Advertisement

ಅಡ್ಯಾರು: ನದಿಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

01:00 PM May 31, 2017 | Team Udayavani |

ಮಂಗಳೂರು: ಸ್ನಾನ ಮಾಡಲೆಂದು ನದಿಗೆ ಇಳಿದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ಅಡ್ಯಾರು ಉಳಿಯದ ಕಡವಿನಲ್ಲಿ ಸೋಮವಾರ ಸಂಜೆ ಸಂಭವಿಸಿದೆ.

Advertisement

ಪುದು ಗ್ರಾಮದ ಫರಂಗಿಪೇಟೆ ಕೊಟ್ರಬೆಟ್ಟು ರಾಮಣ್ಣ ಶೆಟ್ಟಿ – ಚಿತ್ರಕಲಾ ದಂಪತಿಯ ಪುತ್ರ ಲಿಖೀತ್‌ರಾಜ್‌ ಶೆಟ್ಟಿ (16) ಹಾಗೂ ಫರಂಗಿಪೇಟೆ ಕುಂಪನಮಜಲು ಭವಾನಿಶಂಕರ್‌ ಶೆಟ್ಟಿ -ಭುವನೇಶ್ವರಿ ದಂಪತಿಯ ಪುತ್ರ ಯಜ್ಞೆàಶ್‌ ಶೆಟ್ಟಿ (16) ಮೃತಪಟ್ಟ ಬಾಲಕರು. ಯಜ್ಞೆàಶ್‌ ಹಾಗೂ ಲಿಖೀತ್‌ರಾಜ್‌ ಸ್ನೇಹಿತರಾಗಿದ್ದು, ಕೆಲವೇ ದಿನಗಳಲ್ಲಿ ಪ್ರಥಮ ಪಿಯುಸಿಗೆ ಸೇರುವವರಿದ್ದರು.

ಆಡಿ ಬರುತ್ತೇವೆ…
ಲಿಖೀತ್‌ರಾಜ್‌ನ ತಂದೆ ರಾಮಣ್ಣ ಶೆಟ್ಟಿ ಅವರಿಗೆ ಫರಂಗಿಪೇಟೆಯಲ್ಲಿ ಜನರಲ್‌ ಸ್ಟೋರ್‌ ಇದ್ದು, ಲಿಖೀತ್‌ ಬಹುತೇಕ ಸಮಯ ಅಲ್ಲಿಯೇ ಇದ್ದು ತಂದೆಗೆ ಸಹಕರಿಸುತ್ತಿದ್ದ. ಸೋಮವಾರವೂ ಸಂಜೆಯವರೆಗೆ ಅಂಗಡಿಯಲ್ಲಿದ್ದ ಆತ ಬಳಿಕ ಮನೆಗೆ ತೆರಳಿದ್ದ. “ಆಟವಾಡಲು ಹೋಗಿ ಬರುತ್ತೇನೆ’ ಎಂದು ಮನೆಯಲ್ಲಿ ಹೇಳಿ ಬೈಕಿನಲ್ಲಿ ಹೊರಟಿದ್ದ. ದಾರಿಮಧ್ಯೆ ಯಜ್ಞೆàಶ್‌ನನ್ನು ಬೈಕಿಗೆ ಹತ್ತಿಸಿಕೊಂಡು ಮನೆಯಿಂದ ಸುಮಾರು 3 ಕಿ.ಮೀ. ದೂರದ ಅಡ್ಯಾರು ನದಿಯ ಉಳಿಯ ಕಡವಿನತ್ತ ಸಂಜೆ 4.30ರ ವೇಳೆಗೆ ತಲುಪಿದ್ದರು. ಇಬ್ಬರ ಮನೆಯು ಫರಂಗಿಪೇಟೆ ವ್ಯಾಪ್ತಿಯಲ್ಲಿ ಅರ್ಧ ಕಿ.ಮೀ. ಅಂತರದಲ್ಲಿದೆ. ಇಬ್ಬರೂ ಆತ್ಮೀಯರಾಗಿದ್ದು, ಆಟವಾಡಲು ಸೇರಿದಂತೆ ಬಹುತೇಕ ಕಾರ್ಯಕ್ರಮಕ್ಕೆ ಜತೆಯಾಗಿ ಹೋಗುತ್ತಿದ್ದರು. ನದಿ ದಡದಲ್ಲಿ ಬೈಕ್‌ ನಿಲ್ಲಿಸಿ, ಬಟ್ಟೆ, ಚಪ್ಪಲು ಹಾಗೂ ಮೊಬೈಲ್‌ಗ‌ಳನ್ನು ಅಲ್ಲಿಟ್ಟು ನೀರಿಗೆ ಇಳಿದಿದ್ದರು. ಮಧ್ಯಾಹ್ನದ ವರೆಗೂ ಸ್ವಲ್ಪ ಪ್ರಮಾಣದಲ್ಲಿ ನೀರಿರುವ ನದಿಯಲ್ಲಿ, ಸಂಜೆಯ ವೇಳೆಗೆ ಸಮುದ್ರದ ಭರತದಿಂದ (ಎರ್ತೆ ನೀರು)ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಇವರು ನೀರಿಗಿಳಿದ ಜಾಗದಲ್ಲಿ ಮರಳುಗಾರಿಕೆ ನಡೆಸಿದ ಹೊಂಡವೂ ಇದ್ದ ಹಿನ್ನೆಲೆಯಲ್ಲಿ ಅಲ್ಲಿ ನೀರು ತುಂಬಿಕೊಂಡಿತ್ತು. ಇದರ ಅರಿವು ಇಲ್ಲದ ಬಾಲಕರು ನೀರಿಗಿಳಿದಿದ್ದಾರೆ. ಹೊಂಡದತ್ತ ತೆರಳಿದ ಬಾಲಕರು ಈಜು ಕೂಡ ಗೊತ್ತಿಲ್ಲದೆ ನೀರಿನಲ್ಲಿ ಮುಳುಗಿರಬಹುದೆನ್ನಲಾಗಿದೆ.

