ಹಲವಾರು ಸಿನಿಮಾಗಳಲ್ಲಿ ಹಾಸ್ಯ ಪಾತ್ರ ಮಾಡುತ್ತಲೇ ಬಹು ಬೇಡಿಕೆ ಹೊಂದಿದ್ದವರು ಶರಣ್. ಯಾರು ಯಾವ ಜಾಡಿನ ನಟನೆಯಲ್ಲಿ ತೊಡಗಿಕೊಂಡಿದ್ದರೂ ಕ್ರಿಯಾಶೀಲತೆ ಎಂಬುದು ಬೇರೆ ಕಡೆ ಹೊರಳಿ ನೋಡುವಂತೆ, ಮತ್ಯಾವುದೋ ಸಾಹಸ ನಡೆಸುವಂತೆ ಪ್ರೇರೇಪಣೆ ನೀಡುತ್ತದೆ.
ಅಂಥಾದ್ದೇ ಪ್ರೇರಣೆಯಿಂದ ನಾಯಕ ನಟನಾಗಿ ಅವತರಿಸಿದ್ದವರು ಶರಣ್. ಹಾಗೆ ನಾಯಕನಾದ ನಂತರದಲ್ಲಿ ಅವರ ಯಶದ ಯಾನ ಅನೂಚಾನವಾಗಿಯೇ ಮುಂದುವರೆದುಕೊಂಡು ಬಂದಿದೆ. ಇದೀಗ ಬಿಡುಗಡೆಗೆ ರೆಡಿಯಾಗಿರೋ ಅಧ್ಯಕ್ಷ ಇನ್ ಅಮೆರಿಕಾ ಅದಕ್ಕೆ ಹೊಸಾ ಆವೇಗ ನೀಡುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರಿನಡಿಯಲ್ಲಿ ಟಿ ಜಿ ವಿಶ್ವಪ್ರಸಾದ್ ನಿರ್ಮಾಣ ಮಾಡಿರೋ ಈ ಚಿತ್ರವನ್ನು ಯೋಗಾನಂದ್ ಮುದ್ದಾನ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಶರಣ್ ವೃತ್ತಿ ಜೀವನದಲ್ಲಿ ಸ್ಪೆಷಲ್ ಆಗಿ ದಾಖಲಾಗುವಂಥಾ ಎಲ್ಲ ಲಕ್ಷಣಗಳನ್ನೂ ಒಳಗೊಂಡಿದೆ. ಕಥೆ, ನಿರೂಪಣೆ ಮತ್ತು ಪಾತ್ರ ಸೇರಿದಂತೆ ಎಲ್ಲದರಲ್ಲಿಯೂ ಹೊಸತನದಿಂದ ಕೂಡಿರುವ ಈ ಚಿತ್ರದಲ್ಲಿ ಶರಣ್ಅ ವರನ್ನು ಈವರೆಗಿನ ಅಷ್ಟೂ ಚಿತ್ರಗಳಿಗಿಂತ ಬೇರೆಯದ್ದೇ ರೀತಿಯಲ್ಲಿ ತೋರಿಸೋ ಪ್ರಯತ್ನಗಳೂ ಧಾರಾಳವಾಗಿಯೇ ನಡೆದಿವೆ.
ಶರಣ್ ಈವರೆಗೂ ನಟಿಸಿರೋ ಪಾತ್ರಗಳು ವೈವಿಧ್ಯಮಯವಾಗಿವೆ. ಆದರೆ ಅವರು ಹೀರೋ ಆಗಿ ನಟಿಸಿರೋ ಸಿನಿಮಾಗಳಲ್ಲಿ ಒಂದು ಸಾಮ್ಯತೆ ಇದ್ದೇ ಇರುತ್ತಿತ್ತು. ಶರಣ್ ಅವರ ಲವ್ ಸ್ಟೋರಿ, ಅದರ ಸುತ್ತಲ ಜಂಜಾಟಗಳೆಲ್ಲವೂ ಇಡೀ ಚಿತ್ರದಾದ್ಯಂತ ಮುಂದುವರೆದು ಕಡೇಗೆ ಕ್ಲೈಮ್ಯಾಕ್ಸಿನಲ್ಲಿ ಮದುವೆ ಮೂಲಕ ಹ್ಯಾಪಿ ಎಂಡಿಂಗ್ ಆಗುತ್ತಿತ್ತು. ಆದರೆ ಇದೇ ಮೊದಲ ಸಲ ಈ ಸಿನಿಮಾದಲ್ಲಿ ಶರಣ್ ಅವರ ಮದುವೆಯೊಂದಿಗೇ ಕಥೆ ತೆರೆದುಕೊಳ್ಳುತ್ತದೆ. ಆ ನಂತರದಲ್ಲಿ ನಾನಾ ದಿಕ್ಕುದೆಸೆಗಳೊಂದಿಗೆ ಅದು ಮುಂದುವರೆಯುತ್ತೆ. ಕೇವಲ ಈ ಮದುವೆ ವಿಚಾರದಲ್ಲಿ ಮಾತ್ರವಲ್ಲದೇ ಶರಣ್ ಅವರ ಪಾತ್ರವೇ ವಿಭಿನ್ನವಾಗಿದೆಯಂತೆ. ಅದರ ಮಜಾ ಏನೆಂಬುದು ಈ ವಾರವೇ ಜಾಹೀರಾಗಲಿದೆ.