Advertisement

ಚರಂಡಿ ನೀರಲ್ಲಿ ಪುಣ್ಯಸ್ನಾನ

09:48 AM May 05, 2019 | Team Udayavani |

ಅಫಜಲಪುರ: ಬರಗಾಲ ಆವರಿಸಿ ಭೀಮಾ ನದಿ ಖಾಲಿಯಾಗಿದೆ. ಜನ-ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಭೀಮೆ ಖಾಲಿಯಾಗಿದ್ದರಿಂದ ಭಕ್ತರ ಸ್ನಾನಕ್ಕೆ ಗ್ರಾಮದ ಚರಂಡಿ ನೀರೇ ಗತಿಯಾಗಿದೆ.

Advertisement

ತಾಲೂಕಿನ ಸುಕ್ಷೇತ್ರ ಘತ್ತರಗಿಯಲ್ಲಿ ಹರಿಯುತ್ತಿರುವ ಭೀಮಾ ನದಿ ಖಾಲಿಯಾಗಿದೆ. ಗ್ರಾಮ ದೇವತೆ ಭಾಗ್ಯವಂತಿ ದರ್ಶನಕ್ಕೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಭಾಗ್ಯವಂತಿ ದರ್ಶನಕ್ಕೂ ಮುನ್ನ ಭೀಮಾ ನದಿಯಲ್ಲಿ ಪುಣ್ಯಸ್ನಾನಕ್ಕೆಂದು ಹೋಗುತ್ತಾರೆ. ಆದರೆ ಭೀಮಾ ನದಿಯಲ್ಲಿ ನೀರು ಖಾಲಿಯಾಗಿದ್ದರಿಂದ ಅಲ್ಲಲ್ಲಿ ಹೊಂಡ ಕೊರೆದಿದ್ದರಲ್ಲಿ ಬರುವ ಮೊಳಕಾಲುದ್ದದ ನೀರಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಾರೆ.

ನದಿ ಸೇರುತ್ತಿದೆ ಗ್ರಾಮದ ಚರಂಡಿ ನೀರು: ಘತ್ತರಗಿ ಗ್ರಾಮಸ್ಥರು ಬಳಸಿ ಬಿಟ್ಟ ನೀರು ಚರಂಡಿ ಮೂಲಕ ನೇರವಾಗಿ ನದಿ ಸೇರುತ್ತಿದೆ. ಮೊದಲೇ ನದಿಯಲ್ಲಿ ನೀರು ಖಾಲಿಯಾಗಿದ್ದರಿಂದ ಅಲ್ಲಲ್ಲಿ ಕೊರೆದ ಹೊಂಡಗಳಲ್ಲಿ ಚರಂಡಿ ನೀರು ತುಂಬಿಕೊಳ್ಳುತ್ತಿದೆ. ಇದೇ ನೀರಲ್ಲಿ ಇಲ್ಲಿಗೆ ಬರುವ ಭಕ್ತರು ಪುಣ್ಯಸ್ನಾನ ಮಾಡಿಕೊಳ್ಳುವಂತಾಗಿದೆ.

ಗ್ರಾಮದ ಚರಂಡಿಗಳಿಂದ ನದಿ ಕಲುಷಿತ: ಘತ್ತರಗಿಯಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಇವರೆಲ್ಲ ಬಳಕೆ ಮಾಡಿದ ನೀರು ನೇರವಾಗಿ ಚರಂಡಿ ಮೂಲಕ ನದಿಗೆ ಸೇರುತ್ತಿದೆ. ಘತ್ತರಗಿಯಲ್ಲಿಯೇ ಗ್ರಾಪಂ ಕಚೇರಿಯೂ ಇದೆ. ಗ್ರಾ.ಪಂನವರು ಚರಂಡಿ ನೀರನ್ನು ನದಿಗೆ ಹೋಗದಂತೆ ಪರ್ಯಾಯ ವ್ಯವಸ್ಥೆ ಮಾಡಬಹುದಾಗಿತ್ತು. ಆದರೆ ನಿರ್ಲಕ್ಷ್ಯತನದಿಂದಾಗಿ ಚರಂಡಿ ನೀರು ನದಿಗೆ ಸೇರುತ್ತಿದೆ. ಇದರಿಂದ ನದಿ ನೀರು ಕಲುಷಿತವಾಗುತ್ತಿದೆ. ಅಲ್ಲದೇ ಸುತ್ತಮುತ್ತಲಿನ ಪರಿಸರವೂ ಕಲುಷಿತವಾಗುತ್ತಿದೆ.