ರಾತ್ರಿಯಾದರೂ ಬರಲಿಲ್ಲ
ಮಕ್ಕಳು ರಾತ್ರಿ ಯಾದರೂ ಮನೆಗೆ ಬಾರದ್ದರಿಂದ ಆತಂಕಿತರಾದ ಪೋಷಕರು ಅವರ ಮೊಬೈಲ್‌ಗೆ ಕರೆ ಮಾಡಿದಾಗ ರಿಂಗ್‌ ಆಗುತ್ತಿತ್ತೇ ಹೊರತು ಯಾರೂ ಕರೆ ಸ್ವೀಕರಿಸುತ್ತಿರಲಿಲ್ಲ. ಮಕ್ಕಳು ಯಾವ ಕಡೆಗೆ ತೆರಳಿದ್ದಾರೆ ಎಂಬುದೂ ಗೊತ್ತಾಗದ ಪೋಷಕರು ಪರಿಸರದಲ್ಲೆಲ್ಲ ಹುಡು ಕಾಡಿದರು.

“ಲಿಖೀತ್‌ ಕೆಲವೊಮ್ಮೆ ನೀರಿನಲ್ಲಿ ಆಡಲು ಹೋಗುತ್ತಾನೆ’ ಎಂಬುದಾಗಿ ಬಗ್ಗೆ ಆತನ ತಮ್ಮ ಅಂಕಿತ್‌ ಹೇಳಿದ ಹಿನ್ನೆಲೆಯಲ್ಲಿ ಮನೆ ಮಂದಿ ರಾತ್ರಿಯೇ ಅಡ್ಯಾರು ಉಳಿಯದ ಸಮೀಪಕ್ಕೆ ಧಾವಿಸಿದರು. ನದಿ ದಡದಲ್ಲಿ ಬೈಕ್‌, ಇಬ್ಬರ ಉಡುಪು, ಪಾದರಕ್ಷೆಗಳು ಕಂಡುಬಂದಿದ್ದರಿಂದ ಅವರು ನೀರಿಗಿಳಿದಿರುವುದು ದೃಢವಾಯಿತು. ಆದರೆ ರಾತ್ರಿಯಿಡೀ ಹುಡುಕಿದರೂ ಪತ್ತೆಯಾಗ ಲಿಲ್ಲ. ಮಂಗಳವಾರ ಮುಂಜಾನೆ ಇಬ್ಬರ ಮೃತದೇಹಗಳೂ ನದಿದಡದಲ್ಲಿ ಪತ್ತೆಯಾದವು.

