Advertisement

ನಭವೇ ನಾಟ್ಯಾಲಯ : ಏರೋ ಇಂಡಿಯಾ 2019ಕ್ಕೆ ಬೆಂಗಳೂರಿನಲ್ಲಿ ಚಾಲನೆ

12:25 AM Feb 21, 2019 | |

ಬೆಂಗಳೂರು: ವೈಮಾನಿಕ ಕ್ಷೇತ್ರದಲ್ಲಿ ಭಾರತವು ಜಾಗತಿಕವಾಗಿ ಪೂರೈಕೆ ಮತ್ತು ಉತ್ಪಾದನ ಜಾಲ ವಿಸ್ತರಣೆಯಲ್ಲಿ ದಾಪುಗಾಲಿಡುತ್ತಿದ್ದು, ಈ ಮೂಲಕ ಹೂಡಿಕೆದಾರರಿಗೆ ಅವಕಾಶಗಳ ಹೆಬ್ಟಾ ಗಿಲಾಗಿ ಹೊರಹೊಮ್ಮುತ್ತಿದೆ. ಈ ಹಿನ್ನೆಲೆ ಯಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ವಿಶ್ವದ ವೈಮಾನಿಕ ಕಂಪೆನಿಗಳಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಮುಕ್ತ ಆಹ್ವಾನ ನೀಡಿದರು.

Advertisement

ನಗರದ ಯಲಹಂಕ ವಾಯುನೆಲೆಯಲ್ಲಿ  ಐದು ದಿನಗಳ 12ನೇ “ಏರೋ ಇಂಡಿಯಾ ಶೋ- 2019’ಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ವರ್ಷದಿಂದ ವರ್ಷಕ್ಕೆ ರಕ್ಷಣಾ ಉತ್ಪನ್ನಗಳ ರಫ್ತು ಪ್ರಮಾಣ ದುಪ್ಪಟ್ಟಾಗುತ್ತಿದ್ದು, 2022-23ರ ವೇಳೆಗೆ ರಕ್ಷಣಾ ವಲಯದ ಉತ್ಪನ್ನಗಳ ರಫ್ತು ವಹಿವಾಟು ಶೇ. 25ರಷ್ಟು ಏರಿಕೆ ಆಗುವ ನಿರೀಕ್ಷೆ ಇದೆ. ಇದು “ಮೇಕ್‌ ಇನ್‌ ಇಂಡಿಯಾ’ದಡಿ ರಫ್ತು ಉತ್ತೇಜನ ಮತ್ತಿತರ ಕ್ರಮಗಳ ಫ‌ಲವಾಗಿದೆ. ಜಾಗತಿಕ ಮಟ್ಟದಲ್ಲಿರುವ ವೈಮಾನಿಕ ಕಂಪೆನಿಗಳು ಸದುಪಯೋಗ ಪಡೆಯಲು ಉತ್ತಮ ಅವಕಾಶ ಇದಾಗಿದ್ದು, ಹೂಡಿಕೆಗೆ ಸೂಕ್ತ ವಾತಾವರಣ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಭಾರತವು ಇದುವರೆಗೆ ಎಲ್‌ಸಿಎಚ್‌, ಎಲ್‌ಸಿಎ, ಎಸಿಎಚ್‌ ಹೆಲಿಕಾಪ್ಟರ್‌ಗಳು ಸಹಿತ ನಾಲ್ಕು ಸಾವಿರಕ್ಕೂ ಅಧಿಕ ಯುದ್ಧವಿಮಾನಗಳನ್ನು ತಯಾರಿಸಿದ್ದು, ಇಲ್ಲಿ ತಯಾರಾದ ಯುದ್ಧವಿಮಾನ ಮಾರಿಷಸ್‌ಗೆ, ಹೆಲಿಕಾಪ್ಟರ್‌ ನೇಪಾಲ, ಮಾಲ್ಡೀವ್ಸ್‌ ಮತ್ತು ಮಾರಿಷಸ್‌, ಅಫ್ಘಾನಿಸ್ಥಾನ ಮತ್ತು ರಾಡಾರ್‌ ಮುನ್ಸೂಚನಾ ಸಂದೇಶ ಸ್ವೀಕರಿಸುವ ಯಂತ್ರವನ್ನು ರಷ್ಯಾಕ್ಕೆ ಪೂರೈಸಲಾಗಿದೆ ಎಂದರು.

ಭರ್ಜರಿ ಹಾರಾಟ
 ಎಚ್‌ಎಎಲ್‌ನ ವಿವಿಧ ಮಾದರಿಯ ಲಘು ಹೆಲಿಕಾಪ್ಟ ರ್‌ಗಳಾದ ಧನುಷ್‌, ರುದ್ರಾ, ಲೈಟ್‌ ಯುಟಿಲಿಟಿ ಹೆಲಿಕಾಪ್ಟರ್‌, ತೇಜಸ್‌ ಲಘು ಸಮರ ಕಾಪ್ಟರ್‌, ರಾಷ್ಟ್ರಧ್ವಜ ಮತ್ತು ವಾಯು ಸೇನೆಯ ಧ್ವಜ ಹೊತ್ತು ಬಂದ ಎಂಐ-17 ಹೆಲಿಕಾಪ್ಟರ್‌ ಜತೆಗೆ ಗಾಳಿ, ಬೆಳಕು, ಮಳೆ, ಚಳಿ ಎಲ್ಲ ಕಾಲದಲ್ಲೂ ಸಲೀಸಾಗಿ ಸೇವೆ ಸಲ್ಲಿಸಬಲ್ಲ ಸುಖೋಯ್‌-30ಎಂಕೆಐ, ಜಾಗ್ವಾರ್‌, ಎಫ್-16, ಸು-30ಎಂಕೆಐ, ಪಿ-81, ಮಿಗ್‌-21 ಹಾಗೂ ಅಮೆರಿಕದ ಏರ್‌ಬಸ್‌ ಸೇರಿದಂತೆ ಅನೇಕ ವಿಮಾನ ಮತ್ತು ಹೆಲಿಕಾಪ್ಟರ್‌ ಹಾರಾಟ ನಡೆಸಿವೆ