ಮೊದಲು ನದಿಯಲ್ಲಿ ನೀರು ತುಂಬಿಕೊಂಡಿದ್ದಾಗ ಚರಂಡಿ ನೀರು ಸೇರಿದ್ದು, ಅಷ್ಟಾಗಿ ಗೊತ್ತಾಗುತ್ತಿರಲಿಲ್ಲ. ಈಗ ನದಿಯೇ ಖಾಲಿಯಾಗಿರುವಾಗ ಚರಂಡಿ ನೀರು ನದಿಗೆ ಸೇರುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಹೀಗಾಗಿ ನದಿಗೆ ಸ್ನಾನಕ್ಕೆಂದು ಬರುವ ಭಕ್ತರಿಗೆ ವಾಕರಿಕೆ ಬರುವಂತಾಗಿದೆ. ಆದರೂ ದೇವರ ಮೇಲೆ ಇರುವ ಭಕ್ತಿ ಕಾರಣದಿಂದ ಚರಂಡಿ ನೀರು ಸೇರಿಕೊಂಡ ನದಿಯಲ್ಲಿ ಸ್ನಾನ ಮಾಡುವಂತಾಗಿದೆ.

Advertisement

ನದಿಗೆ ಚರಂಡಿ ನೀರು ಸೇರದಂತೆ ಕ್ರಮ ಕೈಗೊಳ್ಳಿ
ನಾವು ಪ್ರತಿ ಅಮಾವಾಸ್ಯೆಗೆ ಘತ್ತರಗಿಗೆ ಬಂದು ದೇವಿ ದರ್ಶನ ಪಡೆಯುತ್ತೇವೆ. ಅಲ್ಲದೇ ನದಿಯಲ್ಲಿ ಪುಣ್ಯಸ್ನಾನಕ್ಕೆಂದು ಹೋಗುತ್ತೇವೆ. ಆದರೆ ಭೀಮಾ ನದಿಯಲ್ಲಿ ಈ ಬಾರಿ ನೀರಿಲ್ಲದ್ದರಿಂದ ನಮಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸ್ವಲ್ಪ ನೀರಿದೆ, ಸ್ನಾನ ಮಾಡೋಣ ಎಂದರೆ ಗ್ರಾಮದ ಚರಂಡಿ ನೀರು ನದಿ ನೀರಲ್ಲಿ ಬೆರೆತು ನೀರೆಲ್ಲ ಕಲುಷಿತವಾಗಿದೆ. ಸಂಬಂಧಪಟ್ಟವರು ನದಿ ನೀರಿಗೆ ಚರಂಡಿ ನೀರು ಸೇರದಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಭಾಗ್ಯವಂತೆ ದೇವಿ ದರ್ಶನಕ್ಕೆ ಬರುವ ಭಕ್ತರು ಒತ್ತಾಯಿಸಿದ್ದಾರೆ.

ಮರೀಚಿಕೆಯಾಗಿರುವ ಸ್ನಾನಘಟ್ಟ
ಘತ್ತರಗಿಯಲ್ಲಿ ಸ್ನಾನಘಟ್ಟ ನಿರ್ಮಿಸಬೇಕೆಂದು ಸುಮಾರು ದಿನಗಳಿಂದ ಭಕ್ತರ ಬೇಡಿಕೆ ಇದೆ. ಅದ್ಯಾಕೋ ನಿರ್ಮಾಣವಾಗುತ್ತಿಲ್ಲ. ಕೊನೆ ಪಕ್ಷ ಸ್ನಾನ ಘಟ್ಟದ ಬದಲಾಗಿ ಚರಂಡಿ ನೀರು ನದಿಗೆ ಬಂದು ಸೇರದಂತೆ ತಡೆದು ಇನ್ನು ಸ್ವಲ್ಪ ಹೊಂಡ ಕೊರೆದರೆ ಇನ್ನಷ್ಟು ಶುದ್ದ ನೀರು ಸಂಗ್ರಹವಾಗಿ ಪುಣ್ಯಸ್ನಾನಕ್ಕೆ ಮತ್ತು ಇತರ ಉಪಯೋಗಕ್ಕೆ ನದಿ ನೀರು ಉಪಯುಕ್ತವಾಗಲಿದೆ ಎನ್ನವುದು ಇಲ್ಲಿಗೆ ಬರುವ ಭಕ್ತರ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next