಿಲ್ಲ. ಆಸ್ಪತ್ರೆ ಹಿಂಭಾಗದಲ್ಲಿ ಆಸ್ಪತ್ರೆ ಕಟ್ಟಡವೊಂದು ನಡೆದಿದೆ. ಗುತ್ತಿಗೆದಾರರು ಆಸ್ಪತ್ರೆಯಲ್ಲಿರುವ ಕುಡಿಯುವ ನೀರನ್ನು ಕಟ್ಟಡಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗೆ ಬರುವ ರೋಗಿಗಳು ಕುಡಿಯುವ ನೀರು ತರಬೇಕಾದರೆ ಹೊರಗಿನಿಂದ ತರುವಂತಾಗಿದೆ. ಆಸ್ಪತ್ರೆಯೊಳಗೆ ವಿಶ್ರಮಿಸಿಕೊಳ್ಳಬೇಕೆಂದರೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯೇ ಇಲ್ಲ. ಹೀಗಾಗಿ ರೋಗ ತಪಾಸಣೆಗೆ ಬಂದು ಸರತಿ ಬರುವ ತನಕ ನಿಲ್ಲಬೇಕಾದ ಪರಿಸ್ಥಿತಿ ಇದೆ.

ಬೆಡ್‌ಶೀಟ್ ತೊಳೆಯುವವರಿಲ್ಲ: ಆಸ್ಪತ್ರೆಯಲ್ಲಿ 41 ಜನ ಗ್ರೂಪ್‌ ಡಿ ನೌಕರರಿದ್ದಾರೆ. ಆದರೂ ಬಾಣಂತಿಯರಿಗೆ, ಗರ್ಭೀಣಿಯರಿಗೆ ಬೆಡ್‌ಶೀಟ್ ತೊಳೆದು ಹಾಕುವರಿಲ್ಲ. ತೊಳೆಯುವುದೇ ಬೇಡವೆಂದು ಬೆಡ್‌ಶೀಟ್ ಹಾಕುವುದನ್ನೆ ಬಿಟ್ಟಂತಿದೆ. ಅಲ್ಲದೆ ಗ್ರೂಪ್‌ ಡಿ ನೌಕರರು ತಮಗೂ ಆಸ್ಪತ್ರೆಗೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಾರೆ.

Advertisement

ಕೈತೋಟದಲ್ಲೇ ಹಂದಿಗಳ ತಾಣ: ಆಸ್ಪತ್ರೆ ಮುಂಭಾಗದಲ್ಲಿರುವ ಕೈತೋಟ ಹಂದಿಗಳ ತಾಣವಾಗಿದೆ. ಪಟ್ಟಣದ ಹಂದಿಗಳೆಲ್ಲ ಆಸ್ಪತ್ರೆ ಆವರಣದಲ್ಲಿರುವ ಗಿಡಗಳ ನೆರಳಲ್ಲಿ ವಿಶ್ರಾಂತಿ ಪಡೆಯುತ್ತವೆ. ಆಸ್ಪತ್ರೆಯೊಳಗಡೆ ಕುಳಿತುಕೊಳ್ಳಲು ಆಸನಗಳಿಲ್ಲವೆಂದು ರೋಗಿಗಳು ಕೈತೋಟಕ್ಕೆ ಬಂದರೆ ಹಂದಿಗಳೊಂದಿಗೆ ನೆರಳಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇದೆ. ಸಂಬಂಧಪಟ್ಟವರಿಗೆ ಈ ಎಲ್ಲ ಸಮಸ್ಯೆಗಳ ಅರಿವಿದ್ದರೂ ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಿಲ್ಲ.

ಆಸ್ಪತ್ರೆ ಸಮಸ್ಯೆ ಬಗ್ಗೆ ಖುದ್ದಾಗಿ ವೀಕ್ಷಿಸಿ ಸಮಸ್ಯೆ ಪರಿಹಸರಿಸುವ ಕೆಲಸ ಮಾಡಲಾಗುತ್ತದೆ. ಕರ್ತವ್ಯಲೋಪ ಎಸಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ.
•ಎಂ.ವೈ. ಪಾಟೀಲ, ಶಾಸಕ

ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next