Advertisement

ಅಂತ್ಯವಿಧಿಗಳನ್ನು ಪೂರೈಸಿದ ಬಳಿಕ ಫರಂಗಿಪೇಟೆ ದೇವಸ್ಥಾನ ಬೆಟ್ಟಿನಲ್ಲಿ ಜತೆಯಾಗಿ ಅಂತ್ಯಕ್ರಿಯೆ ನಡೆಸಲಾಯಿತು. 
ಸಂಸದ ನಳಿನ್‌ ಕುಮಾರ್‌ ಕಟೀಲು ಸೇರಿದಂತೆ ಹಲವು ಗಣ್ಯರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಪ್ರತಿಭಾನ್ವಿತ ಬಾಲಕರು
ಭವಾನಿಶಂಕರ್‌ ಶೆಟ್ಟಿ ದಂಪತಿಗೆ ಯಜ್ಞೆàಶ್‌ ಒಬ್ಬನೇ ಪುತ್ರನಾಗಿದ್ದು, ರಾಮಣ್ಣ ಶೆಟ್ಟಿ ದಂಪತಿಗೆ ಮೂವರು ಮಕ್ಕಳ ಪೈಕಿ ಲಿಖೀತ್‌ ಎರಡನೆಯವನು. ಯಜ್ಞೆàಶ್‌ ಶೈಕ್ಷಣಿಕದ ಜತೆಗೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ. ಹಾಡುಗಾರಿಕೆ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಆತ ತನ್ನನ್ನು ತೊಡಗಿಸಿಕೊಂಡಿದ್ದು, ಇಬ್ಬರೂ ಕೂಡ ವಲಯ ಬಂಟರ ಸಂಘ ಪುದು ಫರಂಗಿಪೇಟೆ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು.

ಯಜ್ಞೆàಶ್‌ ಮಂಗಳೂರಿನ ಬೆಸೆಂಟ್‌ ಪ್ರೌಢ ಶಾಲೆ ಹಾಗೂ ಲಿಖೀತ್‌ರಾಜ್‌ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯಲ್ಲಿ ಈ ಬಾರಿಯಷ್ಟೇ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ್ದು, ಉತ್ತಮ ಅಂಕಗಳನ್ನು ಗಳಿಸಿದ್ದರು. ಯಜ್ಞೆàಶ್‌ ಮಂಗಳೂರಿನ ಶಾರದಾ ಕಾಲೇಜಿಗೆ ಹಾಗೂ ಲಿಖೀತ್‌ರಾಜ್‌ ಆಳ್ವಾಸ್‌ ಶಿಕ್ಷಣ ಸಂಸ್ಥೆಗೆ ಪ್ರಥಮ ಪಿಯುಸಿಗಾಗಿ ಶುಲ್ಕ ಪಾವತಿಸಿ ದಾಖಲಾಗಿದ್ದರು. ಕೆಲವೇ ದಿನದಲ್ಲಿ ಇಬ್ಬರಿಗೂ ಕಾಲೇಜು ಆರಂಭವಾಗಲಿತ್ತು.

ಜೀವಕ್ಕೆ ಎರವಾಯ್ತು 
ಮರಳು ಹೊಂಡ

ನದಿಯಲ್ಲಿ ಮರಳುಗಾರಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಹೊಂಡ ತೆಗೆಯಲಾಗಿದೆ. ಪ್ರಸ್ತುತ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದರೂ ಸಂಜೆ ವೇಳೆಗೆ ಸಮುದ್ರದ ಉಬ್ಬರದಿಂದಾಗಿ ಹೊಂಡಗಳಲ್ಲಿ ನೀರು ತುಂಬಿರುತ್ತದೆ. ಆದರೆ ಇದರ ಪರಿವೆಯೇ ಇಲ್ಲದ ಬಾಲಕರು ನೀರಿಗಿಳಿದು ಮೃತಪಟ್ಟಿದ್ದಾರೆ. ಲಿಖೀತ್‌ ಆಳ್ವಾಸ್‌ ಕಾಲೇಜಿಗೆ ಸೇರುವುದರಿಂದ ಅಲ್ಲಿಯೇ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳುವವನಿದ್ದ. ಆ ಬಳಿಕ ಆಡಲು ಸಮಯ ಸಿಗುವುದಿಲ್ಲ ಎಂದು ಹೇಳಿ, “ಆಡಿ ಬರುತ್ತೇವೆ’ ಎಂದು ಮನೆಯವರಲ್ಲಿ ತಿಳಿಸಿ ಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next