ಹೊನ್ನಾಳಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಪಟ್ಟಣದಿಂದ ತಮ್ಮ ಗ್ರಾಮ ಹಿರೇಗೋಣಿಗೆರೆಗೆ ಬಂದು ಕೃಷಿಯತ್ತ ಮುಖ ಮಾಡಿದ ವಕೀಲರೊಬ್ಬರು ಮೂರು ಎಕರೆ ಜಮೀನಿನಲ್ಲಿ ಪಪ್ಪಾಯಿ ಹಣ್ಣು ಬೆಳದು ಸಾವಿರಾರು ರೂ. ಆದಾಯ ಗಳಿಸಿ ಕೃಷಿ ನಂಬಿ ಕೆಲಸ ಮಾಡಿದರೆ ಯಾರೂ ನಷ್ಟ ಅನುಭವಿಸುವುದಿಲ್ಲ ಎಂಬುದನ್ನು ವಕೀಲ ಮಂಜುನಾಥ ಸಾಧಿಸಿ ತೋರಿಸಿದ್ದಾರೆ.
ಕಳೆದ ವರ್ಷ ಲಾಕ್‌ಡೌನ್ ಆಗಿದ್ದರಿಂದ ನ್ಯಾಯಾಲಯದಲ್ಲಿ ಸರಿಯಾದ ಕಲಾಪಗಳು ನಡೆಯದೆ ಇದ್ದುದರಿಂದ ಗ್ರಾಮಕ್ಕೆ ಬಂದ ವಕೀಲ ಮಂಜುನಾಥ ಅವರು ಏಕಕಾಲಕ್ಕೆ 1500 ಪಪ್ಪಾಯಿ ಗಿಡ ಹಾಗೂ 1500 ಅಡಕೆ ಸಸಿ ನೆಟ್ಟು ಅದಕ್ಕೆ ಸಮರ್ಪಕ ಕೃಷಿ ಆರಂಭಿಸಿದರು. ಸಸಿ ನೆಟ್ಟು 9 ತಿಂಗಳಿಗೆ 1500 ಗಿಡಗಳಲ್ಲಿ ಪಪ್ಪಾಯಿ ಕಾಯಿ ಬರಲಾರಂಭಿಸಿತು. ನಂತರ ಕಾಯಿ ಮಾಗಿ ಹಳದಿ ಬಣ್ಣಕ್ಕೆ ತಿರುಗಿ ಹಣ್ಣುಗಳಾದವು. ಹದಿನೈದು ದಿನಗೊಳಿಗೊಮ್ಮೆ 4 ಟನ್‌ನಂತೆ ಒಂದು ತಿಂಗಳಿಗೆ 8 ಟನ್‌ಗೆ ರೂ.80 ಸಾವಿರ ಆದಾಯ ತೆಗೆದರು. ಇದರ ನಡುವೆ ಪಪ್ಪಾಯಿ ಜತೆಯಲ್ಲೇ 1500 ಅಡಿಕೆ ಸಸಿಗಳನ್ನು ಸಹ ನೆಟ್ಟಿದ್ದಾರೆ.
ಸಾವಯವ ಗೊಬ್ಬರ ಬಳಕೆ: ವಕೀಲ ಮಂಜುನಾಥ ಅವರು ಸುಲಭದಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಬಲ್ಲ ಯಾವ ಬೆಳೆ ಬೆಳೆಯಬಹುದು ಎಂಬುದನ್ನು ಕುಟುಂಬದವರ ಜತೆ ಚರ್ಚಿಸಿದಾಗ ಪಪ್ಪಾಯಿ ಬೆಳೆ ಬೆಳೆಯಲು ತೀರ್ಮಾನಿಸಿದರು. ಅದರಂತೆ ಸಾವಯವ ಗೊಬ್ಬರ ಹಾಕಿ ಬೆಳೆಯಬಹುದು ಎಂದು ಸಾವಯವ ಆರ್ಗ್ಯಾನಿಕ್ ಗೊಬ್ಬರ ಹಾಕಿದರೆ ಉತ್ತಮ ಇಳುವರಿ ಪಡೆಯುವುದು ಮತ್ತು ರೈತಮಿತ್ರ ಎರೆಹುಳ ಉತ್ಪಾದನೆ ಆಗುವುದಲ್ಲದೆ ಭೂಮಿ ಫಲವತ್ತೆ ಆಗಲಿದೆ ಎಂದು ಬಗ್ಗೆ ಚರ್ಚಿಸಿದ ನಂತರ ಪಪ್ಪಾಯಿ ಬೆಳದು ಇಂದು ತಿಂಗಳಿಗೆ 80 ಸಾವಿರ ಲಾಭ ಪಡೆಯುತ್ತಿದ್ದಾರೆ.
