ಯಾದಗಿರಿ: ಜಿಲ್ಲಾಡಳಿತ, ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಮೈಲಾಪುರ ಅಗಸಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವ ಯಶಸ್ವಿಗಾಗಿ ಮತದಾನದ ಮಹತ್ವ ಕುರಿತ ಜಾಗೃತಿ ಜಾಥಾಗೆ ಜಿಪಂ ಸಿಇಒ ಡಾ| ಅವಿನಾಶ ಮೆನನ್ ರಾಜೇಂದ್ರನ್ ಚಾಲನೆ ನೀಡಿದರು.
ವಿವಿಧ ಶಾಲಾಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಿತ್ತಿ ಪತ್ರ ಹಿಡಿದು ಮತದಾನದ ಕುರಿತು ಪ್ರಮುಖ ರಸ್ತೆಗಳ
ಮೂಲಕ ಜಾಗೃತಿ ಮೂಡಿಸಿದರು. ಪ್ರತಿಯೊಬ್ಬ ನಾಗರಿಕರಿಗೆ ಮತದಾನದ ಹಕ್ಕು ನೀಡಲಾಗಿದ್ದು, ತಪ್ಪದೆ ಮತ ಚಲಾಯಿಸಿ
ಪ್ರಜಾಪ್ರಭುತ್ವ ಸದೃಢಗೊಳಿಸಿ ಎಂದು ಜಾಥಾದಲ್ಲಿ ತಿಳಿಸಲಾಯಿತು.
ಯುವ ಸಮುದಾಯ ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆಯಿಂದಾಗಿ ಪ್ರಜಾಪ್ರಭುತ್ವದ ಮೌಲ್ಯ ಹೆಚ್ಚಳ ಆಗುತ್ತದೆ. ಆದ್ದರಿಂದ ಯುವ ಸಮುದಾಯ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಹಕ್ಕಿನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಭಾರತ ಹಲವು ಸಂಸ್ಕೃತಿ, ಭಾಷೆಗಳಿದ್ದರೂ ವಿವಿಧತೆಯಲ್ಲಿ ಏಕತೆ ಹೊಂದಿದೆ. ಹೀಗಾಗಿ ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮತದಾನದ ಹಕ್ಕನ್ನು ಕಲ್ಪಿಸಲಾಗಿದೆ. ಮತದಾನದಿಂದ ದೂರ ಉಳಿಯದೆ, ಪ್ರತಿಯೊಬ್ಬರು ಮತದಾನದಲ್ಲಿ ಪಾಲ್ಗೊಂಡು ಮತದಾನದ ಪಾವಿತ್ರ್ಯತೆ ಕಾಪಾಡಬೇಕು ಎಂದು ಜಾಗೃತಿ ಜಾಥಾದಲ್ಲಿ ದ್ಯಾರ್ಥಿಗಳಿಂದ ಘೋಷಣೆ ಕೂಗಿ ಬಂದವು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜ ಗೌವನಳ್ಳಿ, ಜಿಲ್ಲಾ ಯುವಜನ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಸನಗೌಡ ಪಾಟೀಲ ಆಲ್ದಾಳ, ಜಿಲ್ಲಾ ಸಮನ್ವಯ ಅಧಿಕಾರಿ ಚಿತ್ರ ಶೇಖರ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಶಿನ್ನೂರು, ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ನಾಗಪ್ಪ ಬೀರಾಳ ಮುಂತಾದವರು ಜಾಥಾದಲ್ಲಿ ಭಾಗವಹಿಸಿದ್ದರು.