Advertisement

Bangalore: ಎಇಪಿಎಸ್‌ ದುರ್ಬಳಕೆ ಮಾಡಿ ವಂಚನೆ: ನಾಲ್ವರ ಬಂಧನ

03:12 PM Jan 18, 2024 | Team Udayavani |

ಬೆಂಗಳೂರು: ಆಧಾರ್‌ ಕಾರ್ಡ್‌ ಮತ್ತು ಫಿಂಗರ್‌ ಪ್ರಿಂಟ್‌ ಬಳಸಿ ಸಾರ್ವಜನಿಕರ ಬ್ಯಾಂಕ್‌ ಖಾತೆಯಲ್ಲಿದ್ದ ಲಕ್ಷಾಂತರ ರೂ. ದೋಚುತ್ತಿದ್ದ ಬಿಹಾರ ಮೂಲದ ನಾಲ್ವರು ಸೈಬರ್‌ ವಂಚಕರನ್ನು ಬೆಂಗಳೂರು ನಗರ ಸೈಬರ್‌ ಕ್ರೈಂನ ವಿಶೇಷ ಘಟಕ ಬಂಧಿಸುವಲ್ಲಿ ಯಶಸ್ವಿಯಾಗಿದೆ.

Advertisement

ಬಿಹಾರ ಮೂಲದ ರುಹಮಾನ್‌, ಅಜುಬರ್‌, ಆರೀಫ್, ನಾಶೀರ್‌ ಅಹಮದ್‌ ಎಂಬವರನ್ನು ಬಂಧಿಸಲಾಗಿದೆ.

ಆಧಾರ್‌ ಕಾರ್ಡ್‌ ಎನೆಬಲ್‌ ಪೇಮೆಂಟ್‌ ಸಿಸ್ಟಂ(ಎಇಪಿಎಸ್‌) ದುರ್ಬಳಕೆ ಮಾಡಿಕೊಂಡು ವಂಚಕರು, ಬೆರಳಚ್ಚು ಬಳಸಿ ಗ್ರಾಹಕರಿಗೆ ಯಾವುದೇ ಒಟಿಪಿ, ಸಂದೇಶ ಹೋಗದೇ ಹಣ ಎಗರಿಸುತ್ತಿದ್ದರು. ಈ ರೀತಿ ನಗರದ ಎಂಟು ಸಿಇಎನ್‌ ಠಾಣೆ ಸೇರಿ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಇದುವರೆಗೂ 128ಕ್ಕೂ ಹೆಚ್ಚು ಎಇಪಿಎಸ್‌ ಪ್ರಕರಣಗಳು ದಾಖಲಾಗಿವೆ.

ಹೀಗಾಗಿ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್‌ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳ ವಿಚಾರಣೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿ ದೇಶದ ಹಲವು ರಾಜ್ಯಗಳಲ್ಲಿ ವಂಚಿಸಿದ್ದಾರೆ.

ಅಲ್ಲದೆ, ರಾಜ್ಯದ ಕಂದಾಯ ಇಲಾಖೆಯ ವೆಬ್‌ಸೈಟ್‌ನಿಂದಲೇ ಬಯೋಮೆಟ್ರಿಕ್‌ ಸೇರಿ ಕೆಲವೊಂದು ಮಾಹಿತಿ ಕಳವು ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ. ಹೀಗಾಗಿ ಸಂಬಂಧಿಸಿದ ಇಲಾಖೆಗೆ ಪತ್ರದ ಮೂಲಕ ಗೌಪ್ಯತೆ ಕಾಪಾಡುವಂತೆ ಮನವಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

ಒಂದು ಫಿಂಗರ್‌ ಪ್ರಿಂಟ್‌ಗೆ 5 ಸಾವಿರಕ್ಕೆ ಮಾರಾಟ:

ಬಿಹಾರ ಮೂಲದ ವಂಚಕರು ಸ್ಥಳೀಯವಾಗಿ ಕಸ್ಟಮರ್‌ ಸರ್ವಿಸ್‌ ಸೆಂಟರ್‌ ಇಟ್ಟುಕೊಂಡಿದ್ದರು. ಬೆರಳಚ್ಚು ಬಳಸಿ ಅಕ್ರಮವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಬಂಧಿತ ಪೈಕಿ ಕೆಲವರು ಸುಲಭವಾಗಿ ಆಧಾರ್‌ ಕಾರ್ಡ್‌ ನಂಬರ್‌ ಹಾಗೂ ಬೆರಳಚ್ಚು ಸಿಗುವ ಕರ್ನಾಟಕ ಸೇರಿ ಬೇರೆ ರಾಜ್ಯ ಸರ್ಕಾರಗಳ ಕಂದಾಯ ಇಲಾಖೆ ವೆಬ್‌ ಸೈಟ್‌ನಿಂದ ಮಾಹಿತಿ ಪಡೆಯುತ್ತಿದ್ದರು. ಈ ಮೂಲಕ ಹಣ ದೋಚುವ ಜತೆಗೆ ಅರೋಪಿಗಳು ವೆಬ್‌ಸೈಟ್‌ನಿಂದ ಫಿಂಗರ್‌ ಪ್ರಿಂಟ್‌ ಪಡೆದು 5 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ.

ಅಲ್ಲದೆ, ಗ್ರಾಹಕರ ಮೊಬೈಲ್‌ ಸಂಖ್ಯೆ, ಇ-ಮೇಲ್‌ ವಿಳಾಸದ ಮೂಲಕ ವೆಬ್‌ಸೈಟ್‌ ಪ್ರವೇಶಿಸುತ್ತಿದ್ದ ಆರೋಪಿಗಳು, ಅದರಲ್ಲಿದ್ದ ಸಾರ್ವಜನಿಕರ ನೋಂದಣಿ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳುತ್ತಿದ್ದರು. ಬಳಿಕ, ಅದರಲ್ಲಿರುವ ಆಧಾರ್‌ ಸಂಖ್ಯೆ, ಬೆರಳಚ್ಚನ್ನು ಫೋಟೋ ಪ್ರಿಂಟ್‌ ಹಾಳೆ ಮೇಲೆ ನಕಲು ಮಾಡಿಕೊಳ್ಳುತ್ತಿದ್ದರು. ಎಇಪಿಎಸ್‌ (ಆಧಾರ್‌ ಎನೆಬಲ್‌ ಪೇಮೆಂಟ್‌ ಸಿಸ್ಟಂ) ಸೌಲಭ್ಯದ ಮೂಲಕ ಬ್ಯಾಂಕ್‌ ಖಾತೆಗಳಿಂದ ಹಣ ವರ್ಗಾ ವಣೆ ಮಾಡಿಕೊಳ್ಳುತ್ತಿದ್ದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next