ಪಪ್ಪಾಯಿ ಹಾಗೂ ಅಡಕ್ಕೆ ಸಸಿ ನೆಡಲು ರೂ.3 ಲಕ್ಷ ಖರ್ಚು ಮಾಡಿದ್ದಾರೆ. ಈಗಾಗಲೆ ರೂ.1.50 ಲಕ್ಷ ಪಪ್ಪಾಯಿಯಲ್ಲಿ ಪಡೆದುಕೊಂಡಿದ್ದಾರೆ. ಇನ್ನೂ ಒಂದುವರೆ ವರ್ಷ ಪಪ್ಪಾಯಿ ಬೆಳೆ ಬೆಳೆಯಲಿದ್ದಾರೆ ಹಾಗೂ ಲಾಭದ ನಿರೀಕ್ಷೆಯಲ್ಲಿದ್ದಾರೆ. ಅಡಿಕೆ ಫಲ ಕೊಡಲು ಕನಿಷ್ಠ 6 ವರ್ಷಗಳು ಬೇಕು ಇದರ ಮಧ್ಯ ಪಪ್ಪಾಯಿ ಬೆಳೆದು ಲಾಬ ಗಳಿಸುವತ್ತ ಮಂಜುನಾಥ ದಾಪುಗಾಲು ಹಾಕಿದ್ದಾರೆ.
ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳೆಯನ್ನು ಬೆಳೆದು ಭೂಮಿಯ ಫಲವತ್ತತೆ ಕಾಪಾಡಿಕೊಳ್ಳುವ ಬಗ್ಗೆ ಸ್ನೇಹಿತರು ಸಾವಯವ ಗೊಬ್ಬರ ಹಾಕುವಂತೆ ಸಲಹೆ ನೀಡಿದ್ದರು. ತಕ್ಷಣನಾನು ಪಪ್ಪಾಯಿ ಗಿಡಗಳನ್ನು ಹಾಕಿ ಸಾವಯವ ಗೊಬ್ಬರ ಹಾಕಿದ್ದರಿಂದ ಹೆಚ್ಚು ಇಳುವರಿ ಫಸಲು ಬಂದಿದೆ. ಇದರಿಂದ ಹೆಚ್ಚು ಲಾಭ ಗಳಿಸಲು ಸಾಧ್ಯವಾಯಿತು.
ಲಾಕ್‌ಡೌನ್ ಎಂದು ನಾನು ಮನೆಯಲ್ಲೇ ಕುಳಿತಿದ್ದರೆ ಲಾಭ ಗಳಿಸುತ್ತಿರಲಿಲ್ಲ. ಭೂಮಿ ಫಲವತ್ತತೆಯನ್ನು ಕಳೆದುಕೊಳ್ಳಬೇಕಾಗಿತ್ತು. ಒಟ್ಟಾರೆ ಕೃಷಿ ನಂಬಿ ಕೆಲಸ ಮಾಡಿದರೆ ಯಾರೂ ಸಹ ನಷ್ಟ ಅನುಭವಿಸುವುದಿಲ್ಲ. ಮಿಶ್ರ ಬೆಳೆ ಬೆಳೆದರೆ ಹೆಚ್ಚು ಲಾಭವಾಗಲಿದೆ.
– ಮಂಜುನಾಥ, ವಕೀಲರು.