Advertisement

ಹೇಳ್ಳೋರಿದ್ರೂ ಕೇಳ್ಳೋರಿಲ್ಲ!

09:51 AM Aug 03, 2019 | Naveen |

ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ:
ಸರ್ಕಾರ ಗ್ರಾಮೀಣ ಭಾಗದ ಜನರಿಗೆ ಸುಲಭವಾಗಿ ಆರೋಗ್ಯ ಸೇವೆಗಳು ಸಿಗಲಿ ಎನ್ನುವ ಉದ್ದೇಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕಟ್ಟಿಸಿದೆ. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಜನರ ರೋಗ ಕಳೆಯುವ ಬದಲಿಗೆ ಅವುಗಳೇ ರೋಗಗ್ರಸ್ಥವಾಗಿರುವಾಗ ಜನಸಾಮಾನ್ಯರು ಆರೋಗ್ಯ ಸೇವೆಗಳನ್ನು ಅರಸಿ ನಗರ, ಪಟ್ಟಣಗಳಿಗೆ ಹೋಗಬೇಕಾದ ಸನ್ನಿವೇಶ ಬಂದಿದೆ.

Advertisement

ತಾಲೂಕಿನಾದ್ಯಂತ ಆರು ಹಾಸಿಗೆಗಳ ಒಟ್ಟು ಒಂಭತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಈ ಪೈಕಿ ಬಡದಾಳ ಮತ್ತು ದೇಸಾಯಿ ಕಲ್ಲೂರ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ. ಇರುವ ಸಿಬ್ಬಂದಿಗಳ ಮೇಲೆ ಆಸ್ಪತ್ರೆ ನಡೆಸಲಾಗುತ್ತಿದೆ. ಉಳಿದಂತೆ ಏಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಮಾನ್ಯ ವೈದ್ಯರು, ಐದು ಕಡೆ ಆಯುಷ್‌ ವೈದ್ಯರು ಆಸ್ಪತ್ರೆ ನಡೆಸುಕೊಂಡು ಹೋಗುತ್ತಿದ್ದಾರೆ. ಹಳ್ಳಿಗಳಲ್ಲಿ ಸರ್ಕಾರಿ ಸುಸಜ್ಜಿತ ಆಸ್ಪತ್ರೆಗಳು ನಿರ್ಮಾಣವಾಗುತ್ತಿವೆ. ಇನ್ನೇನು ಉಚಿತವಾಗಿ, ತ್ವರಿತವಾಗಿ ಆರೋಗ್ಯ ಸೇವೆಗಳು ಸಿಗಲಿವೆ ಎಂದು ಜನಸಾಮಾನ್ಯರು ಆಶಾಭಾವನೆ ಇಟ್ಟುಕೊಂಡಿದ್ದರು. ಆದರೆ ಎಲ್ಲ ಕಡೆ ಕಟ್ಟಡಗಳಾಗುತ್ತಿವೆ, ಆದರೆ ವೈದ್ಯರಿಲ್ಲ, ಸಿಬ್ಬಂದಿಗಳಿಲ್ಲ, ಔಷಧಿ ಇಲ್ಲ ಎನ್ನುವ ಅನೇಕ ಕೊರತೆಗಳನ್ನು ಕಂಡು ಜನಸಾಮಾನ್ಯರು ಸರ್ಕಾರಿ ಆಸ್ಪತ್ರೆಗಳಿಂದ ದೂರ ಸರಿಯುತ್ತಿದ್ದಾರೆ.

ಸೌಲಭ್ಯ ಇದ್ದರೂ ಕಲ್ಪಿಸುವವರಿಲ್ಲ: ತಾಲೂಕಿನ ಒಂಭತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಡದಾಳ ಮತ್ತು ದೇಸಾಯಿ ಕಲ್ಲೂರ ಗ್ರಾಮಗಳಲ್ಲಿ ಆಯುಷ್‌ ಮತ್ತು ಸಾಮಾನ್ಯ ವೈದ್ಯರಿಲ್ಲ. ಇರುವ ಸಿಬ್ಬಂದಿಗಳ ಮೇಲೆ ಆಸ್ಪತ್ರೆ ನಡೆಸಿಕೊಂಡು ಹೋಗಲಾಗುತ್ತಿದೆ. ಉಳಿದ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿದ್ದರೂ ಇಲ್ಲದಂತಾಗುತ್ತಿದೆ. ಬಡ ಜನರಿಗೆ ಸರಿಯಾದ ಚಿಕಿತ್ಸೆಗಳು ಸಿಗುತ್ತಿಲ್ಲ. ಸರ್ಕಾರ ಆರೋಗ್ಯ ಸೇವೆಗಳ ಹೆಸರಿನಲ್ಲಿ ಬಿಡುಗಡೆ ಮಾಡುವ ಯೋಜನೆಗಳು, ಸೌಲಭ್ಯಗಳು ಜನರಿಗೆ ತಲುಪಿಸುವವರು ಇಲ್ಲದಂತಾಗಿದೆ. ಆದರೆ ಎಲ್ಲ ಸೇವೆಗಳು, ಸೌಲಭ್ಯಗಳು ಜನರಿಗೆ ತಲುಪಿದಂತೆ ಬಿಂಬಿಸಲಾಗುತ್ತಿದೆ. ಇದು ನಿಜಕ್ಕೂ ದುರಂತದ ಸಂಗತಿಯಾಗಿದೆ.

