ಮಂಗಳೂರು: ಶಿಕ್ಷಕ ವೃತ್ತಿ ಎಂದರೆ ಸನ್ಯಾಸ ಸ್ವೀಕರಿಸಿದಂತೆ. ಶಿಕ್ಷಕರು ಏನು ಮಾಡುತ್ತಾರೆ ಎಂಬು ದನ್ನು ಸಮಾಜ ನೋಡುತ್ತದೆ. ಶಿಕ್ಷಕರು ಸಮಾಜದಲ್ಲಿ ಗೌರವ ಹಾಗೂ ನಂಬಿಕೆಯ ಸ್ಥಾನಕ್ಕೆ ಅರ್ಹರು. ಶಿಕ್ಷಕರ ಸಹಕಾರದಿಂದ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಭಂಡಾರಿ ಫೌಂಡೇಶನ್ ಮಂಗಳೂರು ಮತ್ತು ಸಹ್ಯಾದ್ರಿ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಜರಗಿದ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುರುಗಳಿಗೆ ವಂದಿಸಲು ಸಿಕ್ಕಿರುವ ಅವಕಾಶ ಜೀವನದಲ್ಲಿ ಮರೆಯ ಲಾಗದ ದಿನ. ಬೆಂಜನಪದವು ಹಳ್ಳಿಗಾಡಿನ ಶಾಲೆಯಾಗಿದ್ದು, ಅಲ್ಲಿ ಓದಿದ ಅನೇಕರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಬೆಂಜನಪದವು ಶಾಲೆ ದತ್ತು ಪಡೆಯಲು ಮಂಜುನಾಥ ಭಂಡಾರಿ ಮುಂದಾಗಿದ್ದು, ನನ್ನ ಸಂಪೂರ್ಣ ಸಹಕಾರವಿದೆ ಎಂದರು.
ಭಂಡಾರಿ ಫೌಂಡೇಷನ್ ಸ್ಥಾಪಕ ಹಾಗೂ ವಿಧಾನ ಪರಿಷತ್ ಸದಸ್ಯ ಡಾ| ಮಂಜುನಾಥ ಭಂಡಾರಿ ಪ್ರಾಸ್ತಾವಿಕ ವಾಗಿ ಮಾತನಾಡಿ, ಶಿಕ್ಷಣದಿಂದ ವಂಚಿತರಾದ ನನ್ನನ್ನು ಶಿಕ್ಷಣದತ್ತ ಆಕರ್ಷಿಸಿದ ಮಾತೃ ಸ್ವರೂಪಿ ಸಹೋದರಿ ಹಾಗೂ ಲೂಸಿ ಟೀಚರ್ ಅವರ ಸಹಕಾರ ಎಂದಿಗೂ ಮರೆಯಲಾರೆ. ಅವರು ಹೊಸ ದಿಸೆಯನ್ನು ತೋರಿದ್ದು, ಅವರ ಮಾರ್ಗದರ್ಶನದಿಂದ ಜೀವನ ಬದಲಾಗಿ ಗುರಿ ಮುಟ್ಟಲು ಸಾಧ್ಯವಾ ಯಿತು. ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆಗೆ ಇಂತಹ ಗುರುಗಳಿದ್ದರೆ ಯಾವುದೇ ಕಠಿನ ಪರಿಸ್ಥಿತಿ ಎದುರಿಸಲು ಸಾಧ್ಯ. ಆದರೆ ಗುರುಗಳ ಕೃಪೆ ಇದ್ದರೆ ಸಾಧನೆ ಸಾಧ್ಯ ಎಂದರು.
ಶಾಸಕ ಉಮಾನಾಥ ಕೋಟ್ಯಾನ್, ಪ್ರಾಂಶುಪಾಲ ಡಾ| ಎಸ್.ಎಸ್. ಇಂಜನಗಿರಿ, ಟ್ರಸ್ಟಿ ದೇವದಾಸ್ ಹೆಗ್ಡೆ ಉಪಸ್ಥಿತರಿದ್ದರು. ಡಾ| ಮಂಜುನಾಥ ಭಂಡಾರಿ ಅವರ ಜೀವನಕ್ಕೆ ದಾರಿ ತೋರಿದ ನಿವೃತ್ತ ಶಿಕ್ಷಕರಾದ ಭಗವಾನ್‌ದಾಸ್, ಅನಂತರಾಮ್ ಹೆರಳೆ, ಲೂಸಿ ಕಾನ್ಸೆಪ್ಟ ಕುವೆಲ್ಲೋ, ಸದಾನಂದ ಪಿ.ಎಚ್., ಮಹಾಬಲ ಆಳ್ವ ಹಾಗೂ ಅಕ್ಕ ಸುಮಾ ಎಂ. ಆಳ್ವ ಅವರನ್ನು ಸಮ್ಮಾನಿಸಲಾಯಿತು.
ಕಾಲೇಜಿನ ಟ್ರಸ್ಟಿ ಜಗನ್ನಾಥ ಚೌಟ ಸ್ವಾಗತಿಸಿದರು. ಅಕ್ಷಯ ಶೆಟ್ಟಿ, ಸ್ಮಿತಾ ಶೆಣೈ ನಿರೂಪಿಸಿದರು.