ಸೂರ್ಯ ಕಿರಣ ನೆನೆದ ಸಾರಂಗ್‌
ಪ್ರತಿ ಬಾರಿಯ ಏರ್‌ ಶೋನಲ್ಲಿ ಮಿಂಚುತ್ತಿದ್ದವರೆಂದರೆ ಒಂದು ಸೂರ್ಯ ಕಿರಣ್‌ ಮತ್ತೂಂದು ಸಾರಂಗ್‌. ಆದರೆ, ಈ ಬಾರಿ ಸೂರ್ಯ ಕಿರಣ್‌ ಅನುಪಸ್ಥಿತಿ ಸಾರಂಗ್‌ ಮೇಲೆ ಹೆಚ್ಚಿನ ಜವಾಬ್ದಾರಿ ತಂದಿದೆ. ಹೀಗಾಗಿಯೇ ಪ್ರದರ್ಶನಕ್ಕೂ ಮುನ್ನವೇ ಸಾರಂಗ್‌ನ ಕಮಾಂಡರ್‌ಗಳು ಮಂಗಳವಾರ ಮೃತಪಟ್ಟ ಸಾಹಿಲ್‌ ಗಾಂಧಿ ಆತ್ಮಕ್ಕೆ ಶಾಂತಿ ಕೋರಿ ಹಾರಾಟ ಶುರು ಮಾಡಿದರು. ಬಳಿಕ ಸಾರಂಗ್‌ನ ಹೆಲಿಕಾಪ್ಟರ್‌ಗಳು ಆಗಸದಲ್ಲಿ ಬಣ್ಣದ ಚಿತ್ತಾರವನ್ನೇ ಮೂಡಿಸಿದವು. ಅಂದಹಾಗೆ ಕನ್ನಡಿಗ, ಬಾಗಲಕೋಟೆ ಮೂಲದ ಕಮಾಂಡರ್‌ ಗಿರೀಶ್‌ಕುಮಾರ್‌ ಸತತ 5ನೇ ಬಾರಿಗೆ ಪ್ರದರ್ಶನ ನೀಡಿದರು.

Advertisement

ರಫೇಲ್‌ ಶಕ್ತಿ ಪ್ರದರ್ಶನ 
ಇತ್ತೀಚಿನ ದಿನಗಳಲ್ಲಿ ರಾಜಕೀಯ ವಿಚಾರ ದಿಂದಾಗಿ ಸುದ್ದಿಯಲ್ಲಿದ್ದ ರಫೇಲ್‌ ಯುದ್ಧ ವಿಮಾನ ನೋಡಲು ಜನ ಕಾತರದಿಂದಿದ್ದರು. ಇವರ ಕುತೂಹಲ ತಣಿಸಲೆಂದೇ ಫ್ರಾನ್ಸ್‌ ನಿಂದ ಒಟ್ಟು 4 ಯುದ್ಧ ವಿಮಾನಗಳು ಬಂದಿದ್ದು, ಬುಧವಾರ ಎರಡು ಹಾರಾಟ ನಡೆಸಿವೆ. ಇನ್ನೆರಡನ್ನು ಸಾರ್ವಜನಿಕರ ದರ್ಶನಕ್ಕಾಗಿ ಹಾಗೆಯೇ ಇಡಲಾಗಿದೆ. ಶೋಗೆ ಬಂದವರೆಲ್ಲ ರಫೇಲ್‌ ಮಳಿಗೆಗೆ ಬಂದು, ಒಂದು ಫೋಟೋ ಕ್ಲಿಕ್ಕಿಸಿ, ಓಹೋ ಇದೇನಾ ರಫೇಲ್‌ ಎನ್ನುತ್ತಿದ್ದರು.

ಮಂಗಳೂರಿನಲ್ಲಿ  ಕ್ಲಸ್ಟರ್‌: ಸಿಎಂ
ಶೀಘ್ರದಲ್ಲಿಯೇ ಮಂಗಳೂರಿನಲ್ಲಿ ರಕ್ಷಣಾ ವಲಯದ ಉತ್ಪನ್ನಗಳ ತಯಾರಿಕಾ ಕ್ಲಸ್ಟರ್‌ ಮತ್ತು ಮೈಸೂರಿನಲ್ಲಿ ಎಂಆರ್‌ಒ (ನಿರ್ವಹಣೆ, ದುರಸ್ತಿ, ಕೂಲಂಕಷ ಪರೀಕ್ಷೆ) ಕೇಂದ್ರ ತಲೆ ಎತ್ತಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.
ರಕ್ಷಣಾ ವಲಯದಲ್ಲಿ ಅದರಲ್ಲೂ ವೈಮಾನಿಕ ಕ್ಷೇತ್ರದ ಬೆಳವಣಿಗೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಮೊದಲ ವೈಮಾನಿಕ ಅಂತರಿಕ್ಷಾ ವಿಶೇಷ ಆರ್ಥಿಕ ವಲಯವನ್ನು ಬೆಳಗಾವಿಯಲ್ಲಿ ನಿರ್ಮಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next