ಹರಿದ ಬೆಡ್‌: ಆರೋಗ್ಯ ಕೇಂದ್ರಗಳಲ್ಲಿ ಅವಳಡಿಸಲಾಗಿರುವ ಬೆಡ್‌ಗಳು ಹರಿದು ಹೋಗಿದ್ದು, ರೋಗಿಗಳು ಅದರ ಮೇಲೆ ಮಲಗಿ ಚಿಕಿತ್ಸೆ ಪಡೆಯುವ ಸನ್ನಿವೇಶ ಬಂದಿದೆ. ಹರಿದ ಬೆಡ್‌ಗಳ ಮೇಲೆ ಬೆಡ್‌ಶಿಟ್ ಸಹ ಇಲ್ಲ. ಹೀಗಾಗಿ ರೋಗ ವಾಸಿಗೆಂದು ಆಸ್ಪತ್ರೆಗೆ ಬಂದು ರೋಗ ಹಚ್ಚಿಕೊಂಡು ಹೋಗುವ ಪರಿಸ್ಥಿತಿ ರೋಗಿಗಳದ್ದಾಗಿದೆ.

ಬೀದಿ ದೀಪಗಳಿಲ್ಲ: ಆಸ್ಪತ್ರೆ ಮತ್ತು ಸಿಬ್ಬಂದಿಗಳ ವಸತಿ ಗೃಹಗಳ ರಸ್ತೆಗಳಿಗೆ ವಿದ್ಯುತ್‌ ದೀಪದ ವ್ಯವಸ್ಥೆ ಇಲ್ಲದಂತಾಗಿದ್ದು ಸಿಬ್ಬಂದಿ ಭಯದಲ್ಲಿ ಕಾಲ ಕಳೆಯುವಂತಾಗಿದೆ. ಅದರಲ್ಲೂ ಅತನೂರ ಗ್ರಾಮದ ಆರೋಗ್ಯ ಕೇಂದ್ರಕ್ಕೆ ಹೋಗಲು ಇರುವ ದಾರಿಗೆ ವಿದ್ಯುತ್‌ ದೀಪದ ವ್ಯವಸ್ಥೆ ಇಲ್ಲ. ಸಿಬ್ಬಂದಿಗಳಿರುವ ವಸತಿ ಗೃಹದ ಬಳಿ ವಿದ್ಯುತ್‌ ದೀಪಗಳಿಲ್ಲ. ರಾತ್ರಿಯಾದರೆ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ರಾತ್ರಿಯಾಗುತ್ತಿದ್ದಂತೆ ಕುಡುಕರ ಕಾಟ ಹೆಚ್ಚಾಗುತ್ತಿದೆ. ಅತನೂರ ಗ್ರಾಮದ ರೀತಿಯಲ್ಲಿ ಅನೇಕ ಗ್ರಾಮಗಳಲ್ಲಿ ವಿದ್ಯುತ್‌ ದೀಪದ ವ್ಯವಸ್ಥೆ ಇಲ್ಲ. ಹೀಗಾಗಿ ಸಾಕಷ್ಟು ಸಮಸ್ಯೆಯಾಗುತ್ತಿವೆ.

Advertisement

ಸಿಸಿ ಕ್ಯಾಮೆರಾ ಸಮಸ್ಯೆ: ಆರೋಗ್ಯ ಕೇಂದ್ರದಲ್ಲಿ ನಡೆಯುವ ಘಟನೆಗಳ ಬಗ್ಗೆ ನೀಗಾ ಇಡಲು ಸಿಸಿ ಕ್ಯಾಮೆರಾ ಅಳವಡಿಕೆ ಅವಶ್ಯಕವಾಗಿದೆ. ಆದರೆ ತಾಲೂಕಿನ ಗೊಬ್ಬೂರ (ಬಿ) ಮತ್ತು ರೇವೂರ (ಬಿ) ಆಸ್ಪತ್ರೆಗಳಲ್ಲಿ ಮಾತ್ರ ಸಿಸಿ ಅಳವಡಿಸಲಾಗಿದ್ದು, ಉಳಿದ ಆರೋಗ್ಯ ಕೇಂದ್ರಗಳಲ್ಲಿ ಅಳವಡಿಸಿಲ್ಲ. ಹೀಗಾಗಿ ಇಲ್ಲಿ ನಡೆಯುವ ಘಟನೆಗಳು ಯಾರಿಗೂ ತಿಳಿಯದಂತಾಗಿದೆ. ಇನ್ನಾದರೂ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next