ಬೆಂಗಳೂರು: ಯಲಹಂಕದ ಭಾರತೀಯ ವಾಯುಸೇನಾ ನೆಲೆಯಲ್ಲಿ ಏರೋ ಶೋ ನಡೆಯುತ್ತಿದ್ದ ವೇಳೆ ಪಾರ್ಕಿಂಗ್ ಪ್ರದೇಶದಲ್ಲಿ ಸಂಭವಿಸಿದ ಬೆಂಕಿ ದುರಂತದಿಂದ ಕಾರು ಕಳೆದುಕೊಂಡವರಿಗೆ ಆದಷ್ಟು ಬೇಗ ಇನ್ಶೂರೆನ್ಸ್ ಹಣ ಒದಗಿಸುವ ಕೆಲಸ ಮಾಡಲಾಗುತ್ತದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಏರೋ ಶೋ ವೇಳೆ ಕಾರು ಕಳೆದುಕೊಂಡ ಕೆಲವರಿಗೆ ಇನ್ಶೂರೆನ್ಸ್ ಪರಿಹಾರದ ಚೆಕ್ ವಿತರಿಸಿ ಮಾತನಾಡಿ, ಕಾರು ಪಾರ್ಕಿಂಗ್ ಪ್ರದೇಶದಲ್ಲಿ ಹತ್ತಿಕೊಂಡಿದ್ದ ಬೆಂಕಿಯಿಂದಾಗಿ 277 ಕಾರುಗಳು ಸುಟ್ಟು ಹೋಗಿವೆ.
ಇದರಲ್ಲಿ 251 ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. 26 ಕಾರುಗಳು ಭಾಗಶಃ ಸುಟ್ಟು ಹೋಗಿದೆ. ಇಷ್ಟು ಮಾತ್ರವಲ್ಲದೇ 277 ಕಾರುಗಳಲ್ಲಿ 60 ಕಾರುಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ವಿವಿಧ ಇನ್ಶೂರೆನ್ಸ್ ಸಂಸ್ಥೆಗಳ ಜತೆಗೆ ಮಾತುಕತೆ ನಡೆಸಿದ್ದೇವೆ. ಶೇ.100ರಷ್ಟು ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಸೂಕ್ತ ದಾಖಲೆ ಇಲ್ಲದಿದ್ದ ಸಂದರ್ಭದಲ್ಲಿ ಕ್ಯಾಬ್ ಅಥವಾ ಟಾಕ್ಸಿ ಡ್ರೈವರ್‌ಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಒದಗಿಸುವ ಬಗ್ಗೆಯೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಮಾನವೀಯ ದೃಷ್ಟಿಯಿಂದ ಎಷ್ಟು ಸಹಾಯ ಮಾಡಲು ಸಾಧ್ಯವೋ ಅಷ್ಟಕ್ಕೆ ಪ್ರಯತ್ನ ನಡೆಸಲಿದ್ದೇವೆ ಎಂದು ತಿಳಿಸಿದರು.
ಔರಾದ್ಕರ್ ಸಮಿತಿ ವರದಿ ಅನುಷ್ಠಾನ: ಪೊಲೀಸ್ ಇಲಾಖೆಯಲ್ಲಿರುವ ವೇತನ ತಾರತಮ್ಯ ನಿವಾರಣೆಗಾಗಿ ಔರದ್ಕರ್ ಸಮಿತಿ ನೀಡಿರುವ ವರದಿಯಲ್ಲಿನ ಕೆಲವೊಂದು ನ್ಯೂನತೆಗಳನ್ನು ಸರಿಪಡಿಸಿಕೊಂಡು ಅನುಷ್ಠಾನ ಮಾಡಲಿದ್ದೇವೆ. ಮುಖ್ಯಮಂತ್ರಿಗಳಿಂದ ಅನುಮತಿ ಪಡೆದು ಅನುಷ್ಠಾನಕ್ಕೆ ತರಲಿದ್ದೇವೆ ಎಂದು ಹೇಳಿದರು.
ಬೆಂಕಿ ದುರಂತ ನಡೆದಿರುವ ಪ್ರದೇಶವು ರಕ್ಷಣಾ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಪ್ರಕರಣದ ತನಿಖೆಯನ್ನು ರಕ್ಷಣಾ ಇಲಾಖೆಯೇ ನಡೆಸುತ್ತಿದೆ. ಈ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಸಭೆ ನಡೆಸಿದ್ದಾರೆ.
-ಎಂ.ಬಿ.ಪಾಟೀಲ್, ಗೃಹ ಸಚಿವ