ಭಾಲ್ಕಿ: ಅಕ್ಷರ ದಾಸೋಹ ಯೋಜನೆಯಲ್ಲಿ ಸ್ವತ್ಛತೆಗೆ ಪ್ರಥಮಾದ್ಯತೆ ನೀಡಬೇಕು ಎಂದು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸೂರ್ಯಕಾಂತ ಪಾಟೀಲ ಹೇಳಿದರು.
ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ಬುಧವಾರ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಭಾಲ್ಕಿಯ ಸಂಯುಕ್ತಾಶ್ರಯದಲ್ಲಿ ಜರುಗಿದ ಅಕ್ಷರ ದಾಸೋಹ ಯೋಜನೆಯ ಅಡುಗೆ ಸಿಬ್ಬಂದಿಯವರ 2017-18ನೇ ಸಾಲಿನ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಡುಗೆ ಸಿಬ್ಬಂದಿಯವರು ಸ್ವತ್ಛತೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ಆಹಾರ ಶುಚಿ ಗೊಳಿಸುವುದು, ಮಕ್ಕಳ ವೈಯಕ್ತಿಕ ಸ್ವತ್ಛತೆ, ಅಡುಗೆಕೋಣೆ ಪರಿಶುದ್ಧತೆಗಳ ಬಗ್ಗೆ ಹೆಚ್ಚಿನ ಗಮನ ಕೊಟ್ಟು ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು. ತಮಗೆ ಕೊಡುವ ಗೌರವ ಧನ ಕಡಿಮೆಯಾಗಿದ್ದರೂ ನೀವು ಮಾಡುವ ಕಾರ್ಯ ಮಕ್ಕಳ ಸೇವೆಯಾಗಿದೆ. ಅದಕ್ಕಾಗಿ ಅಡುಗೆ ಸಿಬ್ಬಂದಿಯವರು ಮುತುವರ್ಜಿ ವಹಿಸಿ ಶಾಲಾ ಮಕ್ಕಳ ಸೇವೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಗೊಂಡಪ್ಪ ಎಚ್.ಎಸ್, ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಅಡುಗೆ ಸಿಬ್ಬಂದಿಗೆ ಕೊಡುವ ಉಪಕರಣಗಳನ್ನು ಸಂಪೂರ್ಣವಾಗಿ ಬಳಸುತ್ತಿಲ್ಲ. ಕೈಗೆ ಹ್ಯಾಂಡ್ ಗ್ಲೋಸ್, ತಲೆಗೆ ಹೆಡ್ ಕ್ಯಾಪ್ ಎಲ್ಲವೂ ಯೋಜನೆಯಿಂದ ಸರಬರಾಜು ಆಗುತ್ತಲಿದೆ. ಆದರೆ ಇದುವರೆಗೆ ನಾವು ಭೇಟಿ ನೀಡಿದ ಯಾವ ಶಾಲೆಯ ಅಡುಗೆ ಸಿಬ್ಬಂದಿ ಇವುಗಳನ್ನು ಧರಿಸಿ ಕಾರ್ಯ ನಿರ್ವಹಿಸಿರುವ ಬಗ್ಗೆ ಕಂಡುಬಂದಿಲ್ಲ. ಸರ್ಕಾರದಿಂದ ಕೊಡುವ ಎಲ್ಲ ಉಪಕರಣಗಳನ್ನು ಸಮರ್ಪಕವಾಗಿ ಬಳಸಿ ಅಕ್ಷರ ದಾಸೋಹ ಯೋಜನೆಯನ್ನು ಉತ್ತಮ ಗೊಳಿಸುವುದು ಅಡುಗೆ ಸಿಬ್ಬಂದಿಯವರ ಮೇಲಿದೆ ಎಂದು ಹೇಳಿದರು.
ಇದೇ ವೇಳೆ ಅಡುಗೆ ಸಿಬ್ಬಂದಿಗೆ ಆರೋಗ್ಯ ಇಲಾಖೆ, ಅಗ್ನಿಶಾಮಕ ಠಾಣೆ ಮತ್ತು ಭಾರತ್ ಗ್ಯಾಸ್‌ನ ಸೋನಾ ಎಂಟರ್ ಪ್ರಸೆಸ್ ಸಿಬ್ಬಂದಿ ಸ್ವತ್ಛತೆ ಮತ್ತು ರಕ್ಷಣೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಪ್ರೊಜೆಕ್ಟರ್ ಮೂಲಕ ಅಕ್ಷರ ದಾಸೋಹ ಯೋಜನೆ ಸದ್ಬಳಕೆ ಕುರಿತು ಮಾಹಿತಿ ನೀಡಲಾಯಿತು.
ಕಲವಾಡಿ, ವರವಟ್ಟಿ, ಕಣಜಿ, ಖಟಕಚಿಂಚೋಳಿ, ಹಾಲಹಳ್ಳಿ, ಮೊರಂಬಿ ವಲಯಗಳ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯಗುರುಗಳು ಮತ್ತು ಅಕ್ಷರ ದಾಸೋಹ ಅಡುಗೆ ಸಿಬ್ಬಂದಿ ಇದ್ದರು. ಸ್ಥಳೀಯ ಶಾಲೆ ಮುಖ್ಯಗುರು ಮನೋಹರ ಮೇತ್ರೆ, ಆರ್‌ಬಿಎಸ್‌ಕೆಯ ಡಾ| ಕಪೀಲ ರೆಡ್ಡಿ, ಡಾ| ಸ್ವಾತಿ ಪಾಟೀಲ, ಅಗ್ನಿಶಾಮಕ ಠಾಣಾಧಿಕಾರಿ ಶಿವರಾಜ ಆಲೂರೆ, ಸಿಆರ್‌ಪಿ ಸುಭಾಷ ಹುಲಸೂರೆ, ಸಂತೋಷ ನಾಡೆ, ವಿಜಯಕುಮಾರ, ನಿರಂಕಾರ ಗಾಯಕವಾಡ, ಮಹಾದೇವ ಸಜ್ಜನ್ ಇದ್ದರು. ಮುಖ್ಯಗುರು ಧರ್ಮಣ್ಣಾ ನೀಲಗಲ್ ಸ್ವಾಗತಿಸಿದರು. ಇಸಿಒ ನಾಗಭೂಷಣ ಮಾಮಡಿ ನಿರೂಪಿಸಿದರು. ಶಿಕ್ಷಕ ಜಯರಾಜ ದಾಬಶೆಟ್ಟಿ ವಂದಿಸಿದರು.